೪೬ ವರ್ಷಗಳ ಬಳಿಕ ತೆರೆದ ಪುರಿ ಜಗನ್ನಾಥ ದೇವಾಲಯದ ರತ್ನ ಭಂಡಾರ

ಭುವನೇಶ್ವರ, ಜು. ೧೪: ಒಡಿಶಾದ ಪುರಿ ಜಗನ್ನಾಥ ದೇವಾಲಯದ ‘ರತ್ನ ಭಂಡಾರ’ವನ್ನು ೪೬ ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ತೆರೆಯಲಾಗಿದೆ. ಪುರಿ ಜಗನ್ನಾಥ ದೇಗುಲದಲ್ಲಿರುವ ರತ್ನ ಭಂಡಾರದಲ್ಲಿರುವ ಬೆಲೆಬಾಳುವ ವಸ್ತುಗಳ ಡಿಜಿಟಲ್ ಕ್ಯಾಟಲಾಗ್ ಅನ್ನು ಸಿದ್ಧಪಡಿಸಲು ಸರ್ಕಾರ ನಿರ್ಧರಿಸಿದ್ದು, ಅದು ಅವುಗಳ ತೂಕ ಮತ್ತು ತಯಾರಿಕೆಯ ವಿವರಗಳನ್ನು ಹೊಂದಿರುತ್ತದೆ. ಅಲ್ಲದೆ ರತ್ನ ಭಂಡಾರ ದೀರ್ಘಕಾಲದಿಂದ ಮುಚ್ಚಿದ್ದರಿಂದ, ದುರಸ್ತಿ ಮಾಡುವ ಉದ್ದೇಶಕ್ಕಾಗಿ ಇಂದು ತೆರೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಉದ್ದೇಶಕ್ಕಾಗಿ ರಾಜ್ಯ ಸರ್ಕಾರ ರಚಿಸಿದ್ದ ಸಮಿತಿಯ ಸದಸ್ಯರು ಮಧ್ಯಾಹ್ನ ೧೨ ಗಂಟೆ ಸುಮಾರಿಗೆ ದೇವಸ್ಥಾನಕ್ಕೆ ಪ್ರವೇಶಿಸಿ, ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದ ಬಳಿಕ ಭಂಡಾರವನ್ನು ತೆರೆಯಲಾಯಿತು ಎಂದು ಅವರು ಹೇಳಿದ್ದಾರೆ. ಭಂಡಾರವನ್ನು ತೆರೆದಾಗ ಒರಿಸ್ಸಾ ಹೈಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಬಿಸ್ವನಾಥ್ ರಾತ್, ಜಗನ್ನಾಥ ದೇವಸ್ಥಾನದ ಆಡಳಿತ ಮಂಡಳಿಯ (ಎಸ್‌ಜೆಟಿಎ) ಮುಖ್ಯ ಆಡಳಿತಾಧಿಕಾರಿ ಅರವಿಂದ ಪಾಧಿ, ಎಎಸ್‌ಐ ಸೂಪರಿಂಟೆAಡೆAಟ್ ಡಿ.ಬಿ ಗಡನಾಯಕ್ ಮತ್ತು ಪುರಿಯ ಪಟ್ಟದ ರಾಜ ಗಜಪತಿ ಮಹಾರಾಜನ ಪ್ರತಿನಿಧಿ ಸೇರಿದಂತೆ ೧೧ ಜನರಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಭು ಜಗನ್ನಾಥರ ಇಚ್ಛೆಯಂತೆ, ಒಡಿಶಾ ಅಸ್ಮಿತೆಯೊಂದಿಗೆ ಒಡಿಯಾ ಸಮುದಾಯವು ಮುನ್ನಡೆಯುವ ಪ್ರಯತ್ನವನ್ನು ಆರಂಭಿಸಿದೆ. ಜಗನ್ನಾಥ ದೇಗುಲದ ನಾಲ್ಕು ದ್ವಾರಗಳನ್ನು ತೆರೆಯಲಾಯಿತು. ಇಂದು ನಿಮ್ಮ ಇಚ್ಛೆಯ ಮೇರೆಗೆ ೪೬ ವರ್ಷಗಳ ನಂತರ ಒಂದು ಮಹತ್ತರ ಉದ್ದೇಶಕ್ಕಾಗಿ ರತ್ನ ಭಂಡಾರವನ್ನು ತೆರೆಯಲಾಯಿತು ಎಂದು ಮುಖ್ಯಮಂತ್ರಿ ಕಚೇರಿ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದೆ.

