ಸೋಮವಾರಪೇಟೆ, ಜು. ೧೫: ತಾಲೂಕಿನಾದ್ಯಂತ ವಾಯು ವರುಣನ ಆರ್ಭಟ ಜೋರಾಗಿದ್ದು, ಧಾರಾಕಾರ ಮಳೆಗೆ ಜನಜೀವನ ಅಸ್ತವ್ಯಸ್ಥಗೊಂಡಿದೆ. ಗಾಳಿ- ಮಳೆಗೆ ಮರಗಳು ಧರಾಶಾಹಿಯಾಗುತ್ತಿದ್ದು, ಹಾನಿ ಪ್ರಕರಣಗಳು ವರದಿಯಾಗುತ್ತಿವೆ.

ಮಳೆಯೊಂದಿಗೆ ಗಾಳಿಯ ರಭಸವೂ ಹೆಚ್ಚಾಗಿರುವ ಪರಿಣಾಮ ಗ್ರಾಮೀಣ ಭಾಗದಲ್ಲಿ ಮರಗಳು ಮನೆ, ವಾಹನ, ವಿದ್ಯುತ್ ತಂತಿಗಳ ಮೇಲೆ ಬಿದ್ದು, ನಷ್ಟ ಉಂಟಾಗುತ್ತಿದೆ. ನಿನ್ನೆ ಬೆಳಗ್ಗಿನಿಂದಲೇ ಪುನರ್ವಸು ಆರ್ಭಟಿಸುತ್ತಿದೆ. ಮಳೆಗಾಲಕ್ಕೂ ಮುನ್ನ ವಿದ್ಯುತ್ ಲೈನ್‌ಗಳನ್ನು ಸಮರ್ಪಕಗೊಳಿಸಿದ ಇಲಾಖೆಯ ನಿರ್ಲಕ್ಷö್ಯಕ್ಕೆ ಇದೀಗ ಬೆಲೆತೆರುವಂತಾಗಿದ್ದು, ಮರಗಳು ವಿದ್ಯುತ್ ತಂತಿಗಳ ಮೇಲೆ ಬಿದ್ದು ಕಂಬಗಳು ಮುರಿಯುತ್ತಿವೆ.

ಹಸು ಸಾವು

೧೧ ಕೆ.ವಿ. ವಿದ್ಯುತ್ ಪ್ರವಹಿಸುವ ಮಾರ್ಗ ತುಂಡಾಗಿ ಬಿದ್ದು, ಮೇಯಲು ಬಿಟ್ಟಿದ್ದ ೩ ತಿಂಗಳು ಗಬ್ಬದ ಹಸು ಮೃತಪಟ್ಟ ಘಟನೆ ಸಮೀಪದ ಆಲೇಕಟ್ಟೆ ಗ್ರಾಮದಲ್ಲಿ ನಡೆದಿದೆ. ಚೌಡ್ಲು ಗ್ರಾ.ಪಂ. ವ್ಯಾಪ್ತಿಯ ಆಲೇಕಟ್ಟೆಯ ಕೃಷಿಕ ಸಿ.ಜಿ. ಪ್ರಕಾಶ್ ಎಂಬವರಿಗೆ ಸೇರಿದ ಹಸುವನ್ನು ಗದ್ದೆಯಲ್ಲಿ ಮೇಯಲು ಬಿಟ್ಟಿದ್ದ ಸಂದರ್ಭ ವಿದ್ಯುತ್ ತಂತಿ ತುಂಡಾಗಿ ಕೆಳಬಿದ್ದಿದ್ದು, ಇದನ್ನು ಸ್ಪರ್ಶಿಸಿ ಹಸು ಸಾವನ್ನಪ್ಪಿದೆ. ವಿದ್ಯುತ್ ಇಲಾಖೆಯ ನಿರ್ಲಕ್ಷö್ಯದಿಂದಾಗಿ ನಮ್ಮ ಹಸು ಸಾವನ್ನಪ್ಪಿದೆ. ಸರ್ಕಾರ ಪರಿಹಾರ ಒದಗಿಸಬೇಕೆಂದು ಪ್ರಕಾಶ್ ಮನವಿ ಮಾಡಿದ್ದಾರೆ.

