ಮಡಿಕೇರಿ, ಜು. ೧೪: ಮುಂಗಾರು ಆರಂಭದ ಬಳಿಕ ಜಿಲ್ಲೆಯಲ್ಲಿ ಒಂದೆರಡು ದಿನಗಳಲ್ಲಿ ಭಾರೀ ರಭಸತೋರಿ ನಂತರದಲ್ಲಿ ತುಸು ಇಳಿಮುಖವಾದಂತಿದ್ದ ಮಳೆ ಇದೀಗ ತನ್ನ ನೈಜ ಅಬ್ಬರ ತೋರುತ್ತಿದೆ. ಕಳೆದೆರಡು ದಿನಗಳಿಂದ ಜಿಲ್ಲೆಯಾದ್ಯಂತ ಪುನರ್ವಸು ಮಳೆಯ ರಭಸ ಹೆಚ್ಚಾಗುತ್ತಿದೆ. ಇದೀಗ ಧಾರಾಕಾರ ಮಳೆಯ ಜೊತೆಗೆ ಗಾಳಿಯ ಆರ್ಭಟವೂ ಹೆಚ್ಚಾಗುತ್ತಿದ್ದು, ಇದೀಗ ಕೊಡಗಿನಲ್ಲಿ ಮಳೆಗಾಲದ ಆತಂಕವೂ ಸೃಷ್ಟಿಯಾಗುತ್ತಿದೆ.
ಶುಕ್ರವಾರ ಅಪರಾಹ್ನದಿಂದಲೇ ಮಳೆಯ ತೀವ್ರತೆ ಕಂಡು ಬರುತ್ತಿದೆ. ಶನಿವಾರವೂ ಸಂಜೆಯ ಬಳಿಕ ಮಳೆಯೊಂದಿಗೆ ಗಾಳಿಯೂ ಹೆಚ್ಚಾಗಿದ್ದು, ಬಹುತೇಕ ಕಡೆಗಳಲ್ಲಿ ಧಾರಾಕಾರ ಮಳೆಯಾಗಿದೆ. ಗಾಳಿ - ಮಳೆಯ ರಭಸಕ್ಕೆ ಕೆಲವೆಡೆಗಳಲ್ಲಿ ಅನಾಹುತಗಳೂ ಸಂಭವಿಸಿರುವ ಕುರಿತು ವರದಿಯಾಗಿದೆ. ಧಾರಾಕಾರ ಮಳೆಯಿಂದಾಗಿ ನದಿ - ತೋಡು - ತೊರೆಗಳಲ್ಲಿ ನೀರಿನ ಮಟ್ಟವೂ ಏರಿಕೆಯಾಗುತ್ತಿದೆ. ಇನ್ನೂ ಕೆಲ ದಿನಗಳ ಕಾಲ ಭಾರೀ ಮಳೆಯಾಗುವ ಮುನ್ಸೂಚನೆಯಿದ್ದು, ಪರಿಸ್ಥಿತಿ ಇದೇ ರೀತಿ ಮುಂದುವರಿದಲ್ಲಿ ಪ್ರವಾಹದ ಆತಂಕವೂ ಎದುರಾಗುವ ಸಾಧ್ಯತೆಗಳಿವೆ.
ಹಾರಂಗಿ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಜಲಾಶಯಕ್ಕೆ ನೀರಿನ ಒಳಹರಿವಿನ ಪ್ರಮಾಣ ಹೆಚ್ಚಳವಾಗುತ್ತಿದೆ. ಈ ಹಿನ್ನೆಲೆ ವ್ಯಾಪ್ತಿಯಲ್ಲಿ ಪ್ರವಾಹ ಮುನ್ನೆಚ್ಚರಿಕೆ ಸೂಚನೆಯನ್ನೂ ಕಾವೇರಿ ನೀರಾವರಿ ನಿಗಮದ ಮೂಲಕ ನೀಡಲಾಗಿದೆ.
ಜಿಲ್ಲೆಯಲ್ಲಿ ಸರಾಸರಿ ೨ ಇಂಚು ಮಳೆ
ಕಳೆದ ೨೪ ಗಂಟೆಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಸರಾಸರಿ ೨ ಇಂಚು ಮಳೆ ದಾಖಲಾಗಿದೆ. ಮಡಿಕೇರಿ ತಾಲೂಕಿನಲ್ಲಿ ೨.೨೫ ಇಂಚು, ವೀರಾಜಪೇಟೆ ೧.೫೮, ಪೊನ್ನಂಪೇಟೆ ೨.೧೧, ಸೋಮವಾರಪೇಟೆ ೧.೪೦ ಹಾಗೂ ಕುಶಾಲನಗರ ತಾಲೂಕಿನಲ್ಲಿ ಸರಾಸರಿ ೧ ಇಂಚು ಮಳೆಯಾಗಿದೆ.