ಅಸ್ಸಾಂನಲ್ಲಿ ರೂ. ೧೭.೫ ಕೋಟಿ ಮೌಲ್ಯದ ಹೆರಾಯಿನ್ ಜಪ್ತಿ

ಗೋಲಾಘಾಟ್, ಜು. ೧೪: ಅಸ್ಸಾಂನ ವಿವಿಧ ಭಾಗಗಳಲ್ಲಿ ಸುಮಾರು ೧೭.೫ ಕೋಟಿ ರೂಪಾಯಿ ಮೌಲ್ಯದ ಹೆರಾಯಿನ್ ವಶಪಡಿಸಿಕೊಳ್ಳಲಾಗಿದೆ ಮತ್ತು ನಾಲ್ವರು ಪೆಡ್ಲರ್‌ಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ. ಗೋಲಾಘಾಟ್ ಜಿಲ್ಲೆಯ ಎರಡು ವಿಭಿನ್ನ ಸ್ಥಳಗಳಲ್ಲಿ ೧.೭೩ ಕೆ.ಜಿ. ಹೆರಾಯಿನ್ ವಶಪಡಿಸಿಕೊಳ್ಳಲಾಗಿದೆ ಎಂದು ಅಸ್ಸಾಂ ಪೊಲೀಸ್ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಪ್ರಣಬ್ ಜ್ಯೋತಿ ಗೋಸ್ವಾಮಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ವಿಶೇಷ ಕಾರ್ಯಪಡೆ ತಂಡ, ಉರಿಯಮ್‌ಘಾಟ್ ಪೊಲೀಸ್ ಠಾಣಾ ವ್ಯಾಪ್ತಿಯ ರಾಜಪುಕುರಿ ಪ್ರದೇಶದ ಮನೆಯೊಂದರ ಮೇಲೆ ಭಾನುವಾರ ದಾಳಿ ನಡೆಸಿತು ಎಂದು ಅವರು ಹೇಳಿದ್ದಾರೆ. ೧೩ ಗ್ರಾಂ. ಹೆರಾಯಿನ್ ಹೊಂದಿರುವ ಸೋಪ್ ಬಾಕ್ಸ್ ಅನ್ನು ವಶಪಡಿಸಿಕೊಳ್ಳಲಾಗಿದೆ ಮತ್ತು ಮನೆಯಲ್ಲಿದ್ದ ಇಬ್ಬರನ್ನು ಬಂಧಿಸಲಾಗಿದೆ ಎಂದು ಗೋಸ್ವಾಮಿ ತಿಳಿಸಿದ್ದಾರೆ. ವಿಚಾರಣೆಯ ಸಮಯದಲ್ಲಿ, ಬಂಧಿತ ಇಬ್ಬರು ವ್ಯಕ್ತಿಗಳು ಹತ್ತಿರದ ತಮ್ಮ ಸಹೋದರಿಯ ಮನೆಯಲ್ಲಿ ಹೆಚ್ಚಿನ ಹೆರಾಯಿನ್ ಅನ್ನು ಬಚ್ಚಿಟ್ಟಿರುವುದಾಗಿ ತಿಳಿಸಿದ್ದಾರೆ.

ಅಪಾಯದಲ್ಲಿ ಕೇಜ್ರಿವಾಲ್ ಆರೋಗ್ಯ

ನವದೆಹಲಿ, ಜು. ೧೪: ನ್ಯಾಯಾಂಗ ಬಂಧನದಲ್ಲಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಆರೋಗ್ಯ ಅಪಾಯದಲ್ಲಿದೆ ಎಂದು ಆಮ್ ಆದ್ಮಿ ಪಕ್ಷ ಭಾನುವಾರ ಆರೋಪಿಸಿದೆ. ರಾಷ್ಟ್ರ ರಾಜಧಾನಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕ್ಯಾಬಿನೆಟ್ ಸಚಿವ ಅತಿಶಿ, ತೀವ್ರ ಮಧುಮೇಹ ಇರುವ ಕೇಜ್ರಿವಾಲ್ ಅವರ ದೇಹದ ಸಕ್ಕರೆ ಮಟ್ಟ ತೀವ್ರ ತರವಾಗಿ ಕಡಿಮೆಯಾಗಿದೆ ಎಂದರು. ಸುಳ್ಳು ಪ್ರಕರಣದಲ್ಲಿ ಕೇಜ್ರಿವಾಲ್ ಅವರನ್ನು ಜೈಲಿಗೆ ಹಾಕಲು ಬಿಜೆಪಿ ಸಂಚು ರೂಪಿಸಿದೆ. ಅವರ ಆರೋಗ್ಯ ಅಪಾಯದಲ್ಲಿದೆ. ೮.೫ ಕೆ.ಜಿ. ತೂಕವನ್ನು ಅವರು ಕಳೆದುಕೊಂಡಿದ್ದು, ಐದು ಬಾರಿ ಅವರ ದೇಹದ ಸಕ್ಕರೆ ಮಟ್ಟ ೫೦ಕ್ಕಿಂತಲೂ ಕಡಿಮೆಯಾಗಿದೆ. ಇದು ವಿಶೇಷವಾಗಿ ಮಧುಮೇಹಿಗಳಿಗೆ ಆತಂಕಕಾರಿ ಪರಿಸ್ಥಿತಿಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು. ಒಂದು ವೇಳೆ ಕೇಜ್ರಿವಾಲ್ ಪಾರ್ಶ್ವವಾಯುವಿಗೆ ಒಳಗಾದರೆ, ಮೆದುಳು ಹಾನಿ, ಶಾಶ್ವತ ಹಾನಿಯಾದರೇ ಯಾರು ಜವಾಬ್ದಾರರು ಎಂದು ಪ್ರಶ್ನಿಸಿದ ಅವರು, ಅವರು ಜೈಲಿನಲ್ಲಿರುವುದರಿಂದ ಸರಿಯಾಗಿ ಚಿಕಿತ್ಸೆ ಪಡೆಯಲು ಸಾಧ್ಯವಾಗುತ್ತಿಲ್ಲ. ಈ ವಿಷಯದ ಬಗ್ಗೆ ತಮ್ಮ ವಕೀಲರು ಮತ್ತು ವೈದ್ಯರೊಂದಿಗೆ ಸಮಾಲೋಚಿಸಲಾಗುತ್ತಿದೆ ಎಂದು ಅವರು ತಿಳಿಸಿದರು. ಅರವಿಂದ್ ಕೇಜ್ರಿವಾಲ್ ಅವರಿಗೆ ಏನಾದರೂ ಸಂಭವಿಸಿದರೆ, ದೇಶ ಮಾತ್ರವಲ್ಲ, ದೇವರು ಕೂಡ ಅವರನ್ನು ಕ್ಷಮಿಸುವುದಿಲ್ಲ ಎಂಬುದನ್ನು ಬಿಜೆಪಿ ಅರಿಯಬೇಕು ಎಂದು ಅವರು ವಾಗ್ದಾಳಿ ನಡೆಸಿದರು.

