ವೀರಾಜಪೇಟೆ, ಜು. ೧೫: ವೀರಾಜಪೇಟೆ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಳೆದ ೨೪ ಗಂಟೆಗಳ ಅವಧಿಯಲ್ಲಿ ಧಾರಾಕಾರ ಮಳೆಯಾಗಿದೆ.
ಶನಿವಾರದಿಂದ ಭಾನುವಾರ ರಾತ್ರಿಯಿಡಿ ಸುರಿದ ಮಳೆಯು ಸೋಮವಾರವೂ ಮುಂದು ವರೆಯಿತು. ಸೋಮವಾರ ದಿನವಿಡಿ ಬಿಡುವು ನೀಡದೆ ಮಳೆ ಸುರಿಯಿತು. ಪಟ್ಟಣದ ಸುತ್ತಮುತ್ತಲಿನ ಪ್ರದೇಶಗಳ ಆರ್ಜಿ, ಬೇಟೋಳಿ, ರಾಮನಗರ, ಹೆಗ್ಗಳ, ಬಿಟ್ಟಂಗಾಲ, ಬಾಳುಗೋಡು, ಮಗ್ಗುಲ, ಬಿಳುಗುಂದ, ಕದನೂರು, ಕಾಕೋಟುಪರಂಬು, ದೇವಣಗೇರಿ, ಚೆಂಬೆಬೆಳ್ಳೂರು, ಮೈತಾಡಿ, ಕೊಂಡAಗೇರಿ, ನಡಿಕೇರಿ, ಬೋಯಿಕೇರಿ, ಬಿಟ್ಟಂಗಾಲ, ನಾಂಗಾಲ, ಪಾಲಂಗಾಲ, ಅರಮೇರಿ, ನಾಲ್ಕೇರಿ, ಕಡಂಗಮರೂರು, ಗ್ರಾಮಗಳ ವ್ಯಾಪ್ತಿಯಲ್ಲೂ ಕಳೆದ ೨೪ ಗಂಟೆಗಳ ಅವಧಿಯಲ್ಲಿ ಉತ್ತಮ ಮಳೆ ಸುರಿದಿದೆ.
ಮಳೆಯಿಂದಾಗಿ ಭಾನುವಾರ ವೀರಾಜಪೇಟೆ ಹೋಬಳಿಯ ಕೆದಮುಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಟ್ಟೋಳಿ ಗ್ರಾಮದ ಹಸೀನಾ ಹಾಗೂ ಸೌಮ್ಯ ಎಂಬುವವರ ಹಳೆಯದಾದ ಮನೆಯ ಎದುರಿನ ಗೋಡೆ ಬಿದ್ದು ಸಣ್ಣ ಪ್ರಮಾಣದಲ್ಲಿ ಹಾನಿಯಾಗಿದೆ. ಸ್ಥಳಕ್ಕೆ ಗ್ರಾಮ ಲೆಕ್ಕಿಗರಾದ ಅನುಷಾ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಿರಂತರವಾಗಿ ಸುರಿದ ಮಳೆಯಿಂದಾಗಿ ಸಮೀಪದ ಬೋಯಿಕೇರಿ, ಬೇತ್ರಿಯಲ್ಲಿನ ಕಾವೇರಿ ಹೊಳೆ ಹಾಗೂ ಕದನೂರು ಹೊಳೆಯ ನೀರಿನ ಮಟ್ಟದಲ್ಲಿ ಗಣನೀಯ ಏರಿಕೆ ಕಂಡು ಬಂದಿದೆ. ಭತ್ತದ ಗದ್ದೆಗಳಲ್ಲಿ ನೀರು ನಿಂತಿದೆ.
- ಈಶಾನ್ವಿ