ಚೆಯ್ಯಂಡಾಣೆ, ಜು. ೧೫: ಕಾಡಾನೆಯೊಂದು ಕಾರ್ಮಿಕನ ಮೇಲೆ ದಾಳಿ ನಡೆಸಿದ್ದು, ಅದೃಷ್ಟವಶಾತ್ ಕಾರ್ಮಿಕ ಪ್ರಾಣಾಪಾಯದಿಂದ ಪಾರಾದ ಘಟನೆ ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರಪಟ್ಟು, ಪೋದವಾಡ ಗ್ರಾಮದಲ್ಲಿ ನಡೆದಿದೆ.

ಸ್ಥಳೀಯ ನರಿಯಂದಡ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕೋಡಿರ ವಿನೋದ್ ನಾಣಯ್ಯ ಅವರ ಲೈನ್ ಮನೆಯಲ್ಲಿ ವಾಸವಾಗಿದ್ದ ಕಾರ್ಮಿಕ ಚಾಮಿ (೬೦) ಅವರಿಗೆ ತಾ.೧೪ರ ಮಧ್ಯರಾತ್ರಿ ಲೈನ್ ಮನೆಯಲ್ಲಿದ್ದ ಚಾಮಿ ಹೊರಗಡೆ ಮಳೆ ಇದ್ದ ಕಾರಣ ಇವರಿಗೆ ಏನೋ ಶಬ್ದ ಕೇಳಿದೆ. ಆ ಸಂದರ್ಭ ಹೊರಗಡೆ ಬಂದಿದ್ದಾರೆ. ಅಷ್ಟರಲ್ಲಿ ಒಂಟಿ ಸಲಗ ಚಾಮಿಯನ್ನು ಅಟ್ಟಿಸಿದೆ. ಈ ಸಂದರ್ಭ ಬಿದ್ದು ಸಣ್ಣಪುಟ್ಟ ಗಾಯಗಳಾಗಿವೆ, ಲೈನ್ ಮನೆಯ ಒಳಗೆ ಬಂದ ಚಾಮಿಯನ್ನು ಸಲಗ ಹಿಂಬಾಲಿಸಿದೆ. ನಂತರ ಲೈನ್ ಮನೆಯ ಸುತ್ತ ತುಳಿದು ಮನೆಗೆ ಹಾನಿಪಡಿಸಿ ತೆರಳಿದೆ.

ಈ ವ್ಯಾಪ್ತಿಯಲ್ಲಿ ನಿರಂತರ ಕಾಡಾನೆ ಹಾವಳಿ ಇದ್ದರೂ ಶಾಶ್ವತ ಪರಿಹಾರ ಅರಣ್ಯ ಇಲಾಖೆ ಕಂಡುಕೊಳ್ಳುತ್ತಿಲ್ಲ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ವೀರಾಜಪೇಟೆ ವಲಯ ಅರಣ್ಯಧಿಕಾರಿ ಕಳ್ಳೀರ ದೇವಯ್ಯ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಗಾಯಾಳು ಚಾಮಿಯನ್ನು ವೀರಾಜಪೇಟೆ ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ. ಈ ಸಂದರ್ಭ ಡಿ.ಆರ್.ಎಫ್.ಒ ಶ್ರೀನಿವಾಸ್, ಕ್ಯಾಂಪ್ ಸಿಬ್ಬಂದಿಗಳು ಇದ್ದರು.