ಶನಿವಾರಸಂತೆ, ಜು. ೧೫ : ಜೀವ ಉಳಿಸುವ ಮಹಾದಾನಗಳಲ್ಲಿ ರಕ್ತದಾನವೂ ಶ್ರೇಷ್ಠವಾದುದು. ಪ್ರಸ್ತುತ ದಿನಗಳಲ್ಲಿ ರಕ್ತಕ್ಕೆ ಸಾಕಷ್ಟು ಬೇಡಿಕೆ ಹೆಚ್ಚಾಗಿರುವ ಕಾರಣ ಜಿಲ್ಲೆಯಾದ್ಯಂತ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಏರ್ಪಡಿಸಲಾಗುತ್ತಿದೆ ಎಂದು ಜಿಲ್ಲಾ ಆಸ್ಪತ್ರೆಯ ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ.ಕೆ. ಕರುಂಬಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು.
ಕೊಡ್ಲಿಪೇಟೆಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಹಾಗೂ ರಕ್ತನಿಧಿ ಕೇಂದ್ರದ ಸಹಭಾಗಿತ್ವದಲ್ಲಿ ನಡೆದ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದಿನನಿತ್ಯ ಪತ್ರಿಕೆಗಳನ್ನು ಓದುವಾಗ ನಮ್ಮ ರಾಜ್ಯದಲ್ಲಿ ಡೆಂಗ್ಯೂ ಜ್ವರ ವ್ಯಾಪಕವಾಗಿ ಹರಡುತ್ತಿರುವುದು ಕಂಡುಬರುತ್ತಿದೆ. ಅದನ್ನು ನಿಭಾಯಿಸುವ ಹೊಣೆಗಾರಿಕೆಯಿದೆ. ಬಹುತೇಕ ಆಸ್ಪತ್ರೆಗಳಲ್ಲಿ ಡೆಂಗ್ಯೂ ಜ್ವರದಿಂದ ಬಳಲುತ್ತಿರುವ ರೋಗಿಗಳಿದ್ದಾರೆ.ಕೆಲವು ರೋಗಿಗಳಿಗೆ ರಕ್ತದ ಪ್ಲೇಟ್ಲೇಟ್ ಅವಶ್ಯಕತೆಯಿದೆ. ಶೇ.೯೫ ರಷ್ಟು ರೋಗಿಗಳು ಔಷಧಿಯಿಂದ ಸಹಜವಾಗಿ ಗುಣಮುಖರಾಗುತ್ತಾರೆ. ಆದರೆ, ಕೆಲವರಿಗೆ ಪ್ಲೇಟ್ಲೇಟ್ ಕೊರತೆಯಿಂದ ನಿಧನರಾಗುತ್ತಿರುವ ನಿದರ್ಶನಗಳನ್ನು ನೋಡುತ್ತಿದ್ದೇವೆ. ಅದನ್ನು ತಡೆಗಟ್ಟುವ ಉದ್ದೇಶದಿಂದಲೇ ಆರೋಗ್ಯ ಇಲಾಖೆ ನಿರಂತರವಾಗಿ ರಕ್ತದಾನ ಶಿಬಿರವನ್ನು ಏರ್ಪಡಿಸುತ್ತಿದೆ. ರಾಜ್ಯದಲ್ಲಿ ಯಾರೂ ಪ್ಲೇಟ್ಲೇಟ್ ಕೊರತೆಯಿಂದ ಬಳಲಬಾರದು ಎಂಬ ಉದ್ದೇಶದಿಂದಲೇ ಆರೋಗ್ಯ ಇಲಾಖೆ ಶ್ರಮವಹಿಸುತ್ತಿದೆ ಎಂದರು.
ಬೆಳಿಗ್ಗೆ ೧೦ ಗಂಟೆಗೆ ಆರಂಭವಾಗಿ ಮಧ್ಯಾಹ್ನ ೨ ಗಂಟೆಯವರೆಗೆ ನಡೆದ ಶಿಬಿರದಲ್ಲಿ ಕೊಡ್ಲಿಪೇಟೆ ಉಪ ಪೊಲೀಸ್ ಠಾಣೆ ಎಎಸ್ಐ ಚೆನ್ನಯ್ಯ, ಸಿಬ್ಬಂದಿ ಅನಿಲ್, ರೋಟರಿ ಪದಾಧಿಕಾರಿಗಳಾದ ಬಿ.ಕೆ.ಯತೀಶ್, ಪ್ರವೀಣ್ ದಂಪತಿ, ಗ್ರಾಮ ಪಂಚಾಯಿತಿ ಸದಸ್ಯ ಹನೀಫ್, ನೂರ್ ಯೂತ್ ಸಮಿತಿಯ ೨೦ ಯುವಕರು, ಆಶಾ ಕಾರ್ಯಕರ್ತೆಯರಾದ ತ್ರಿವೇಣಿ, ಪ್ರವೀಣ, ರಾಜೇಶ್ವರಿ, ಸಮುದಾಯ ಆರೋಗ್ಯ ಅಧಿಕಾರಿ ಕೇಶವಮೂರ್ತಿ, ಆರೋಗ್ಯ ಕೇಂದ್ರದ ಸಿಬ್ಬಂದಿ ವಿಶಾಲ್, ಇತರ ಮೂವರು ಸಿಬ್ಬಂದಿ ಸೇರಿದಂತೆ ೫೨ ಮಂದಿ ಸಾರ್ವಜನಿಕರು ರಕ್ತದಾನ ಮಾಡಿದರು. ಎಲ್ಲರಿಗೂ ಆರೋಗ್ಯ ಕೇಂದ್ರದ ವತಿಯಿಂದ ಸಮರ್ಪಣಾ ಪತ್ರ ವಿತರಿಸಲಾಯಿತು.
ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಧನಿಕಾ ಮಾತನಾಡಿ, ಸ್ವಯಂ ಪ್ರೇರಿತ ರಕ್ತದಾನಕ್ಕೆ ವಿವಿಧ ಇಲಾಖಾ ಸಿಬ್ಬಂದಿಗಳು ಸಂಘಸAಸ್ಥೆಗಳು ಹಾಗೂ ಸಾರ್ವಜನಿಕರಿಂದ ಉತ್ತಮ ಸ್ಪಂದನ ದೊರೆತ್ತಿದ್ದು, ೫೨ ಮಂದಿ ರಕ್ತದಾನ ಮಾಡಿದ್ದಾರೆ. ಶಿಬಿರ ಸಂಪೂರ್ಣ ಯಶಸ್ವಿಯಾಯಿತು ಎಂದು ಸಂತಸ ವ್ಯಕ್ತಪಡಿಸಿದರು.
ಆರೋಗ್ಯ ಶಿಕ್ಷಣಾಧಿಕಾರಿ ಟಿ.ಕೆ. ಮಂಜುಳಾ, ಪತ್ರಕರ್ತ ಫ್ರೆಡ್ಡಿ, ಪಂಚಾಯಿತಿ ಸದಸ್ಯ ವಾಹಬ್, ಆಶಾ ಕಾರ್ಯಕರ್ತೆ ಶಾಹಿದಾ, ಮಡಿಕೇರಿ ರಕ್ತನಿಧಿ ಕೇಂದ್ರದ ಸಿಬ್ಬಂದಿಗಳು, ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು ಹಾಜರಿದ್ದರು. ಬಿ.ಎಚ್.ಒ. ಮಂಜುಳಾ ಸ್ವಾಗತಿಸಿ, ವಂದಿಸಿದರು.