ಶನಿವಾರಸಂತೆ, ಜು. ೧೪: ಸಮಾನತೆಯನ್ನು ಸಾರಿದ ಹರಿಕಾರ ಶ್ರೀ ನಾರಾಯಣ ಗುರುಗಳ ಆದರ್ಶ ಹಾಗೂ ತತ್ವ ಸಿದ್ಧಾಂತವನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಸುಂದರ ಸಮಾಜ ನಿರ್ಮಾಣವಾಗುತ್ತದೆ. ಎಂದು ಶ್ರೀ ನಾರಾಯಣ ಗುರುಧರ್ಮ ಪರಿಪಾಲನ ಯೋಗಂ ಸಂಘದ ಕೊಡಗು ಜಿಲ್ಲಾ ಅಧ್ಯಕ್ಷ ವಿ.ಕೆ. ಲೋಕೇಶ್ ಅಭಿಪ್ರಾಯ ವ್ಯಕ್ತಪಡಿಸಿದರು.
ಸಮೀಪದ ಗುಡುಗಳಲೆಯ ಬಸಪ್ಪ ಕಲ್ಯಾಣ ಮಂಟಪದಲ್ಲಿ ಶ್ರೀ ನಾರಾಯಣ ಗುರು ಧರ್ಮ ಪರಿಪಾಲನ ಯೋಗಂ ಸಂಘ ಶನಿವಾರಸಂತೆ ಶಾಖೆಯ ವತಿಯಿಂದ ನಡೆದ ೩ ನೇ ವರ್ಷದ ವಾರ್ಷಿಕ ಮಹಾಸಭೆಯಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಕೊಡಗು ಜಿಲ್ಲೆಯಲ್ಲಿ ೪೦ ಶ್ರೀ ನಾರಾಯಣ ಗುರುಧರ್ಮ ಪರಿಪಾಲನ ಯೋಗಂ ಸಂಘದ ಶಾಖೆಗಳಿವೆ. ೧೮ ಸಾವಿರ ಸದಸ್ಯರಿದ್ದಾರೆ, ಸದಸ್ಯರ ಮಕ್ಕಳ ವಿದ್ಯಾಭ್ಯಾಸಕ್ಕೆ ಆರ್ಥಿಕ ಕೊರತೆ ಉಂಟಾದರೆ ಜಿಲ್ಲಾ ಸಂಘದ ಗಮನಕ್ಕೆ ತಂದಲ್ಲಿ ಧನಸಹಾಯ ಮಾಡಲಾಗುವುದು. ಸಂಘಟನೆಯ ಮೂಲಕ ಸದಸ್ಯರು ಶಕ್ತರಾಗಬೇಕು ಎಂದು ಅವರು ಕರೆ ನೀಡಿದರು.
ಸಂಘದ ಸಲಹೆಗಾರ ಡಾ.ಉದಯಕುಮಾರ್ ಮಾತನಾಡಿ, ಸಂಘಟನೆಯಿAದ ಸಂಘದ ಅಭಿವೃದ್ಧಿ ಸಾಧ್ಯ. ಮಲೆಯಾಳಿ ಸಮಾಜ ಬಾಂಧವರು ಸಂಘಟಿತರಾಗಬೇಕು ಎಂದು ಹೇಳಿ ಸಂಘದ ಧ್ಯೇಯೋದ್ಧೇಶಗಳನ್ನು ತಿಳಿಸಿದರು.
ಶ್ರೀ ನಾರಾಯಣ ಗುರು ಧರ್ಮ ಪರಿಪಾಲನ ಯೋಗಂ ಸಂಘ ಶನಿವಾರಸಂತೆ ಶಾಖೆಯ ಅಧ್ಯಕ್ಷ ಸುಕುಮಾರ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಂಘದ ಜಿಲ್ಲಾ ಕಾರ್ಯದರ್ಶಿ ಪ್ರೇಮದಾಸ್, ಸದಸ್ಯ ಗಿರೀಶ್, ಯೂನಿಯನ್ ಬ್ಯಾಂಕ್ ನಿರ್ದೇಶಕ ಆನಂದ್ ಹಾಗೂ ನೂರಾರು ಮಂದಿ ಮಲೆಯಾಳಿ ಸಮಾಜ ಬಾಂಧವರು ಹಾಜರಿದ್ದರು.
ಸಮಾರಂಭದ ನಂತರ ಸಂಘದ ನೂತನ ಆಡಳಿತ ಮಂಡಳಿಯನ್ನು ರಚಿಸಲಾಯಿತು. ನೂತನ ಅಧ್ಯಕ್ಷರಾಗಿ ರವಿಕುಮಾರ್ ಹಾಗೂ ೧೦ ಮಂದಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.