ಮಡಿಕೇರಿ, ಜು. ೧೩: ಕಳೆದ ಕೆಲ ದಿನಗಳಿಂದ ಒಂದಷ್ಟು ಕಡಿಮೆಯಂತಿದ್ದ ಮಳೆ ಶುಕ್ರವಾರ ಅಪರಾಹ್ನದ ಬಳಿಕ ಜಿಲ್ಲೆಯಾದ್ಯಂತ ಒಂದಷ್ಟು ರಭಸ ತೋರಿದೆ. ಅಪರಾಹ್ನದ ತನಕ ಇಳಿಮುಖವಾದಂತಿದ್ದ ಮಳೆ ಬಳಿಕ ತನ್ನ ಅಬ್ಬರ ತೋರಿದ್ದು ರಾತ್ರಿಯೂ ಸುರಿದಿದೆ. ಜಿಲ್ಲಾ ಕೇಂದ್ರ ಮಡಿಕೇರಿಯೂ ಸೇರಿದಂತೆ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಬಿರುಸಿನ ಮಳೆಯಾಗಿದೆ. ಶನಿವಾರ ಬೆಳಿಗ್ಗೆಯಿಂದ ಮಳೆ ಕಡಿಮೆಯಾಗಿತ್ತಾದರೂ ಮಳೆಗಾಲದ ಸನ್ನಿವೇಶ ಮುಂದುವರಿದಿದೆ.
ಕಳೆದ ೨೪ ಗಂಟೆಗಳಲ್ಲಿ ಜಿಲ್ಲೆಯಲ್ಲಿ ಸರಾಸರಿ ೨.೦೨ ಇಂಚಿನಷ್ಟು ಮಳೆಯಾಗಿದೆ. ಮಡಿಕೇರಿ ತಾಲೂಕಿನಲ್ಲಿ ೩.೫೫ ಇಂಚು, ವೀರಾಜಪೇಟೆ ೨.೪೧, ಪೊನ್ನಂಪೇಟೆ ೧.೨೩, ಸೋಮವಾರಪೇಟೆ ೧.೬೯ ಹಾಗೂ ಕುಶಾಲನಗರ ತಾಲೂಕಿನಲ್ಲಿ ೧.೨೩ ಇಂಚು ಸರಾಸರಿ ಮಳೆಯಾಗಿದೆ. ಕಳೆದ ೨೪ ಗಂಟೆಗಳ ಅವಧಿಯಲ್ಲಿ ಭಾಗಮಂಡಲ ಹೋಬಳಿಯಲ್ಲಿ ಹೆಚ್ಚಿನ ಮಳೆಯಾಗಿದೆ. ಇಲ್ಲಿ ೫.೦೯ ಇಂಚುಗಳಷ್ಟು ಭಾರೀ ಮಳೆ ಸುರಿದಿದೆ. ಮಡಿಕೇರಿ ಕಸಬಾದಲ್ಲಿ ೨.೩೧, ನಾಪೋಕ್ಲು ೩.೨೦, ಸಂಪಾಜೆ ೩.೬೦, ವೀರಾಜಪೇಟೆ ಕಸಾಬ ೨.೩೪, ಅಮ್ಮತ್ತಿ ೨.೪೮, ಪೊನ್ನಂಪೇಟೆ ೧.೬೮, ಹುದಿಕೇರಿ ೧.೦೬, ೩ಆರನೇ ಪುಟಕ್ಕೆ
(ಮೊದಲ ಪುಟದಿಂದ) ಶ್ರೀಮಂಗಲ ೧.೪೪, ಬಾಳೆಲೆ ಹೋಬಳಿಯಲ್ಲಿ ೦.೮೦ ಇಂಚು ಮಳೆಯಾಗಿದೆ. ಸೋಮವಾರಪೇಟೆ ಕಸಾಬ ೧.೩೨, ಶನಿವಾರಸಂತೆ ೧.೧೦, ಶಾಂತಳ್ಳಿ ೨.೮೪, ಕೊಡ್ಲಿಪೇಟೆ ೧.೫೨, ಸುಂಟಿಕೊಪ್ಪ ೧.೫೨ ಹಾಗೂ ಕುಶಾಲನಗರ ಹೋಬಳಿಯಲ್ಲಿ ೦.೯೪ ಇಂಚು ಮಳೆ ದಾಖಲಾಗಿದೆ.
ಪರಕಟಗೇರಿಯಲ್ಲಿ ರಸ್ತೆಗುರುಳಿದ ಭಾರೀ ಮರ
ಬಿರುನಾಣಿ ಗ್ರಾ.ಪಂ. ವ್ಯಾಪ್ತಿಯ ಪರಕಟಗೇರಿ ಗ್ರಾಮದಲ್ಲಿ ಭಾರೀ ಮರವೊಂದು ಲೋಕೋಪಯೋಗಿ ಇಲಾಖಾ ಅಧೀನದ ರಸ್ತೆಗೆ ಅಡ್ಡಲಾಗಿ ಬಿದ್ದು ಸಂಚಾರ ಸ್ಥಗಿತಗೊಂಡಿತ್ತು. ಬೃಹತ್ ಮರ ಇದಾಗಿದ್ದರಿಂದ ಬಸ್-ವಾಹನ ಸಂಚಾರಕ್ಕೆ ಅಡಚಣೆಯಾಗಿತ್ತು. ಇದನ್ನು ಪರಕಟಗೇರಿ ಗ್ರಾ.ಪಂ. ಸದಸ್ಯ ಅಣ್ಣಳಮಾಡ ರಾಯ್ ಚಿಣ್ಣಪ್ಪ ನೇತೃತ್ವದಲ್ಲಿ ಸ್ಥಳೀಯರು ಹಾಗೂ ಪೊನ್ನಂಪೇಟೆ ಅರಣ್ಯ ಇಲಾಖಾ ಫಾರೆಸ್ಟರ್ ಗುರುನಾಥ್ ಹಾಗೂ ಸಿಬ್ಬಂದಿಗಳ ಸಹಕಾರದೊಂದಿಗೆ ತೆರವುಗೊಳಿಸಲಾಯಿತು.