ಹೋಬಳಿವಾರು ವಿವರ
ಕಳೆದ ೨೪ ಗಂಟೆಯಲ್ಲಿ ಮಡಿಕೇರಿ ಕಸಬಾ ೧.೭೪, ನಾಪೋಕ್ಲು ೩.೧೬, ಸಂಪಾಜೆ ೧.೯೨, ಭಾಗಮಂಡಲದಲ್ಲಿ ೨.೨೦ ಇಂಚು ಮಳೆಯಾಗಿದೆ. ವೀರಾಜಪೇಟೆ ಕಸಬಾದಲ್ಲಿ ೧.೭೩, ಅಮ್ಮತ್ತಿ ೧.೪೪, ಪೊನ್ನಂಪೇಟೆ ೨.೧೫, ಶ್ರೀಮಂಗಲ ೪, ಹುದಿಕೇರಿ ೨, ಬಾಳೆಲೆ ಹೋಬಳಿಯಲ್ಲಿ ೧.೬೨ ಇಂಚು ಮಳೆಯಾಗಿದೆ. ಸೋಮವಾರಪೇಟೆ ಕಸಬಾ ೨.೮೮, ಶನಿವಾರಸಂತೆ ೨.೫೬, ಶಾಂತಳ್ಳಿ ೫.೨೦, ಕೊಡ್ಲಿಪೇಟೆ ೧.೪೪, ಸುಂಟಿಕೊಪ್ಪ ೧.೨೪ ಹಾಗೂ ಕುಶಾಲನಗರ ಹೋಬಳಿಯಲ್ಲಿ ೦.೫೦ ಇಂಚು ಮಳೆಯಾಗಿದೆ.
ಅಲ್ಲಲ್ಲಿ ಅನಾಹುತಗಳು
ಧಾರಾಕಾರ ಮಳೆಯಿಂದಾಗಿ ಹಲವೆಡೆಗಳಲ್ಲಿ ಹಾನಿಗಳು ಸಂಭವಿಸಿವೆ. ಕಣಿವೆ ಅತ್ತೂರು ಭಾಗದಲ್ಲಿ ಮನೆಯ ಮೇಲ್ಛಾವಣಿ ಹಾಗೂ ಗೋಡೆಗೆ ಹಾನಿಯಾಗಿರುವುದು, ಮೇಕೇರಿ ಗ್ರಾಮದಲ್ಲಿ ಮನೆಗೋಡೆ ಕುಸಿತ, ಮಡಿಕೇರಿ ಎಫ್‌ಎಂಸಿ ಕಾಲೇಜು ಹಿಂಭಾಗ ವಿದ್ಯುತ್ ಕಂಬಗಳು ಧರೆಗುರುಳಿರುವುದು ಸೇರಿದಂತೆ ಜಿಲ್ಲೆಯ ಹಲವಾರು ವಿಭಾಗಗಳಲ್ಲಿ ೩ಐದನೇ ಪುಟಕ್ಕೆ
(ಮೊದಲ ಪುಟದಿಂದ) ವಿದ್ಯುತ್ ಕಂಬಗಳಿಗೆ ಹಾನಿಯಾಗಿರುವ ಘಟನೆಗಳು ವರದಿಯಾಗಿವೆ.
