ಮಡಿಕೇರಿ, ಜು. ೧೫: ಆರ್ಥಿಕ ಹೊರೆಯನ್ನು ಅನುಭವಿಸುತ್ತಿರುವ ರಾಜ್ಯ ಸರ್ಕಾರ ಆರ್ಥಿಕ ಸಂಪನ್ಮೂಲ ಕ್ರೋಢೀಕರಣಕ್ಕಾಗಿ ಕೊಡಗು ಜಿಲ್ಲೆಯಲ್ಲಿ ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿಗೆ ಪರೋಕ್ಷವಾಗಿ ಉತ್ತೇಜನ ನೀಡುತ್ತಿದೆ ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು.ನಾಚಪ್ಪ ಗಂಭೀರ ಆರೋಪ ಮಾಡಿದ್ದಾರೆ.
ಸಿದ್ದಾಪುರದ ಭೂತಪೂರ್ವ ಬಿಬಿಟಿಸಿಯ ೨೪೦೦ ಎಕರೆ ಕಾಫಿ ತೋಟಗಳು, ಇದೀಗ ಆರೆಂಜ್ ಕೌಂಟಿ ರೆಸಾರ್ಟ್ ಒಡೆತನದ ಪುನರ್ ನಾಮಕರಣಗೊಂಡ "ರಾಮಪುರಂ ಹೋಲ್ಡ್ಡಿಂಗ್ಸ್ ಇವಾಲ್ವ್ ಬ್ಯಾಕ್ ಎಲ್ಖಿಲ್"- ಬೀಟಿಕಾಡ್ ಬ್ಲಾಕ್ ಕಾಫಿ ತೋಟಗಳು ಸೇರಿದಂತೆ ಕೊಡಗು ಜಿಲ್ಲೆಯ ವಿವಿಧೆಡೆ ನಡೆಯುತ್ತಿರುವ ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿಯನ್ನು ಸ್ಥಗಿತಗೊಳಿಸಬೇಕೆಂದು ಒತ್ತಾಯಿಸಿ ಸಿಎನ್‌ಸಿ ವತಿಯಿಂದ ಪೊನ್ನಂಪೇಟೆ ಪಟ್ಟಣದಲ್ಲಿ ನಡೆದ ಜನಜಾಗೃತಿ ಮಾನವ ಸರಪಳಿ ಕಾರ್ಯಕ್ರಮದ ನೇತೃತ್ವ ವಹಿಸಿ ಅವರು ಮಾತನಾಡಿದರು.
ಭೂಪರಿವರ್ತನೆ ಮತ್ತು ನೋಂದಣಿಗೆ ದೊಡ್ಡ ಮೊತ್ತದ ಶುಲ್ಕ ವಸೂಲಿ ಮಾಡುತ್ತಿರುವ ಸರ್ಕಾರ ಕೊಡಗು ಜಿಲ್ಲೆಯ ಕೃಷಿಭೂಮಿಯನ್ನು ಸುಲಭವಾಗಿ ಪರಭಾರೆ ಮಾಡಲು ಅವಕಾಶ ನೀಡುತ್ತಿದೆ. ಸರ್ಕಾರ ದಿನಕ್ಕೊಂದು ಕರಾಳ ಕಾನೂನನ್ನು ಜಾರಿಗೆ ತಂದು ಕೊಡವರಿಗೆ ಕಿರುಕುಳ ನೀಡುತ್ತಿದೆ. ಕೊಡವ ಲ್ಯಾಂಡ್‌ನಿAದಲೇ ಒಕ್ಕಲೆಬ್ಬಿಸುವ ಪ್ರಯತ್ನಗಳು ನಡೆಯುತ್ತಿದೆ. ದೊಡ್ಡ ದೊಡ್ಡ ಬಂಡವಾಳಶಾಹಿಗಳ ಪರ ನಿರ್ಣಯಗಳನ್ನು ತೆಗೆದುಕೊಳ್ಳುತ್ತಿರುವ ಸರ್ಕಾರ ಮತಬ್ಯಾಂಕ್‌ಗಾಗಿ ಕೊಡಗನ್ನು ಬಲಿಪಶು ಮಾಡುತ್ತಿದೆ.