(ಮೊದಲ ಪುಟದಿಂದ)

ಕಾರುಗಳು ಜಖಂ

ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣ ಮಲ್ಲಳ್ಳಿ ಜಲಪಾತ ಭೋರ್ಗರೆ ಯುತ್ತಿದ್ದು, ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತಿದೆ. ಈ ಜಲಪಾತದ ಮಾರ್ಗದಲ್ಲಿಯೇ ಇರುವ ಅಯಾತನ ರೆಸಾರ್ಟ್ಗೆ ಆಗಮಿಸಿದ್ದ ಪ್ರವಾಸಿಗರ ವಾಹನಗಳ ಮೇಲೆ ಮರಗಳು ಉರುಳಿ ಬಿದ್ದು, ಭಾರೀ ಪ್ರಮಾಣದ ನಷ್ಟ ಉಂಟಾಗಿದೆ. ರೆಸಾರ್ಟ್ಗೆ ಪ್ರವಾಸಿಗರನ್ನು ಕರೆತಂದಿದ್ದ ೬ ಕಾರುಗಳ ಮೇಲೆ ಮರಗಳು ಉರುಳಿ ಬಿದ್ದಿದ್ದು, ವಾಹನಗಳು ನಜ್ಜುಗುಜ್ಜಾಗಿವೆ. ಅದೃಷ್ಟವಶಾತ್ ಚಾಲಕರು ಹಾಗೂ ಪ್ರವಾಸಿಗರು ಪಾರಾಗಿದ್ದಾರೆ.

ಹೆದ್ದಾರಿಯಲ್ಲಿ ಸಂಚಾರ ಸ್ಥಗಿತ

ಸೋಮವಾರಪೇಟೆ- ಶನಿವಾರಸಂತೆ ರಾಜ್ಯ ಹೆದ್ದಾರಿಯಲ್ಲಿ ಮರಗಳು ಉರುಳಿ ಬಿದ್ದ ಪರಿಣಾಮ ಕೆಲಕಾಲ ವಾಹನ ಸಂಚಾರ ಸ್ಥಗಿತಗೊಂಡಿದ್ದು, ಈ ರಸ್ತೆಯ ನಾಲ್ಕೆöÊದು ಸ್ಥಳಗಳಲ್ಲಿ ಮರಗಳು ಉರುಳಿದ್ದರಿಂದ ಬೆಳಗ್ಗಿನ ಜಾವ ದಿನಪತ್ರಿಕೆಗಳನ್ನು ಸಾಗಿಸುವ ವಾಹನ, ಸರ್ಕಾರಿ ಬಸ್ ಸೇರಿದಂತೆ ಇನ್ನಿತರ ವಾಹನಗಳ ಓಡಾಟಕ್ಕೆ ತಡೆಯಾಗಿತ್ತು. ವಿದ್ಯುತ್ ತಂತಿಗಳ ಮೇಲೆ ಮರ ಬಿದ್ದಿದ್ದರಿಂದ ಕಂಬಗಳು ನೆಲಕ್ಕುರುಳಿದ್ದವು. ಸ್ಥಳೀಯರು ಮರಗಳನ್ನು ತೆರವುಗೊಳಿಸಿದ ನಂತರ ವಾಹನ ಸಂಚಾರ ಸುಗಮಗೊಂಡಿತು.

