ಶನಿವಾರಸಂತೆ, ಜು. ೧೪: ಪಟ್ಟಣ ಹಾಗೂ ಹೋಬಳಿ ಯಾದ್ಯಂತ ನಿರಂತರ ಮಳೆಯಾಗುತ್ತಿದೆ.ಪಟ್ಟಣ ವ್ಯಾಪ್ತಿಯಲ್ಲಿ ಶನಿವಾರ ಬೆಳಿಗ್ಗೆಯಿಂದ ಭಾನುವಾರ ಬೆಳಿಗ್ಗೆ ೮-೩೦ ರವರೆಗೆ ೨.೧೫ ಇಂಚು ಮಳೆಯಾಗಿದೆ. ವರ್ಷಾರಂಭದಿAದ ಈ ವರೆಗೆ ೨೩ ಇಂಚು ಮಳೆಯಾಗಿದೆ.

ಹೋಬಳಿಯಾದ್ಯಂತ ಗ್ರಾಮಗಳಲ್ಲಿ ಕೃಷಿ ಚಟುವಟಿಕೆ ಬಿರುಸಾಗಿ ನಡೆಯುತ್ತಿದ್ದು ಶೇ.೪೦ ರಷ್ಟು ಗದ್ದೆಗಳಲ್ಲಿ ಭತ್ತದ ವ್ಯವಸಾಯ ಮಾಡುತ್ತಿದ್ದಾರೆ. ಇತ್ತೀಚಿನ ಕೆಲ ವರ್ಷಗಳಿಂದ ರೈತರು ಭತ್ತದ ಬೆಳೆಯ ಬಗ್ಗೆ ಒಲವು ತೋರುತ್ತಿಲ್ಲ. ಕೆಲವು ರೈತರು ಗದ್ದೆಗಳಲ್ಲಿ ಅಡಿಕೆ, ಕಾಫಿ ಬೆಳೆಯುತ್ತಿದ್ದಾರೆ. ಮತ್ತೆ ಕೆಲವರು ಗದ್ದೆಗಳನ್ನು ಪಾಳುಬಿಟ್ಟಿದ್ದಾರೆ.

ಶಿಡಿಗಳಲೆ ಗ್ರಾಮದ ನಿವೃತ್ತ ಪ್ರಾಂಶುಪಾಲ ಹಾಗೂ ಕೃಷಿಕ ಎಸ್.ಎಂ.ಉಮಾಶAಕರ್ ಪ್ರತಿವರ್ಷ ತಪ್ಪದೇ ಭತ್ತದ ವ್ಯವಸಾಯ ಮಾಡುತ್ತಿದ್ದು, ತಮ್ಮ ೨.೧೫ ಎಕರೆ ಗದ್ದೆಯಲ್ಲಿ ೩ ತಿಂಗಳ ಬೆಳೆ ತುಳಸಿ ಭತ್ತದ ಅಗೆ ಹಾಕುವ ಕಾರ್ಯ ಆರಂಭಿಸಿದ್ದಾರೆ. ರೈತರು ಭತ್ತದ ಬೇಸಾಯದ ಬಗ್ಗೆ ಆಸಕ್ತಿ ಕಳೆದು ಕೊಳ್ಳಬಾರದು. ಭೂಮಿ ತಾಯಿಯನ್ನು ನಂಬಿ ಕೃಷಿ ಮಾಡಿದರೆ ಫಲ ದೊರೆಯುತ್ತದೆ. ಗದ್ದೆಗಳನ್ನು ಹಾಳು ಬಿಡದೆ ಭತ್ತ ಬೆಳೆದರೆ ಕುಟುಂಬ ಸದಸ್ಯರ ಊಟಕ್ಕಾಗುತ್ತದೆ ಎಂಬ ಭಾವನೆ ಮುಖ್ಯ. ಮಳೆ ಹೀಗೆ ಮುಂದುವರೆದರೆ ಉತ್ತಮ ಇಳುವರಿ ಪಡೆಯಬಹುದು. ಕಿತ್ತೂರು ಗ್ರಾಮದ ರೈತರು ಬಯಲು ಪೂರ್ತಿ ಭತ್ತ ಬೆಳೆದು ಮಾದರಿಯಾಗಿದ್ದಾರೆ. ಯಾರೊಬ್ಬ ರೈತರು ತಮ್ಮ ಗದ್ದೆಗಳನ್ನು ಪಾಳು ಬಿಡದೆ ಪ್ರತಿವರ್ಷ ಭತ್ತದ ವ್ಯವಸಾಯ ಮಾಡುತ್ತಿರುವುದು ಹೆಮ್ಮೆಯ ಸಂಗತಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಹೋಬಳಿ ವ್ಯಾಪ್ತಿಯ ಬಹುತೇಕ ಗದ್ದೆಗಳಲ್ಲಿ ೬ ತಿಂಗಳ ಹೈಬ್ರೀಡ್ ಭತ್ತದ ಸಸಿ ಮಡಿ ಬೆಳೆದು ನಿಂತಿದ್ದು ಕೆಲವು ಗದ್ದೆಗಳಲ್ಲಿ ನಾಟಿ ಕಾರ್ಯ ನಡೆಯುತ್ತಿದೆ.ಮುಂಗಾರು ತಡವಾಗಿ ಆರಂಭವಾದರೂ ಪ್ರಸ್ತುತ ದಿನಗಳಲ್ಲಿ ಹದವಾಗಿ ಮಳೆಯಾಗುತ್ತಿದ್ದು ಅಗೆ ಹಾಕುವುದು, ನಾಟಿ ಕೆಲಸ, ಮತ್ತಿತರ ಗದ್ದೆ ಕೆಲಸ ಸುಗಮವಾಗಿ ಸಾಗುತ್ತಿದೆ ಎನ್ನುತ್ತಾರೆ ರೈತರು.