ಈ ಹಿಂದಿನ ಸರ್ಕಾರ ೩೦ ಎಕರೆವರೆಗಿನ ಒತ್ತುವರಿ ಜಮೀನನ್ನು ೩೦ ವರ್ಷ ಗುತ್ತಿಗೆ ನೀಡುವ ಕ್ರಮ ಜಾರಿಗೆ ತಂದಿತ್ತು. ಇದಕ್ಕೆ ಪೂರಕವಾಗಿ ಈಗಿನ ಸರ್ಕಾರ ವಿಧಾನಸಭೆಯಲ್ಲಿ ಅನುಮೋದನೆ ನೀಡಿ ಕೃಷಿಕರನ್ನು ನಿರಾಳಗೊಳಿಸಿತ್ತು. ಆದರೆ ಇತ್ತೀಚಿನ ಬೆಳವಣಿಗೆಗಳು ವ್ಯತಿರಿಕ್ತವಾಗಿದ್ದು, ಗುತ್ತಿಗೆ ಆಧಾರದ ಯೋಜನೆ ಅನುಷ್ಠಾನಗೊಳ್ಳುವ ಬಗ್ಗೆ ಅನುಮಾನ ಕಾಡುತ್ತಿದೆ. ಆದಿಮಸಂಜಾತ ಕೊಡವ ಬುಡಕಟ್ಟು ಜನರಿಗೆ ಒಂದಿಲ್ಲ ಒಂದು ಕಾನೂನಿನ ಮೂಲಕ ಕಿರುಕುಳವಾಗುತ್ತಿದೆ. ಸದಾ ಜನರ ಕಲ್ಯಾಣವನ್ನು ಬಯಸುವ ಸರ್ಕಾರದಿಂದ ನಾವು ಇದನ್ನು ನಿರೀಕ್ಷೆ ಮಾಡಿರಲಿಲ್ಲ, ಕೊಡವರು ಕಲ್ಯಾಣ ರಾಜ್ಯದ ವ್ಯಾಪ್ತಿಯಲ್ಲಿ ಸ್ವತಂತ್ರವಾಗಿ ಬದುಕಬೇಕೆ ಅಥವಾ ಬೇಡವೇ ಎನ್ನುವ ಗೊಂದಲವನ್ನು ಸರ್ಕಾರ ಸೃಷ್ಟಿಸಿದೆ.
ತಿತಿಮತಿ ಸೇರಿದಂತೆ ಕೆಲವು ಗ್ರಾಮಗಳ ಬೆಳೆಗಾರರಿಗೆ ಅಧಿಕಾರಿಗಳು ಕರೆ ಮಾಡಿ ಜಮೀನು ಸರ್ವೆ ಮಾಡಬೇಕು, ಒತ್ತುವರಿ ಇದ್ದರೆ ವಾಪಾಸ್ ಪಡೆಯುತ್ತೇವೆ ಎಂದು ಹೇಳುತ್ತಿದ್ದಾರೆ. ಇದು ಕೊಡವರಿಗೆ ಆಗುತ್ತಿರುವ ದೊಡ್ಡ ಅನ್ಯಾಯವಾಗಿದೆ ಎಂದು ಎನ್.ಯು.ನಾಚಪ್ಪ ಆರೋಪಿಸಿದರು.
ಸರ್ಕಾರಕ್ಕೆ ಧೈರ್ಯವಿದ್ದರೆ ಮೊದಲು ದೊಡ್ಡ ದೊಡ್ಡ ಕಂಪೆನಿಗಳು ಒತ್ತುವರಿ ಮಾಡಿಕೊಂಡಿರುವ ನೂರಾರು ಎಕರೆ ಭೂಮಿಯನ್ನು ತೆರವುಗೊಳಿಸಲಿ ಎಂದು ಒತ್ತಾಯಿಸಿದರು.
