ಸಿದ್ದಾಪುರ, ಜು. ೧೫: ನಿವೇಶನ ಇಲ್ಲದ ಕುಟುಂಬಗಳಿಗೆ ನಿವೇಶನ ನೀಡಬೇಕು. ಆದಿವಾಸಿಗಳಿಗೆ ಶಾಶ್ವತ ಸೂರು ಒದಗಿಸಿಕೊಡಬೇಕೆಂದು ಕಳೆದ ೧೫ ದಿನಗಳಿಂದ ಆದಿವಾಸಿಗಳು ನಡೆಸುತ್ತಿದ್ದ ಹೋರಾಟವನ್ನು ಶಾಸಕರ ಭರವಸೆ ಮೇಲೆ ಇಂದು ಕೈ ಬಿಡಲಾಯಿತು. ಬುಡಕಟ್ಟು ಕಾರ್ಮಿಕ ಸಂಘಟನೆ ವತಿಯಿಂದ ಅಮ್ಮತಿ ಹೋಬಳಿ ವ್ಯಾಪ್ತಿಯ ಹೊಸೂರು ಬೆಟ್ಟಗೇರಿ ಗ್ರಾಮ ಪಂಚಾಯಿತಿ ಕಚೇರಿಯ ಎದುರು ಆದಿವಾಸಿಗಳು ನಿವೇಶನಕ್ಕಾಗಿ ಒತ್ತಾಯಿಸಿ ಕಳೆದ ೧೫ ದಿನಗಳಿಂದ ನಿರಂತರ ಪ್ರತಿಭಟನೆ ಹಮ್ಮಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ವೀರಾಜಪೇಟೆ ಕ್ಷೇತ್ರದ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಅವರು ಆದಿವಾಸಿಗಳಿಗೆ ನಿವೇಶನ ನೀಡುವ ಭರವಸೆ ನೀಡಿದ್ದರು. ಅಲ್ಲದೆ ತಾಲೂಕು ಆಡಳಿತ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡುವಂತೆ ಸೂಚನೆಯನ್ನು ನೀಡಿದ್ದರು. ಈ ಹಿನ್ನೆಲೆಯಲ್ಲಿ ಸೋಮವಾರದಂದು ವೀರಾಜಪೇಟೆ ತಾಲೂಕು ತಹಶೀಲ್ದಾರ್ ಹೆಚ್.ಎನ್. ರಾಮಚಂದ್ರ ಭೇಟಿ ನೀಡಿ ಹೋರಾಟಗಾರರ ಬಳಿ ಮಾಹಿತಿ ಪಡೆದುಕೊಂಡರು.

ಈ ಸಂದರ್ಭದಲ್ಲಿ ಮಾತನಾಡಿದ ತಹಶೀಲ್ದಾರ್ ಹೊಸೂರು ಬೆಟ್ಟಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ೩ ಎಕರೆ ಜಾಗ ಗುರುತಿಸಲಾಗಿದ್ದು, ಐಟಿಡಿಪಿ ಇಲಾಖೆಯ ಕೋರಿಕೆಯ ಮೇರೆಗೆ ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಕಳುಹಿಸಲಾಗುವುದೆಂದರು. ಅಲ್ಲದೆ ಆದಿವಾಸಿಗಳ ಸೂರಿನ ಬಗ್ಗೆ ಐಟಿಡಿಪಿ ಇಲಾಖೆ ಅಧಿಕಾರಿಗಳಿಗೆ ಹೆಚ್ಚಿನ ಕಾಳಜಿ ವಹಿಸುವಂತೆ ತಿಳಿಸಿದರು. ಈ ಸಂದರ್ಭದಲ್ಲಿ ವೀರಾಜಪೇಟೆ ತಾಲೂಕು ಕಾರ್ಯನಿರ್ವಹಣಾಧಿಕಾರಿ ಅಪ್ಪಣ್ಣ, ಅಮ್ಮತ್ತಿ ಹೋಬಳಿ ಕಂದಾಯ ಪರಿವೀಕ್ಷಕ ಅನಿಲ್ ಕುಮಾರ್, ಐಟಿಡಿಪಿ ಇಲಾಖೆಯ ಅಧಿಕಾರಿ ನವೀನ್ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಹಾಜರಿದ್ದರು. ಬುಡಕಟ್ಟು ಕಾರ್ಮಿಕ ಸಂಘಟನೆಯ ಮುಖಂಡ ವೈ.ಬಿ. ಗಪ್ಪು ನೇತೃತ್ವದಲ್ಲಿ ಪ್ರತಿಭಟನೆ ನಡೆದ ಪ್ರತಿಭಟನೆಯಲ್ಲಿ ಭವ್ಯ, ಪುಷ್ಪ ಇತರರು ಭಾಗವಹಿಸಿದ್ದರು.