ಬಹುತೇಕ ಕಡೆಗಳಲ್ಲಿ ವಿದ್ಯುತ್ ಸಮಸ್ಯೆ
ಗಾಳಿ - ಮಳೆಯಿಂದಾಗಿ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ವಿದ್ಯುತ್ ಸಮಸ್ಯೆ ಎದುರಾಗಿದೆ. ವಿವಿಧ ಉಪಕೇಂದ್ರಗಳ ವ್ಯಾಪ್ತಿಯಲ್ಲಿ ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಈ ಕುರಿತು ಸೆಸ್ಕ್ಗೆ ಮಾಹಿತಿ ಬರುತ್ತಿದ್ದು, ಅಲ್ಲಲ್ಲಿ ದುರಸ್ತಿ ಕಾರ್ಯಗಳು ನಡೆಯುತ್ತಿರುವುದಾಗಿ ಕಾರ್ಯಪಾಲಕ ಅಭಿಯಂತರರಾದ ಅನಿತಾಬಾಯಿ ಅವರು ತಿಳಿಸಿದ್ದಾರೆ. ಭಾನುವಾರವಾಗಿರುವುದರಿಂದ ಪೂರ್ಣ ಮಾಹಿತಿ ಲಭ್ಯವಾಗಿಲ್ಲ. ಆದರೆ, ವರದಿಯಾಗಿರುವ ಕಡೆಗಳಲ್ಲಿ ಇಲಾಖಾ ಸಿಬ್ಬಂದಿಗಳು ಗಾಳಿ - ಮಳೆಯ ನಡುವೆ ಕೆಲಸ ನಿರ್ವಹಿಸುತ್ತಿದ್ದಾರೆ. ವಿವಿಧ ಕಡೆಗಳಲ್ಲೂ ಮರ ಬಿದ್ದಿರುವುದು, ತಂತಿಗಳು ತುಂಡರಿಸಿ ಬಿದ್ದಿರುವುದು, ಟ್ರಾನ್ಸ್ಫಾರ್ಮರ್ ಹಾನಿಗೀಡಾಗಿರುವಂತಹ ಪ್ರಕರಣಗಳು ನಡೆದಿವೆ.
ಮಡಿಕೇರಿಯಲ್ಲಿ...
ಜಿಲ್ಲಾ ಕೇಂದ್ರ ಮಡಿಕೇರಿಯ ಗಾಳಿಬೀಡು ರಸ್ತೆಯ ಎಫ್‌ಎಂಸಿ ಕಾಲೇಜು ಬಳಿ ಬೃಹತ್ ಗಾತ್ರದ ಮರವೊಂದು ಉರುಳಿಬಿದ್ದು, ವಿದ್ಯುತ್ ಟ್ರಾನ್ಸ್ಫಾರ್ಮರ್ ಧರೆಗುರುಳಿದೆ. ನಗರ ವ್ಯಾಪ್ತಿಯಲ್ಲಿ ಒಂದು ಕಂಬ ಉರುಳಿ ಬಿದ್ದಿದೆ. ಕುಂಡಾಮೇಸ್ತಿç ಬಳಿ, ಜಿಲ್ಲಾ ಕಾರಾಗೃಹದ ಬಳಿ ಕೂಡ ಮರ ಬಿದ್ದು, ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ.
ಮಕ್ಕಂದೂರು - ಮುಕ್ಕೋಡ್ಲು ವ್ಯಾಪ್ತಿಯಲ್ಲಿ ಐದು ಕಂಬಗಳಿಗೆ ಹಾನಿಯಾಗಿದೆ. ಗಾಳಿಗೆ ಎಲ್ಲಾ ಕಡೆಗಳಲ್ಲೂ ಮರಗಳು ಬಿದ್ದು ವಿದ್ಯುತ್ ಕಂಬಗಳಿಗೆ ಹಾನಿಯುಂಟಾಗುತ್ತಿದೆ. ಎಲ್ಲವನ್ನು ಸರಿಪಡಿಸುವ ಕೆಲಸ ಆಗುತ್ತಿದೆ ಎಂದು ಸಹಾಯಕ ಕಾರ್ಯಪಾಲಕ ಅಭಿಯಂತರ ಸಂಪತ್ ಮಾಹಿತಿ ನೀಡಿದ್ದಾರೆ.
ಪ್ರವಾಹ ಮುನ್ನೆಚ್ಚರಿಕೆಯ ಸೂಚನೆ
ಕೂಡಿಗೆ: ಹಾರಂಗಿ ಜಲಾನಯನ ಪ್ರದೇಶದಲ್ಲಿ ಹೆಚ್ಚಾಗಿ ಮಳೆಯಾಗುತ್ತಿದ್ದು, ಹಾರಂಗಿ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಹೆಚ್ಚಾಗುತ್ತಿರುತ್ತದೆ ಹಾಗೂ ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಜಲಾನಯನ ಪ್ರದೇಶಗಳಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗುವ ಸಂಭವವಿದ್ದು, ಒಳಹರಿವಿನ ಪ್ರಮಾಣ ಮತ್ತಷ್ಟು ಹೆಚ್ಚಾಗುವ ಸಂಭವವಿರುತ್ತದೆ. ಜಲಾಶಯವು ಶೀಘ್ರವೇ ಗರಿಷ್ಟ ಮಟ್ಟ ತಲುಪುವುದರಿಂದ ನದಿಗೆ ಹೆಚ್ಚುವರಿ ನೀರನ್ನು ಹರಿಸಲಾಗುವುದು..