ಇದಕ್ಕಾಗಿ ವ್ಯಾಪಕ ಜನಜಾಗೃತಿ ಅಗತ್ಯವಾಗಿದ್ದು, ಜಿಲ್ಲೆಯಾದ್ಯಂತ ಶಾಂತಿಯುತ ಮಾನವ ಸರಪಳಿ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಹೇಳಿದರು. ತಾ.೨೪ ರಂದು ವೀರಾಜಪೇಟೆ, ತಾ.೨೯ ರಂದು ಟಿ.ಶೆಟ್ಟಿಗೇರಿ ಮತ್ತು ಆ.೧೦ ರಂದು ಮಾದಾಪುರದಲ್ಲಿ ಮಾನವಸರಪಳಿ ಜನಜಾಗೃತಿ ಕಾರ್ಯಕ್ರಮ ನಡೆಯಲಿದೆ ಎಂದು ನಾಚಪ್ಪ ಇದೇ ಸಂದರ್ಭ ತಿಳಿಸಿದರು.
ಚೇಂದಿರ ಶೈಲಾ, ಮುದ್ದಿಯಡ ಲೀಲಾವತಿ, ಲೆಫ್ಟಿನೆಂಟ್ ಕರ್ನಲ್ ಬಿ.ಎಂ.ಪಾರ್ವತಿ, ಮತ್ರಂಡ ಬೋಜಮ್ಮ, ಮಾಚಿಮಾಡ ಲವ್ಲಿ, ಮಾಣಿಪಂಡ ರತಿ, ಮಲ್ಚಿರ ಕವಿತಾ, ಕಾಯಮಾಡ ಕಮಲ, ಕೇಚೆಟ್ಟಿರ ಕಾಮುನಿ, ಕಾಳಮಂಡ ನಯನ, ಕಾಳಮಂಡ ಕಲ್ಪಕ್, ಮಲ್ಚಿರ ಪ್ರತೀಮ, ಬೊಳ್ಳಮ್ಮ, ಸುಳ್ಳಿಮಾಡ ವಿನು, ಆಲೆಮಾಡ ರೋಶನ್, ಆಲೆಮಾಡ ನವೀನ, ಮತ್ರಂಡ ನವೀನ್, ಮುದ್ದಿಯಡ ಕಿರಣ್, ಗಾಂಡAಗಡ ಕೌಶಿಕ್, ಕಾಟಿಮಾಡ ಜಿಮ್ಮಿ ಅಣ್ಣಯ್ಯ, ಕೊಳ್ಳಿಮಾಡ ಸೋಮಯ್ಯ, ಕೊಳ್ಳಿಮಾಡ ಚಿಪ್ಪಿ ಕಾರ್ಯಪ್ಪ, ಕೊಟ್ಟುಕತ್ತೀರ ಸೋಮಣ್ಣ, ನೆರೆಯಮಂಡ ಸುಬ್ರಮಣಿ, ಕೋದೆಂಗಡ ವಿಠಲ್, ಮತ್ರಂಡ ರಾಜೇಂದ್ರ, ಕಾಕಮಾಡ ದಿಕ್ಷೀತ್, ಬಾಚಮಾಡ ಬೊಳ್ಳಿಯಪ್ಪ, ನೂರೇರ ಸುಗಂಧ, ಬೊಟ್ಟಂಗಡ ಗಿರೀಶ್, ಕಿರಿಯಮಾಡ ಶರೀನ್, ಅಪ್ಪೆಂಗಡ ಮಾಲೆ, ಕಾಂಡೇರ ಸುರೇಶ್, ಅಜ್ಜಿಕುಟ್ಟೀರ ಲೋಕೇಶ್, ಜಮ್ಮಡ ಮೋಹನ್, ಮದ್ರೀರ ಕರುಂಬಯ್ಯ, ಇನ್ನಿತರರು ಪಾಲ್ಗೊಂಡಿದ್ದರು.