ಕೂಡಿಗೆ, ಜು. ೧೫: ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಣಿವೆಯ ಶ್ರೀ ರಾಮಲಿಂಗೇಶ್ವರ ದೇವಾಲಯದ ಮುಂಭಾಗದಲ್ಲಿ ಹರಿಯುವ ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ತೂಗುಸೇತುವೆಯು ಹಾನಿಯಾಗಿ ಮೂರು ವರ್ಷಗಳು ಕಳೆದರೂ ಸಹ ಇದರ ದುರಸ್ತಿಗೆ ಜನಪ್ರತಿನಿಧಿಗಳು, ಅಧಿಕಾರಿಗಳು ಮುಂದಾಗದಿರುವುದು ಪ್ರಸ್ತುತ ಸುರಿಯುತ್ತಿರುವ ಬಿರುಸಿನ ಮಳೆಗೆ ಸೇತುವೆಯು ಅಪಾಯದಂಚಿನಲ್ಲಿಯೇ ತೂಗುತ್ತಿದೆ.

ಕಣಿವೆಯ ಶ್ರೀ ರಾಮಲಿಂಗೇಶ್ವರ ದೇವಾಲಯದ ಮುಂಭಾಗದಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಮಲೆನಾಡು ಅಭಿವೃದ್ಧಿ ಯೋಜನೆಯ ಅಡಿಯಲ್ಲಿ ಕಳೆದ ೧೨ ವರ್ಷಗಳ ಹಿಂದೆ ಮೈಸೂರು ಜಿಲ್ಲೆ ಮತ್ತು ಕೊಡಗು ಜಿಲ್ಲೆಯ ಸಂಪರ್ಕಕ್ಕೆ ಅನುಕೂಲವಾಗುವ ದೃಷ್ಟಿಯಿಂದ ಮತ್ತು ಪ್ರವಾಸೋದ್ಯಮಕ್ಕೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ತೂಗು ಸೇತುವೆ ನಿರ್ಮಾಣಗೊಂಡಿತ್ತು. ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ೨೦ ಕ್ಕೂ ಹೆಚ್ಚು ಗ್ರಾಮಗಳಿಗೆ ಮತ್ತು ಗ್ರಾಮಾಂತರ ಪ್ರದೇಶದ ಸಾರ್ವಜನಿಕರಿಗೆ, ರೈತರಿಗೆ ಕೊಡಗು ಜಿಲ್ಲೆಯ ಸಂಪರ್ಕಕ್ಕೆ ಪೂರಕವಾಗುವಂತೆ ತೂಗು ಸೇತುವೆ ನಿರ್ಮಾಣದ ಕಾರ್ಯ ನಡೆದಿತ್ತು.

ಆದರೆ ೨೦೧೯ರಲ್ಲಿ ಹೆಚ್ಚು ಮಳೆಯಿಂದಾಗಿ ಸಂಭವಿಸಿದ ಕಾವೇರಿ ನದಿ ಪ್ರವಾಹದಿಂದಾಗಿ ತೂಗು ಸೇತುವೆಯು ನದಿಯ ನೀರಿನ ಸೆಳೆತಕ್ಕೆ ಸಿಲುಕಿ ಸೇತುವೆಯ ಹಳಿಗಳು ಕೆಲವೆಡೆ ಮುರಿದಿದ್ದು, ಎರಡು ಕಡೆಗಳಲ್ಲಿಯೂ ಕಬ್ಬಿಣದ ಕಂಬಗಳು ತುಂಡಾಗಿತ್ತು.

(ಮೊದಲ ಪುಟದಿಂದ) ಆದರೆ ಮೈಸೂರು ಜಿಲ್ಲೆಯ ಗ್ರಾಮಾಂತರ ಪ್ರದೇಶಗಳ ಸಾರ್ವಜನಿಕರು, ವಿದ್ಯಾರ್ಥಿಗಳು ಕೊಡಗು ಜಿಲ್ಲೆಗೆ ಬರಬೇಕಾದ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ತೂಗು ಸೇತುವೆಯ ಹಳಿಗಳನ್ನು ದುರಸ್ತಿ ಮಾಡಲಾಗಿತ್ತು, ಇದೀಗ ಕಬ್ಬಿಣದ ಕಂಬಿಗಳು ಹಾಗೇ ಉಳಿದಿರುವ ಹಿನ್ನೆಲೆ ಭಾರೀ ಮಳೆ-ಗಾಳಿಗೆ ಬೀಳುವ ಸಂಭವ ಹೆಚ್ಚಿದೆ.

