ವೀರಾಜಪೇಟೆ, ಜು. ೧೪: ವಾಸಿಸಲೂ ಇದ್ದ ಸ್ವಂತ ಮನೆಯೂ ಬಿದ್ದು ಹೋಗಿತ್ತು, ಹಣವು ಇಲ್ಲ, ನಮಗೊಂದು ಮನೆ ನಿರ್ಮಿಸಿ ಕೊಟ್ಟರೂ ಸಾಕಿತ್ತು. ಹೇಗಾದರೂ ಬದುಕು ಸಾಗಿಸುತ್ತೇವೆ ಎಂದು ಹೇಳಿಕೊಳ್ಳುತ್ತಾ ಜೀವನ ಸಾಗಿಸುತ್ತಿದ್ದ ಕಮಲ ಅವರ ಮುಖದಲ್ಲಿ ಇದೀಗ ಹೊಸ ನಗು ಮೂಡಿದೆ.

ಮನೆ ಇಲ್ಲದೆ ನಾವು ಹೇಗೆ ಬದುಕಲಿ ಎಂದು ಹತಾಶ ಭಾವ ತೋಡಿಕೊಳ್ಳುತ್ತಿದ್ದ ಕಮಲ ಕುಟುಂಬದವರಿಗೆ ಬದುಕುವ ಧೈರ್ಯ ಬಂದಿದೆ.

ಈ ಬಡ ಕುಟುಂಬದ ಸಂಕಷ್ಟ ವನ್ನು ಅರ್ಥ ಮಾಡಿಕೊಂಡು ತಮ್ಮ ಸ್ವಂತ ಖರ್ಚಿನಲ್ಲಿ ಮನೆಯೊಂದನ್ನು ನಿರ್ಮಿಸಿ ಕೊಡುವ ಮೂಲಕ ಆರ್ಜಿ ಗ್ರಾಮದ ಪೆರುಂಬಾಡಿ ನಿವಾಸಿ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಬಿ.ಎಂ. ಗಣೇಶ್ ಈ ಬಡ ಸಂಸಾರದ ಬದುಕಿನಲ್ಲಿ ಭರವಸೆ ಮೂಡಿಸುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ. ಅತಂತ್ರ ಸ್ಥಿತಿಯಲ್ಲಿ ಬದುಕುತ್ತಿದ್ದ ಇವರಿಗೆ ಬಿ.ಎಂ. ಗಣೇಶ್ ಅವರು ಭದ್ರತೆ ಕಲ್ಪಿಸಿ ಕೊಟ್ಟು ಧೈರ್ಯ ತುಂಬಿದ್ದಾರೆ.

ಶಿಥಿಲಾವಸ್ಥೆಯಲ್ಲಿದ್ದ ಕೆದಮೂಳ್ಳುರು ಗ್ರಾಮದ ಕಮಲ ಎಂಬ ಮಹಿಳೆಯ ಇತ್ತೀಚೆಗೆ ಬಿದ್ದು ಹೋಗಿ ಸಂಕಷ್ಟದಲ್ಲಿ ಸಿಲುಕಿದ್ದರು.

ಕಮಲ ಅವರ ಒಬ್ಬ ಮಗಳು ಕೂಡ ಕಳೆದ ಐದು ವರ್ಷಗಳಿಂದ ಅಂಗವೈಕಲ್ಯ ಉಂಟಾಗಿ ತಾಯಿ ಜೊತೆಯಲ್ಲಿ ನೆಲೆಸಿದ್ದರು.

ಏಪ್ರಿಲ್ ತಿಂಗಳಲ್ಲಿ ಮನೆ ಬಿದ್ದ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ಮನೆ ನಿರ್ಮಾಣ ಮಾಡಲು ಮೀನಾಮೇಷ ಎಣಿಸುತ್ತಿದ್ದ ಸಂದರ್ಭದಲ್ಲಿ ಇದನ್ನು ಅಲ್ಲಿನ ನಿವಾಸಿಗಳಿಂದ ಮಾಹಿತಿ ತಿಳಿದ ಬಿಲ್ಲವ ಸಮಾಜದ ತಾಲೂಕು ಅಧ್ಯಕ್ಷರು ಹಾಗೂ ಮಾಜಿ ತಾಲೂಕು ಪಂಚಾಯಿತಿ ಸದಸ್ಯ ಬಿ.ಎಂ. ಗಣೇಶ್ ಅವರು ಬಿದ್ದ ಹೋದ ಮನೆಗೆ ಭೇಟಿ ನೀಡಿ ಕಮಲ ಮತ್ತು ಅವರ ಪುತ್ರಿ ಪದ್ಮಾವತಿ ಅವರಿಗೆ ಧೈರ್ಯ ತುಂಬಿದ್ದರು. ಅಲ್ಲದೆ ಮನೆ ಕಟ್ಟಿಸಿ ಕೊಡುತ್ತೇನೆ ಎಂದು ಭರವಸೆ ನೀಡಿದರು.

