*ಸಿದ್ದಾಪುರ, ಜು.೧೪ : ನೆಲ್ಲಿಹುದಿಕೇರಿ ಗ್ರಾ.ಪಂ. ವ್ಯಾಪ್ತಿಯ ಲೋಕೋಪಯೋಗಿ ಇಲಾಖೆಗೆ ಸೇರಿದ ಹೆದ್ದಾರಿ ಬದಿಯಲ್ಲಿ ಅಕ್ರಮ ಶೆಡ್ಗಳ ನಿರ್ಮಾಣ ನಿರಾತಂಕವಾಗಿ ನಡೆಯುತ್ತಿದೆ. ಆರಂಭದಲ್ಲಿ ಶೆಡ್ಗಳು ತಲೆಎತ್ತಿ, ನಂತರ ಮಳಿಗೆಗಳಾಗಿ ಮಾರ್ಪಾಡುಗೊಳ್ಳುತ್ತಿರುವ ಬಗ್ಗೆ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ನೆಲ್ಲಿಹುದಿಕೇರಿ ದಿನದಿಂದ ದಿನಕ್ಕೆ ಬೆಳವಣಿಗೆ ಕಾಣುತ್ತಿರುವ ಪಟ್ಟಣವಾಗಿದೆ. ಈ ಭಾಗದಲ್ಲಿ ಜನಸಂಖ್ಯೆ ಮಾತ್ರವಲ್ಲದೆ ವಾಹನಗಳ ಸಂಖ್ಯೆಯೂ ಏರಿಕೆಯಾಗುತ್ತಿದೆ. ರಸ್ತೆಬದಿ ಎಲ್ಲೆಂದರಲ್ಲಿ ಶೆಡ್ಗಳು ನಿರ್ಮಾಣಗೊಳ್ಳುತ್ತಿದ್ದು, ಪಟ್ಟಣಕ್ಕೆ ಬಂದವರು ವಾಹನವನ್ನು ನಿಲ್ಲಿಸಲು ಜಾಗವಿಲ್ಲದೆ ಪರದಾಡುವ ಪರಿಸ್ಥಿತಿ ಇದೆ. ರಸ್ತೆಬದಿ ವ್ಯಾಪಾರದ ನೆಪದಲ್ಲಿ ಆರಂಭದಲ್ಲಿ ತಾತ್ಕಾಲಿಕ ಶೆಡ್ಗಳನ್ನು ನಿರ್ಮಿಸಿಕೊಳ್ಳುವ ವ್ಯಕ್ತಿಗಳು ಮೀನು, ಮಾಂಸ, ತರಕಾರಿ ಮತ್ತಿತರ ವಸ್ತುಗಳನ್ನು ಮಾರಾಟ ಮಾಡಲು ಆರಂಭಿಸುತ್ತಾರೆ. ಕ್ರಮೇಣ ಮಳಿಗೆಗಳನ್ನಾಗಿ ಪರಿವರ್ತಿಸಿಕೊಂಡು ಜಾಗವನ್ನು ತಮ್ಮ ಅಧೀನಕ್ಕೆ ಪಡೆದುಕೊಳ್ಳುತ್ತಿರುವ ಪ್ರಕರಣಗಳು ನಡೆಯುತ್ತಿವೆ.
ಶೆಡ್ಗಳನ್ನು ನಿರ್ಮಿಸಿಕೊಂಡವರಿAದ ನೆಲ ಬಾಡಿಗೆ ಪಡೆದುಕೊಳ್ಳುತ್ತಿರುವ ನೆಲ್ಲಿಹುದಿಕೇರಿ ಗ್ರಾ.ಪಂ ಇಲ್ಲಿ ನಡೆಯುತ್ತಿರುವ ಅಕ್ರಮಗಳ ಬಗ್ಗೆ ಪ್ರಶ್ನೆ ಮಾಡುತ್ತಿಲ್ಲ. ರಸ್ತೆ ಬದಿ ಜಾಗವನ್ನು ನಿಯಮಬಾಹಿರವಾಗಿ ತಮ್ಮ ವಶಕ್ಕೆ ಪಡೆದುಕೊಳ್ಳುತ್ತಿರುವವರಿಗೆ ನೋಟಿಸ್ ನೀಡುತ್ತಿಲ್ಲ. ತನಗೆ ಸೇರಿದ ಜಾಗದಲ್ಲಿ ಈ ರೀತಿಯ ಅಕ್ರಮ ಮಳಿಗೆಗಳು ನಿರ್ಮಾಣಗೊಳ್ಳುತ್ತಿರುವ ಬಗ್ಗೆ ಮಾಹಿತಿ ಇದ್ದರೂ ಲೋಕೋಪಯೋಗಿ ಇಲಾಖೆ ಯಾವುದೇ ಕಾನೂನು ಕ್ರಮ ಕೈಗೊಳ್ಳುತ್ತಿಲ್ಲವೆಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಗ್ರಾ.ಪಂ. ಅಕ್ರಮ ಶೆಡ್ಗಳ ನಿರ್ಮಾಣಕ್ಕೆ ಪ್ರೇರಣೆ ನೀಡುವ ಬದಲು ತಾನೇ ಮಳಿಗೆಗಳನ್ನು ನಿರ್ಮಿಸಿ ವ್ಯಾಪಾರಿಗಳಿಗೆ ಬಾಡಿಗೆಗೆ ನೀಡುವ ಮೂಲಕ ಆದಾಯವನ್ನು ಹೆಚ್ಚಿಸಿಕೊಳ್ಳಲು ಯೋಜನೆ ರೂಪಿಸಲಿ ಮತ್ತು ಶೆಡ್ ನಿರ್ಮಾಣಕ್ಕೆ ಕಡಿವಾಣ ಹಾಕಿ ವಾಹನ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಲಿ ಎಂದು ಒತ್ತಾಯಿಸಿದ್ದಾರೆ.
(ಅಂಚೆಮನೆ ಸುಧಿ)