ಕಳೆದ ಮೂರು ವರ್ಷಗಳಿಂದಲೂ ನಿರಂತರವಾಗಿ ಸ್ಥಳೀಯ ಗ್ರಾಮಸ್ಥರು, ಸಾರ್ವಜನಿಕರು ಸಂಬAಧಿಸಿದ ಇಲಾಖೆಯವರಿಗೆ, ಜನಪ್ರತಿನಿಧಿಗಳಿಗೆ ಹಾಗೂ ವಾರ್ಷಿಕ ಶ್ರೀ ರಾಮಲಿಂಗೇಶ್ವರ ರಥೋತ್ಸವ ಸಂದರ್ಭದಲ್ಲಿ ಅಗಮಿಸುವ ರಾಜ್ಯಮಟ್ಟದ ರಾಜಕಾರಣಿಗಳಿಗೆ ಸಮಸ್ಯೆ ಬಗ್ಗೆ ವಿವರಿಸಿದರೂ ಯಾರೂ ಕೂಡ ಇದರ ದುರಸ್ತಿ ಸಂಬAಧ ಗಮನ ಹರಿಸುತ್ತಿಲ್ಲ. ಅಪಾಯಮಟ್ಟದಲ್ಲಿರುವ ತೂಗು ಸೇತುವೆ ಮೇಲೆ ದಿನಂಪ್ರತಿ ಸಾವಿರಾರು ಸಾರ್ವಜನಿಕರು ತಿರುಗಾಡುತ್ತಾರೆ. ವಯೋವೃದ್ಧರು, ಮಹಿಳೆಯರು, ಸೇರಿದಂತೆ ನೂರಾರು ಶಾಲಾ-ಕಾಲೇಜು ವಿದ್ಯಾರ್ಥಿಗಳೂ ತಿರುಗಾಡುತ್ತಿದ್ದಾರೆ. ಮುಂದಾಗಬಹುದಾದ ಅನಾಹುತಗಳನ್ನು ತಪ್ಪಿಸಲು ಸಂಬAಧಿಸಿದ ಅಧಿಕಾರಿ ವರ್ಗದವರು, ಜನಪ್ರತಿನಿಧಿಗಳು ತುರ್ತಾಗಿ ಗಮನ ಹರಿಸಬೇಕೆಂದು ಈ ವ್ಯಾಪ್ತಿಯ ನೂರಾರು ಸಾರ್ವಜನಿಕರ ಆಗ್ರಹವಾಗಿದೆ.

ಇದೀಗ ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಕಾವೇರಿ ನದಿ ಮತ್ತು ಹಾರಂಗಿ ನದಿಯ ನೀರಿನ ಮಟ್ಟದಲ್ಲಿ ಏರಿಕೆಯಾಗಿ ಹಾರಂಗಿ ನದಿಯು ಕೂಡಿಗೆಯ ಸಮೀಪದಲ್ಲಿ ಕಾವೇರಿ ನದಿಗೆ ಸಂಗಮವಾಗಿ ಮುಂದೆ ಹರಿದು ನದಿಯ ನೀರಿನಮಟ್ಟ ಬಾರಿ ಏರಿಕೆಯಾಗುತ್ತಿದೆ. ನೂರಾರು ಪ್ರವಾಸಿಗರು, ಸಾರ್ವಜನಿಕರು ಈ ತೂಗು ಸೇತುವೆ ಮೇಲೆ ನಿಂತು ಇದನ್ನು ವೀಕ್ಷಿಸುತ್ತಿದ್ದಾರೆ. ತಕ್ಷಣವೇ ಈ ಬಗ್ಗೆ ಸಂಬAಧಿಸಿದ ಇಲಾಖೆ ಸೇರಿದಂತೆ ಜನಪ್ರತಿನಿಧಿಗಳು ಎಚ್ಚೆತ್ತು ಅನಾಹುತ ಸಂಭವಿಸುವುದನ್ನು ತಡೆಯುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ. -ಕೆ.ಕೆ. ನಾಗರಾಜಶೆಟ್ಟಿ