ಅವರು ಕೊಟ್ಟ ಮಾತಿನಂತೆ ಕೇವಲ ಎರಡು ತಿಂಗಳ ಅವಧಿಯಲ್ಲಿ ಸುಮಾರು ಎರಡೂವರೆ ಲಕ್ಷ ರೂಪಾಯಿ ವೆಚ್ಚದಲ್ಲಿ ಅವರಿಗೆ ೪ ಕೋಣೆಗಳ ಮನೆಯೊಂದನ್ನು ನಿರ್ಮಾಣ ಮಾಡಿಕೊಟ್ಟಿದ್ದಾರೆ. ಇದೀಗ ಗೃಹಪ್ರವೇಶವು ನಡೆದು ಕಮಲ ಅವರಿಗೆ ಮನೆ ಹಸ್ತಾಂತರ ಮಾಡಿದ್ದಾರೆ.

ನಮ್ಮ ಈ ಸಂಕಷ್ಟಕ್ಕೆ ಮಿಡಿದು ಗಣೇಶ್ ಅವರು ಮನೆ ನಿರ್ಮಿಸಿಕೊಟ್ಟು ನಮ್ಮ ಬದುಕಿಗೆ ಆಶ್ರಯ ಒದಗಿಸಿದ್ದಾರೆ. ಇವರ ಈ ಸೇವೆಯನ್ನು ಮರೆಯಲಾರೆವು ಎಂದು ಕಮಲ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.

ನಾನೇನು ಆಗರ್ಭ ಶ್ರೀಮಂತನಲ್ಲ, ಇದರಲ್ಲಿ ಯಾವುದೇ ರಾಜಕೀಯ ಇಲ್ಲ, ನನ್ನ ಕೈಲಾದ ಸಹಾಯವನ್ನು ಮಾಡಿ ಮನೆ ಕಟ್ಟಿಸಿ ಕೊಟ್ಟಿದ್ದೇನೆ, ಇನ್ನೂ ವಿದ್ಯುತ್ ಪೂರೈಕೆ ಮತ್ತು ಶೌಚಾಲಯದ ಅವಶ್ಯಕತೆ ಇದೆ. ಪಂಚಾಯಿತಿ ವತಿಯಿಂದ ಆದಷ್ಟು ಬೇಗ ಮೂಲಭೂತ ಸೌಕರ್ಯ ಕಲ್ಪಿಸಿದರೆ ಉತ್ತಮ ಎನ್ನುತ್ತಾರೆ ಗಣೇಶ್.

ಇದೀಗ ಕಮಲ ಅವರ ಕುಟುಂಬ ಕತ್ತಲೆಯಿಂದ ಬೆಳಕಿಗೆ ಬಂದಿದೆ. ಮುಖದಲ್ಲಿ ಸಂತಸ ತುಂಬಿದೆ. ಮನೆಯ ಗೃಹ ಪ್ರವೇಶವೂ ನಡೆದಿದೆ. ಬಂಧು ಬಳಗವೆಲ್ಲಾ ಸೇರಿ ಗೃಹಪ್ರವೇಶದ ಸಂತಸ ಅನುಭವಿಸಿದ್ದಾರೆ. ಬಿ.ಎಂ. ಗಣೇಶ್ ಅವರ ಸಾಮಾಜಿಕ ಕಳಕಳಿ, ಮಾನವೀಯತೆ ಕಾರ್ಯಗಳಿಗೆ ಜನವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

ಗಣೇಶ್ ಅವರಿಗೆ ಸನ್ಮಾನ

ಈ ಸಂದರ್ಭದಲ್ಲಿ ಗ್ರಾಮದ ವತಿಯಿಂದ ಗಣೇಶ್ ಅವರ ಮಾನವೀಯ ಕಾರ್ಯಕ್ಕೆ ಕೃತಜ್ಞತೆ ಸಲ್ಲಿಸಿ ಸನ್ಮಾನ ಮಾಡಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಗಣೇಶ್ ಅವರು, ಬಡವರ ಕಷ್ಟದ ಬಗ್ಗೆ ನನಗೆ ಅರಿವಿದೆ. ಕಮಲ ಕುಟುಂಬದ ಕಷ್ಟ ನೋಡಿ ನನ್ನ ಕೈಯಿಂದ ಸುಮಾರು ಎರಡು ಲಕ್ಷ ರೂಪಾಯಿ ಹಾಗೂ ಕೆಲವರು ತಾವಾಗಿಯೇ ಮುಂದೆ ಬಂದು ಸುಮಾರು ಐವತ್ತು ಸಾವಿರ ರೂಪಾಯಿಗಳನ್ನು ನೀಡಿದ ಹಿನ್ನೆಲೆಯಲ್ಲಿ ಮನೆ ನಿರ್ಮಾಣ ಮಾಡಿ ನೀಡಿದ್ದೇನೆ. ಕಳೆದ ವರ್ಷ ಕೂಡ ಪೆರಂಬಾಡಿಯಲ್ಲಿ ಒಂದು ಮನೆ ನಿರ್ಮಾಣ ಮಾಡಿ ನೀಡಿದ್ದೇನೆ. ನನ್ನೊಂದಿಗೆ ಕಮಲ ಅವರ ಸಹೋದರ ಮೋಣಪ್ಪ ಪೂಜಾರಿ, ಉಪಾಧ್ಯಕ್ಷ ಪುರುಷೋತ್ತಮ, ಜನಾರ್ಧನ, ನಾರಾಯಣ, ಖಜಾಂಚಿ ಸತೀಶ್ ಪೂಜಾರಿ, ಹಾಗೂ ಸಿ.ಎ. ಬಷೀರ್ ಅವರುಗಳು ಸಹಾಯಧನ ನೀಡಿ ಸಹಕರಿಸಿದ್ದಾರೆ. ಬಿಲ್ಲವ ಸೇವಾ ಸಮಾಜದ ಅಧ್ಯಕ್ಷನಾಗಿ ಸಂಘದ ಹೆಸರಿನಲ್ಲಿ ನಾನು ಸಹಾಯ ಹಸ್ತ ನೀಡಿ ಮನೆ ನಿರ್ಮಿಸಿದ್ದೇನೆ ಎಂದರು.

