ಸೋಮವಾರಪೇಟೆ, ಜು. ೧೩: ಕಳೆದ ೪ ವರ್ಷಗಳ ಹಿಂದೆ ದಾಂಪತ್ಯದಲ್ಲಿ ವಿರಸ ಉಂಟಾಗಿ ಬೇರ್ಪಟ್ಟಿದ್ದ ಸತಿ-ಪತಿಗಳು ಇಂದು ಲೋಕ ಅದಾಲತ್ ಮೂಲಕ ನ್ಯಾಯಾಲಯದಲ್ಲಿ ಮತ್ತೆ ಒಂದಾದ ಅಪರೂಪದ ಘಟನೆಗೆ ಸೋಮವಾರಪೇಟೆ ನ್ಯಾಯಾಲಯ ಸಾಕ್ಷಿಯಾಯಿತು.
ದಾಂಪತ್ಯದಲ್ಲಿ ವಿರಸ ಏರ್ಪಟ್ಟು ೪ ವರ್ಷಗಳ ಕಾಲ ಪ್ರತ್ಯೇಕವಾಗಿ ಜೀವನ ನಡೆಸುತ್ತಿದ್ದ ಪತಿ-ಪತ್ನಿ, ಸೋಮವಾರಪೇಟೆ ನ್ಯಾಯಾಲಯದ ನ್ಯಾಯಾಧೀಶರಾದ ಶುಭಾ ಅವರ ಮಾರ್ಗದರ್ಶನ ಹಾಗೂ ಕಾನೂನು ತಿಳುವಳಿಕೆಯ ಮೂಲಕ ಮತ್ತೆ ಒಂದಾಗಿದ್ದು, ನ್ಯಾಯಾಲಯದಲ್ಲಿ ಹಾರ ಬದಲಿಸಿಕೊಳ್ಳುವ ಮೂಲಕ ಮತ್ತೆ ಗಂಡ-ಹೆAಡತಿಯಾಗಿದ್ದಾರೆ.
ಮತ್ತೆಂದೂ ಬೇರ್ಪಡದೇ ಅನ್ಯೋನ್ಯವಾಗಿ ಜೀವನ ನಡೆಸುವಂತೆ ಅದಾಲತ್ನಲ್ಲಿದ್ದ ನ್ಯಾಯಾಧೀಶರ ಸಹಿತ ವಕೀಲರುಗಳು, ನ್ಯಾಯಾಲಯ ಸಿಬ್ಬಂದಿಗಳು ಹರಸುವ ಮೂಲಕ ಮುರಿದು ಬಿದ್ದಿದ್ದ ಸಂಬAಧವನ್ನು ಮತ್ತೆ ಒಂದುಗೂಡಿಸಿದ್ದಾರೆ.
ಕಾಜೂರು-ಐಗೂರು ಗ್ರಾಮದ ರವಿ ಹಾಗೂ ಲತಾ ಅವರುಗಳು ಕಳೆದ ೧೧ ವರ್ಷಗಳ ಹಿಂದೆ ವಿವಾಹವಾಗಿದ್ದು, ದಂಪತಿಗಳಿಗೆ ೧೦ ವರ್ಷ ಪ್ರಾಯದ ಪುತ್ರಿ ಹಾಗೂ ೭ ವರ್ಷ ಪ್ರಾಯದ ಪುತ್ರನಿದ್ದಾನೆ. ಕಳೆದ ೪ ವರ್ಷಗಳ ಹಿಂದೆ ದಾಂಪತ್ಯದಲ್ಲಿ ವಿರಸ ಉಂಟಾಗಿದ್ದು, ಪತ್ನಿ ಲತಾ ಅವರು ವಿವಾಹ ವಿಚ್ಚೇದನಕ್ಕೆ ಸೋಮವಾರಪೇಟೆ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ಈ ದಾವೆಯನ್ನು ವಕೀಲ ಕೆ.ಎಸ್. ಪದ್ಮನಾಭ್ ಮುನ್ನಡೆಸುತ್ತಿದ್ದರು.
ತನ್ನ ಮೇಲೆ ದೂರು ದಾಖಲಾದ ಹಿನ್ನೆಲೆ ಕೋರ್ಟ್ನಲ್ಲಿ ಮುಂದುವರೆಯಲು ಪತಿ ರವಿ ಅವರು ವಕೀಲ ಮನೋಹರ್ ಅವರ ಮೂಲಕ ಪ್ರತಿವಾದ ಆರಂಭಿಸಿದ್ದರು. ಸತತ ೪ ವರ್ಷಗಳ ಕಾಲ ನ್ಯಾಯಾಲಯದ ಮೆಟ್ಟಿಲೇರಿ ಇಳಿಯುತ್ತಿದ್ದ ಪತಿ-ಪತ್ನಿ, ಅಂತಿಮವಾಗಿ ಒಂದಾಗಲು ಮನಸ್ಸು ಮಾಡಿದರು.