ಆದ್ದರಿಂದ ಸಾರ್ವಜನಿಕರಿಗೆ ಈ ಮೂಲಕ ತಿಳಿಯಪಡಿಸುವುದೇನೆಂದರೆ ಹಾರಂಗಿ ಮತ್ತು ಕಾವೇರಿ ನದಿಯ ಪಾತ್ರದಲ್ಲಿರುವ ಮತ್ತು ನದಿಯ ಎರಡು ದಂಡೆಯಲ್ಲಿ ವಾಸಿಸುತ್ತಿರುವ ಜನರು ತಮ್ಮ ಆಸ್ತಿ ಪಾಸ್ತಿ ಹಾಗೂ ಜನಜಾನುವಾರು ರಕ್ಷಣೆಗಳ ಬಗ್ಗೆ ಮುನ್ನೆಚ್ಚರಿಕೆ ವಹಿಸಿ ಸುರಕ್ಷಿತ ಸ್ಥಳಗಳಿಗೆ ತೆರಳಲು ನೀರಾವರಿ ನಿಗಮದ ಕಾರ್ಯಪಾಲಕ ಅಭಿಯಂತರ ಪುಟ್ಟಸ್ವಾಮಿ ಪ್ರಕಟಣೆ ಮೂಲಕ ಕೋರಿದ್ದಾರೆ.
ಕೂಡಿಗೆ: ಜಿಲ್ಲೆಯ ಪ್ರಮುಖ ಅಣೆಕಟ್ಟೆಯಾದ ಹಾರಂಗಿ ಅಣೆಕಟ್ಟೆ ಸಂಪೂರ್ಣವಾಗಿ ಭರ್ತಿಯಾದ ಹಿನ್ನೆಲೆಯಲ್ಲಿ ಅಣೆಕಟ್ಟೆಯ ಹಿತದೃಷ್ಟಿಯಿಂದ ಮತ್ತು ಜಲಾನಯನ ಪ್ರದೇಶಗಳಲ್ಲಿ ಹೆಚ್ಚು ಮಳೆ ಬೀಳುತ್ತಿರುವ ಹಿನ್ನೆಲೆಯಲ್ಲಿ ಅಣೆಕಟ್ಟೆಯಿಂದ ನದಿಗೆ ಕ್ರಸ್ಟ್ಗೇಟ್‌ಗಳ ಮೂಲಕ ೧೦ ಸಾವಿರ ಕ್ಯೂಸೆಕ್ಸ್ ನೀರನ್ನು ನದಿಗೆ ಹರಿಸಲಾಗುತ್ತಿದೆ.
ಸ್ಥಳದಲ್ಲಿ ಕಾವೇರಿ ನೀರಾವರಿ ನಿಗಮದ ಹಾರಂಗಿ ವಿಭಾಗದ ಅಭಿಯಂತರ ಕೆ.ಕೆ. ರಘುಪತಿ, ಸಹಾಯಕ ಅಭಿಯಂತರ ಐ.ಕೆ. ಪುಟ್ಟಸ್ವಾಮಿ, ಅಣೆಕಟ್ಟೆಯ ಮೇಲುಸ್ತುವಾರಿ ಸಿದ್ದರಾಜ್ ಸೇರಿದಂತೆ ಸಿಬ್ಬಂದಿ ವರ್ಗದವರು ಹಾಜರಿದ್ದರು.