ಕೆದಮುಳ್ಳೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಪರಮೇಶ್ ಮಾತನಾಡಿ, ಮನೆ ಕುಸಿದು ಬಿದ್ದ ಸಂದರ್ಭ ಗ್ರಾಮಸ್ಥರು ಸೇರಿ ಅವರಿಗೆ ಸಹಾಯ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಅವರಿಗೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಪಂಚಾಯಿತಿ ವತಿಯಿಂದ ಮಾಡಿಕೊಡಲಾಗುತ್ತದೆ ಎಂದು ಭರವಸೆ ನೀಡಿದರಲ್ಲದೆ ಮಾನವೀಯ ನೆಲೆಗಟ್ಟಿನಲ್ಲಿ ಬಡಕುಟುಂಬಕ್ಕೆ ಸಹಾಯ ಹಸ್ತ ಚಾಚಿ ಕುಟುಂಬಕ್ಕೆ ಆಸರೆಯಾಗಿದ್ದು ಮೆಚ್ಚುವ ಕಾರ್ಯ ಎಂದು ಶ್ಲಾಘನೆ ವ್ಯಕ್ತಪಡಿಸಿದರು.

ಬಿಜೆಪಿ ಪ್ರಮುಖರು, ಸ್ಥಳೀಯರು ಆದ ಗೌಡುದಾರೆ ಚೋಟು ಬಿದ್ದಪ್ಪ ಮಾತನಾಡಿ, ಸರಕಾರದ ವತಿಯಿಂದ, ಸ್ಥಳೀಯ ಪಂಚಾಯಿತಿ ವತಿಯಿಂದ ಆಗಬೇಕಾದ ಗೃಹ ನಿರ್ಮಾಣ ಕಾರ್ಯವನ್ನು ಸಾಮಾಜಿಕ ಮಾನವೀಯ ನೆಲೆಗಟ್ಟಿನಲ್ಲಿ ದಾನಿಗಳ ನೆರವಿನೊಂದಿಗೆ ಗೃಹ ನಿರ್ಮಾಣ ಮಾಡಿ ಬಡ ಕುಟುಂಬಕ್ಕೆ ನೆರವು ನೀಡಿದ್ದಾರೆ. ಇದು ಸಮಾಜಕ್ಕೆ ಮಾದರಿಯಾಗಿದೆ. ಗಣೇಶ್ ಅವರ ಸಮಾಜಮುಖಿ ಕಾರ್ಯ ಇನ್ನಷ್ಷು ಮುಂದುವರೆಯಲ್ಲಿ ಎಂದು ಆಶಿಸಿದರು.

ಈ ಸಂದರ್ಭದಲ್ಲಿ ಬಿಲ್ಲವರ ಸಂಘದ ಆಡಳಿತ ಮಂಡಳಿಯವರಾದ ನಾರಾಯಣ, ಖಜಾಂಚಿ ಸತೀಶ್, ಅನಿಲ್, ಸೀನಪ್ಪ, ಪುರುಷೋತ್ತಮ, ಜನಾರ್ದನ, ರಾಜ, ಹರೀಶ್, ಅನಿತ, ಚಿತ್ರ, ಕಿಶೋರ್, ಶಂಕರ, ಲಿಂಗಪ್ಪ, ಹೊನ್ನಪ್ಪ ಪೂಜಾರಿ ಸೇರಿದಂತೆ ಕೆದಮುಳ್ಳೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಿ. ಮಣಿ, ಪಂಚಾಯಿತಿ ಅಧ್ಯಕ್ಷರು, ತೋರ ವಾರ್ಡ್ ಸದಸ್ಯ ರಾಮಯ್ಯ ಸೇರಿದಂತೆ ಇತರರು ಹಾಜರಿದ್ದರು.