ಈರ್ವರನ್ನೂ ಒಂದುಗೂಡಿಸಲು ವಕೀಲರುಗಳಾದ ಪದ್ಮನಾಭ್ ಹಾಗೂ ಮನೋಹರ್ ಅವರುಗಳು ಶ್ರಮವಹಿಸಿದ್ದು, ಅಂತಿಮವಾಗಿ ಇಂದು ನ್ಯಾಯಾಲಯದಲ್ಲಿ ಆಯೋಜನೆಗೊಂಡಿದ್ದ ಲೋಕ ಅದಾಲತ್ನಲ್ಲಿ ಹಾರ ಬದಲಿಸಿಕೊಳ್ಳುವ ಮೂಲಕ ಹಳೆಯ ವಿರಸ ಮರೆತು ಮತ್ತೆ ಒಂದಾದರು. ನ್ಯಾಯಾಧೀಶರಾದ ಶುಭ ಅವರು ಹೂವಿನ ಹಾರವನ್ನು ತರಿಸಿ, ಈರ್ವರ ಕೈಗಿತ್ತು, ಬದಲಿಸಿಕೊಳ್ಳುವಂತೆ ಸೂಚಿಸಿ, ನಗುಮೊಗದಿಂದ ಮುಂದಿನ ದಾಂಪತ್ಯಕ್ಕೆ ಒಳಿತಾಗಲೆಂದು ಹರಸಿದರು.
ದಾಂಪತ್ಯದಲ್ಲಿ ವಿರಸ ಉಂಟಾದ ನಂತರ ಪತ್ನಿ ಲತಾ ಅವರು ತನ್ನ ಮಗನೊಂದಿಗೆ ಪಟ್ಟಣದಲ್ಲಿ ಬಾಡಿಗೆ ಮನೆ ಮಾಡಿಕೊಂಡು, ಟೈಲರ್ ವೃತ್ತಿ ಮೂಲಕ ಬದುಕು ನಡೆಸುತ್ತಿದ್ದರು. ಅತ್ತ ಪತಿ ರವಿ ಅವರು ಕಾಜೂರಿನ ಮನೆಯಲ್ಲಿ ಮಗಳೊಂದಿಗೆ ಜೀವನ ನಡೆಸುತ್ತಿದ್ದರು. ದಂಪತಿಗಳ ಬದುಕು ಮುರಿಯುವ ಮನಸ್ಸು ಮಾಡದ ವಕೀಲರುಗಳು ಈರ್ವರನ್ನೂ ಒಂದಾಗಿಸಲು ಪ್ರಯತ್ನಿಸುತ್ತಿದ್ದರು.
ಅದರಂತೆ ಕೌನ್ಸಿಲಿಂಗ್ ಮಾಡಿ, ಅಂತಿಮವಾಗಿ ೧೧ ವರ್ಷಗಳ ಹಿಂದೆ ಮದುವೆಯಾಗಿ, ೪ ವರ್ಷಗಳ ಹಿಂದೆ ಬೇರ್ಪಟ್ಟಿದ್ದ ಗಂಡ ಹೆಂಡತಿಯನ್ನು ಒಂದುಗೂಡಿಸಿದರು. ಇದರೊಂದಿಗೆ ೧೦ ವರ್ಷದ ಹುಡುಗಿ, ೭ ವರ್ಷದ ಹುಡುಗನಿಗೆ ಮತ್ತೆ ಅಪ್ಪ-ಅಮ್ಮನ ಜೊತೆಗೆ ಬಾಂಧವ್ಯದ ಜೀವನ ಲಭಿಸುವಂತೆ ಮಾಡಿದರು. ಇದಕ್ಕೆ ಮಹತ್ವದ ಪಾತ್ರವನ್ನು ನ್ಯಾಯಾಧೀಶರಾದ ಶುಭಾ ಅವರು ವಹಿಸಿದ್ದರು. ಅದಾಲತ್ನಲ್ಲಿ ಏರ್ಪಟ್ಟ ಈ ‘ಶುಭ’ ಸಮಯದಲ್ಲಿ ನ್ಯಾಯಾಧೀಶರ ಮೊಗದಲ್ಲಿ ಮೂಡಿದ ಸಾರ್ಥಕ ಭಾವ ನಿಜಕ್ಕೂ ‘ಶುಭ’ ಘಳಿಗೆಯೇ ಆಗಿತ್ತು!
- ವಿಜಯ್ ಹಾನಗಲ್