ಮಧ್ಯಪ್ರದೇಶದ ೫೫ ಜಿಲ್ಲೆಗಳಲ್ಲಿ ಪಿಎಂ ಕಾಲೇಜ್ ಆಫ್ ಎಕ್ಸಲೆನ್ಸ್ ಉದ್ಘಾಟನೆ

ಇಂದೋರ್, ಜು. ೧೪: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಭಾನುವಾರ ಮಧ್ಯಪ್ರದೇಶದ ಎಲ್ಲಾ ೫೫ ಜಿಲ್ಲೆಗಳಲ್ಲಿ ಪ್ರಧಾನ ಮಂತ್ರಿ ಕಾಲೇಜ್ ಆಫ್ ಎಕ್ಸಲೆನ್ಸ್ ಅನ್ನು ವರ್ಚುವಲ್ ಮೂಲಕ ಉದ್ಘಾಟಿಸಿದರು. ೨೦೪೭ ರ ವೇಳೆಗೆ ಭಾರತ ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡುವ ಗುರಿಯ ನಡುವೆ ಹೊಸ ಶಿಕ್ಷಣ ನೀತಿಯನ್ನು ಜಾರಿಗೆ ತರುವಲ್ಲಿ ನರೇಂದ್ರ ಮೋದಿಯವರ ದೂರದೃಷ್ಟಿಯನ್ನು ಶ್ಲಾಘಿಸಿದರು. ಇಂದು ಇಂದೋರ್‌ನ ಅಟಲ್ ಬಿಹಾರಿ ವಾಜಪೇಯಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ೫೫ ಪಿಎಂ ಕಾಲೇಜ್ ಆಫ್ ಎಕ್ಸಲೆನ್ಸ್ ಉದ್ಘಾಟಿಸಿ ಮಾತನಾಡಿದ ಅಮಿ ಶಾ, ಇತರ ರಾಜ್ಯಗಳಿಗಿಂತ ಮೊದಲು ಎನ್‌ಇಪಿಯನ್ನು ಜಾರಿಗೆ ತಂದಿರುವ ಮಧ್ಯ ಪ್ರದೇಶವನ್ನು ಶ್ಲಾಘಿಸಿದರು. ೨೦೪೭ರಲ್ಲಿ ದೇಶವು ೧೦೦ ವರ್ಷಗಳ ಸ್ವಾತಂತ್ರ‍್ಯವನ್ನು ಆಚರಿಸಲಿದ್ದು, ಈ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟçವನ್ನಾಗಿ ಮಾಡುವ ಗುರಿಯನ್ನು ಪ್ರಧಾನಿ ನರೇಂದ್ರ ಮೋದಿ ಹೊಂದಿದ್ದಾರೆ. ಎನ್‌ಇಪಿ ಅದರಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದರು. ನಮ್ಮ ವಿದ್ಯಾರ್ಥಿಗಳನ್ನು ವಿಶ್ವದ ಜನರೊಂದಿಗೆ ಸಮನಾಗಿ ನಿಲ್ಲುವಂತೆ ಮಾಡುತ್ತದೆ ಮತ್ತು ದೇಶದ ಸಂಸ್ಕೃತಿಯನ್ನು ಒಂದುಗೂಡಿಸುತ್ತದೆ. ಇದು ಗುಣಮಟ್ಟದ ಮೇಲೆ ಕೇಂದ್ರೀಕೃತವಾಗಿದೆ ಎಂದು ಅಮಿತ್ ಶಾ ಹೇಳಿದರು.