ಮುಳ್ಳೂರು: ಮಳೆ ಗಾಳಿಗೆ ಶನಿವಾರ ರಾತ್ರಿ ಸಮಿಪದ ಗೌಡಳ್ಳಿ ಗ್ರಾ.ಪಂ.ನ ಚನ್ನಾಪುರ ಗ್ರಾಮದ ಲಕ್ಷಿö್ಮ ಎಂಬುವವರಿಗೆ ಸೇರಿದ ವಾಸದ ಮನೆಯ ಗೋಡೆ ಕುಸಿದು ಬಿದ್ದು ಹೋಗಿದೆ. ಲಕ್ಷಿö್ಮ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಈ ಮಧ್ಯೆ ಅವರ ವಾಸದ ಮನೆಯು ಬಹುತೇಕವಾಗಿ ಕುಸಿದು ಬಿದ್ದಿದ್ದು, ಸರಕಾರ ಅವರಿಗೆ ಸೂಕ್ತ ಪರಿಹಾರ ನೀಡುವಂತೆ ಗ್ರಾಮಸ್ಥರು ಕಂದಾಯ ಇಲಾಖೆಗೆ ಮನವಿ ಮಾಡಿದ್ದಾರೆ.ಸಿದ್ದಾಪುರ: ಗಾಳಿ ಮಳೆಗೆ ಮರ ಬಿದ್ದ ಪರಿಣಾಮ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ನೆಲ್ಯಹುದಿಕೇರಿ ಗ್ರಾಮದ ಬೆಟ್ಟದ ಕಾಡು ಬಳಿ ಮರ ಬಿದ್ದಿದ್ದು, ಇದರಿಂದಾಗಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಸುರಿಯುವ ಧಾರಾಕಾರ ಮಳೆ ನಡುವೆ ಚೆಸ್ಕಾಂ ಸಿಬ್ಬಂದಿಗಳು ದುರಸ್ತಿ ಪಡಿಸುವ ಕಾರ್ಯದಲ್ಲಿ ತೊಡಗಿಸಿಕೊಂಡರು.
ಕಣಿವೆ : ನಿರಂತರವಾಗಿ ಸುರಿದ ಮಳೆಯಿಂದಾಗಿ ಮನೆಯ ಗೋಡೆ ಶೀತಕ್ಕೆ ಕುಸಿದ ಪ್ರಸಂಗ ಹಾರಂಗಿ ಬಳಿಯ ಅತ್ತೂರು ಗ್ರಾಮದಲ್ಲಿ ಶನಿವಾರ ಸಂಜೆ ಸಂಭವಿಸಿದೆ.
ಅದೃಷ್ಟವಶಾತ್ ಮನೆ ಮಂದಿ ಮನೆಯಿಂದ ಹೊಲಕ್ಕೆ ಕೆಲಸಕ್ಕೆ ತೆರಳಿದ್ದರಿಂದಾಗಿ ಅಪಾಯದಿಂದ ಪಾರಾಗಿದ್ದಾರೆ. ಅತ್ತೂರು ಗ್ರಾಮದ ಕೃಷಿಕ ಸಿ.ಎ.ಜನಾರ್ಧನ (ರಾಜಮಣಿ) ಹಾಗೂ ಕನ್ನಿಕೆ ದಂಪತಿಗಳಿಗೆ ಸೇರಿದ ಮನೆ ಇದಾಗಿದೆ. ನಾಕೂರು ಶಿರಂಗಾಲ ಗ್ರಾಮದವರಾದ ಜನಾರ್ಧನ್, ಹಾರಂಗಿ ಜಲಾಶಯ ನಿರ್ಮಾಣದಿಂದಾಗಿ ವಾಸದ ಮನೆ, ಆಸ್ತಿ ಪಾಸ್ತಿ ಜಲಾವೃತಗೊಂಡ ಕಾರಣ ಅತ್ತೂರು ಗ್ರಾಮದಲ್ಲಿ ಸಂತ್ರಸ್ತರಾಗಿ ಬಂದು ಮನೆ ನಿರ್ಮಿಸಿ ವಾಸವಿದ್ದರು ಎನ್ನಲಾಗಿದೆ.
ಮನೆ ಕುಸಿದಿದ್ದರಿಂದಾಗಿ ಮನೆಯೊಳಗಿನ ಮಲಗುವ ಮಂಚ, ಹಾಸಿಗೆ - ಹೊದಿಕೆ, ಟಿವಿ ಸೇರಿದಂತೆ ಅನೇಕ ವಸ್ತುಗಳು ಹಾನಿಯಾಗಿರುವುದಾಗಿ ಸ್ಥಳೀಯ ನಿವಾಸಿಗಳಾದ ನರೇಂದ್ರ, ರವಿಕುಮಾರ್, ಶ್ರೀನಿವಾಸ್ ಮೊದಲಾದವರು ಸ್ಥಳಕ್ಕೆ ತೆರಳಿದ್ದ ‘ಶಕ್ತಿ' ಯೊಂದಿಗೆ ಹೇಳಿಕೊಂಡರು.
