ಮಡಿಕೇರಿ, ಜು. ೧೪: ಆರೋಗ್ಯ ರಕ್ಷಕ ಆಯುಷ್ಮಾನ್, ಭಾರತ್-ಪ್ರಧಾನಮಂತ್ರಿಗಳ ಜನ ಆರೋಗ್ಯ ಯೋಜನಾ, ಮುಖ್ಯಮಂತ್ರಿ ಆರೋಗ್ಯ ಕರ್ನಾಟಕ ಯೋಜನೆಯ ಪ್ರಯೋಜನ ಪಡೆಯಲು ಇಂದೇ ಆಯುಷ್ಮಾನ್ ಕಾರ್ಡ್ ಮಾಡಿಸಿ. ಆಯುಷ್ಮಾನ್ ಕಾರ್ಡ್ಗಳನ್ನು ನಿಮ್ಮ ಹತ್ತಿರದ ಗ್ರಾಮ ಒನ್‌ನಿಂದ ರೇಷನ್ ಕಾರ್ಡ್ ಲಿಂಕ್ ಆಗಿರುವ ಆಧಾರ್ ಕಾರ್ಡ್ ಹಾಗೂ ಮೊಬೈಲ್ ಸಂಖ್ಯೆ ನೀಡಿ ಉಚಿತವಾಗಿ ಪಡೆಯಿರಿ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸತೀಶ್ ಕೋರಿದ್ದಾರೆ.
ಆಯುಷ್ಮಾನ್ ಕಾರ್ಡ್ ಹೊಂದಿರುವ ಬಿಪಿಎಲ್ ಕಾರ್ಡ್ನ ಪ್ರತೀ ಕುಟುಂಬಕ್ಕೆ ರೂ. ೫ ಲಕ್ಷ ವಾರ್ಷಿಕ ಮಿತಿಯೊಳಗೆ ಉಚಿತ ಚಿಕಿತ್ಸೆ, ಎಪಿಎಲ್ ಕಾರ್ಡ್ನ ಪ್ರತೀ ಕುಟುಂಬಗಳಿಗೆ ಪ್ಯಾಕೇಜ್ ದರದಲ್ಲಿ ಶೇ. ೩೦ ರಷ್ಟು ವಾರ್ಷಿಕವಾಗಿ ರೂ. ೧.೫ ಲಕ್ಷದ ಮಿತಿಯೊಳಗೆ ಉಚಿತ ಚಿಕಿತ್ಸಾ ವೆಚ್ಚವನ್ನು ಸರ್ಕಾರ ಭರಿಸಲಿದೆ. ಈ ಕಾರ್ಡ್ನ ನೆರವಿನಿಂದ ದೇಶದಲ್ಲಿ ಎಲ್ಲೇ ಇದ್ದರೂ ಉಚಿತವಾಗಿ ಚಿಕಿತ್ಸೆಯನ್ನು ಪಡೆಯಲು ಪೋರ್ಟೆಬಿಲಿಟಿ ಸೌಲಭ್ಯವಿದೆ. ತುರ್ತು ಸಂದರ್ಭದಲ್ಲಿ ೧೭೧ ಚಿಕಿತ್ಸಾ ವಿಧಾನಗಳಿಗೆ ರೋಗಿಯು ನೇರವಾಗಿ ಸರ್ಕಾರಿ ಅಥವಾ ನೋಂದಾಯಿತ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬಹುದು ರೆಫರಲ್ ಅವಶ್ಯಕತೆ ಇರುವುದಿಲ್ಲ. ಈ ಕಾರ್ಡನ್ನು ೧೪ ಸಂಖ್ಯೆಯ ಆಭಾ ಹೆಲ್ತ್ ಐಡಿಯೊಂದಿಗೆ ಸಂಯೋಜಿಸಲಾಗಿದೆ. ಕಾರ್ಡ್ ಇದ್ದರೂ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಲಭ್ಯವಿಲ್ಲದಿದ್ದಲ್ಲಿ ಮಾತ್ರ ರೆಫರಲ್ ಆಧಾರದ ಮೇಲೆ ನೋಂದಾಯಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬಹುದು.
ಕೊಡಗು ಜಿಲ್ಲೆಯಲ್ಲಿ ೪,೨೪,೦೨೬ ಕಾರ್ಡ್ಗಳ ಜನರೇಟ್ ಮಾಡಿಸಬೇಕಾದ ಗುರಿ ಇದ್ದು, ಈಗ ೧,೩೩,೪೨೧ ಕಾರ್ಡ್ಗಳನ್ನು ಜನರೇಟ್ ಮಾಡಲಾಗಿದೆ. ಉಳಿದ ೨,೯೦,೬೦೫ ಕಾರ್ಡ್ಗಳನ್ನು ಮಾಡಿಸಲು ಸಾರ್ವಜನಿಕರು ಸಹಕರಿಸಿ ಇದರ ಉಪಯೋಗವನ್ನು ಪಡೆದುಕೊಳ್ಳಬಹುದು ಎಂದು ಡಾ. ಸತೀಶ್ ಕುಮಾರ್ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗೆ ೧೦೪ ಅಥವಾ ೧೪೫೫೫ ಕ್ಕೆ ಕರೆಮಾಡಿ. “ನಿಮ್ಮ ಆರೋಗ್ಯ ನಮ್ಮ ಬದ್ಧತೆ” ಟೋಲ್ ಫ್ರೀ ಸಂಖ್ಯೆ: ೧೮೦೦೪೨೫೮೩೩೦ ಅನ್ನು ಸಂಪರ್ಕಿಸ ಬಹುದೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ತಿಳಿಸಿದ್ದಾರೆ.