ಘಟನಾ ಸ್ಥಳಕ್ಕೆ ಕುಶಾಲನಗರ ತಹಶೀಲ್ದಾರ್ ಕಿರಣ್ ಗೌರಯ್ಯ , ಗ್ರಾಮ ಲೆಕ್ಕಿಗ ಗೌತಮ್ ಹಾಗೂ ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ಪಿಡಿಒ ಸುಮೇಶ್ ತಂಡ ಧಾವಿಸಿ ಪರಿಶೀಲನೆ ನಡೆಸಿದರು.
ಹಾರಂಗಿ ಜಲಾಶಯದ ಸಂತ್ರಸ್ತರಾದ ಜನಾರ್ಧನ್ ಕುಟುಂಬಕ್ಕೆ ಕಂದಾಯ ಹಾಗೂ ಕಾವೇರಿ ನೀರಾವರಿ ನಿಗಮದ ವತಿಯಿಂದ ಸೂಕ್ತ ಮನೆ ನಿರ್ಮಿಸಿಕೊಡಬೇಕೆಂದು ರವಿಕುಮಾರ್ ಹಾಗೂ ಅತ್ತೂರು ಮಣಿ ಒತ್ತಾಯಿಸಿದ್ದಾರೆ. ಕಾವೇರಿ ಜಲಾನಯನ ಪ್ರದೇಶಗಳಲ್ಲಿ ಬಿರುಸಿನ ಮಳೆ ಬೀಳುತ್ತಿರುವ ಕಾರಣ ಕುಶಾಲನಗರ ಮೂಲಕ ಹರಿಯುತ್ತಿರುವ ಕಾವೇರಿ ನದಿಯಲ್ಲಿ ನೀರಿನ ಹರಿವಿನ ಪ್ರಮಾಣ ಹೆಚ್ಚಳವಾಗಿದೆ.
ಕಾವೇರಿ ಜಲಾನಯನ ಪ್ರದೇಶಗಳಲ್ಲಿ ಬಿರುಸಿನ ಮಳೆ ಬೀಳುತ್ತಿರುವ ಕಾರಣ ಕುಶಾಲನಗರ ಮೂಲಕ ಹರಿಯುತ್ತಿರುವ ಕಾವೇರಿ ನದಿಯಲ್ಲಿ ನೀರಿನ ಹರಿವಿನ ಪ್ರಮಾಣ ಹೆಚ್ಚಳವಾಗಿದೆ.
ನಾಪೋಕ್ಲು: ಹೋಬಳಿ ವ್ಯಾಪ್ತಿಯಲ್ಲಿ ಮಳೆ ಬಿರುಸುಗೊಂಡಿದೆ. ಬೆಳಗಿನ ಅವಧಿಯಲ್ಲಿ ಮಳೆ ಕಡಿಮೆಯಿತ್ತು. ಮಧ್ಯಾಹ್ನ ನಂತರ ಬಿರುಸಿನ ಮಳೆ ಸುರಿಯಿತು. ಮಳೆಯಿಂದಾಗಿ ಸಮೀಪದ ಚೋನಕೆರೆ ಎಂಬಲ್ಲಿ ಮರವೊಂದು ರಸ್ತೆಗಡ್ಡಲಾಗಿ ಮುರಿದು ಬಿದ್ದು, ಕೆಲಕಾಲ ಸಂಚಾರ ವ್ಯತ್ಯಯ ಉಂಟಾಗಿತ್ತು. ಪೊಲೀಸ್ ಕ್ರೆöÊಂ ಪಿಎಸ್‌ಐ ಶ್ರೀಧರ್, ಸಿಬ್ಬಂದಿಗಳಾದ ರವಿ, ಶರೀಫ್ ಹಾಗೂ ಗ್ರಾಮಸ್ಥರ ನೆರವಿನಿಂದ ಮರವನ್ನು ತೆರವುಗೊಳಿಸಲಾಯಿತು. ಕಾವೇರಿ ಜಲಾನಯನ ಪ್ರದೇಶಗಳಲ್ಲಿ ಬಿರುಸಿನ ಮಳೆ ಬೀಳುತ್ತಿರುವ ಕಾರಣ ಕುಶಾಲನಗರ ಮೂಲಕ ಹರಿಯುತ್ತಿರುವ ಕಾವೇರಿ ನದಿಯಲ್ಲಿ ನೀರಿನ ಹರಿವಿನ ಪ್ರಮಾಣ ಹೆಚ್ಚಳವಾಗಿದೆ.