ಕತ್ತಲಲ್ಲಿ ಪಟ್ಟಣ

ನಿನ್ನೆ ಬೆಳಗ್ಗಿನಿಂದಲೂ ಧಾರಾಕಾರ ಮಳೆಯಾಗುತ್ತಿದ್ದು, ಸಂಜೆಯ ವೇಳೆಗೆ ಹೆಚ್ಚು ಬಿರುಸು ಪಡೆದುಕೊಂಡ ಹಿನ್ನೆಲೆ ಗಾಳಿಗೆ ಮರಗಳು ವಿದ್ಯುತ್ ತಂತಿಯ ಮೇಲೆ ಬಿದ್ದ ಪರಿಣಾಮ ಸೋಮವಾರಪೇಟೆ ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಿಗೆ ರಾತ್ರಿಯಿಂದಲೇ ವಿದ್ಯುತ್ ಸ್ಥಗಿತಗೊಂಡಿತ್ತು. ಕುಶಾಲನಗರದಿಂದ ಪಟ್ಟಣಕ್ಕೆ ವಿದ್ಯುತ್ ಸರಬರಾಜು ಮಾಡುವ ಮುಖ್ಯ ಮಾರ್ಗದ ಮೇಲೆ ಹತ್ತಾರು ಕಂಬಗಳು ಬಿದ್ದಿದ್ದರಿಂದ ರಾತ್ರಿ, ಹಗಲು ವಿದ್ಯುತ್ ಸ್ಥಗಿತಗೊಂಡಿತ್ತು. ಪರಿಣಾಮ ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶಗಳು ಕತ್ತಲಲ್ಲಿ ಮುಳುಗಿದ್ದವು.

ಮಳೆಯ ಆರ್ಭಟಕ್ಕೆ ಪಟ್ಟಣದ ರೇಂಜರ್ ಬ್ಲಾಕ್‌ನಲ್ಲಿ ವಾಸದ ಮನೆಯ ಆವರಣಗೋಡೆ ಕುಸಿದು ನಷ್ಟ ಸಂಭವಿಸಿದೆ. ರೇಂಜರ್ ಬ್ಲಾಕ್ ನಿವಾಸಿ ವೆಂಕಟರಮಣ ಶೆಟ್ಟಿ ಅವರಿಗೆ ಸೇರಿದ ವಾಸದ ಮನೆಯ ಮುಂಭಾಗವಿದ್ದ ಆವರಣಗೋಡೆ ಕುಸಿದು ನಷ್ಟ ಸಂಭವಿಸಿದ್ದು, ಮನೆಗೆ ಯಾವುದೇ ಅಪಾಯ ಸಂಭವಿಸಿಲ್ಲ. ಸ್ಥಳಕ್ಕೆ ಪ.ಪಂ. ಮುಖ್ಯಾಧಿಕಾರಿ ನಾಚಪ್ಪ, ಸಿಬ್ಬಂದಿ ಜೀವನ್ ಅವರುಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತಹಶೀಲ್ದಾರ್‌ಗೆ ವರದಿ ಸಲ್ಲಿಸಿದ್ದಾರೆ. ನೇಗಳ್ಳೆ ಕರ್ಕಳ್ಳಿ ಗ್ರಾಮದ ಜಯಂತಿ ಎಂಬವರಿಗೆ ಸೇರಿದ ವಾಸದ ಮನೆಯ ಮೇಲೆ ಮರ ಬಿದ್ದು ನಷ್ಟ ಸಂಭವಿಸಿದೆ. ಮೇಲ್ಛಾವಣಿ ಬಿದ್ದು, ಮನೆಯೊಳಗಿದ್ದ ವಸ್ತುಗಳು ಹಾನಿಯಾಗಿವೆ. ಸ್ಥಳಕ್ಕೆ ಕಂದಾಯ ಇಲಾಖೆಯ ಸಿಬ್ಬಂದಿಗಳು ತೆರಳಿ ಪರಿಶೀಲನೆ ನಡೆಸಿದ್ದಾರೆ.

ಇನ್ನು ಭಾರೀ ಮಳೆಗೆ ಗ್ರಾಮೀಣ ಭಾಗದ ರಸ್ತೆಗಳು ಹದಗೆಡುತ್ತಿವೆ. ನಿರ್ವಹಣೆಯ ಕೊರತೆಯಿಂದಾಗಿ ರಸ್ತೆಯ ಗುಂಡಿಗಳಲ್ಲಿ ನೀರು ಸಂಗ್ರಹಗೊAಡು ಸಂಚಾರ ದುಸ್ತರವಾಗುತ್ತಿದೆ. ರಸ್ತೆ ಬದಿಯ ಚರಂಡಿಗಳು ತ್ಯಾಜ್ಯದಿಂದ ತುಂಬಿದ್ದು, ಮಳೆ ನೀರಿನ ಸರಾಗ ಹರಿವಿಗೆ ತಡೆಯಾಗಿದೆ. ಇದರೊಂದಿಗೆ ರಸ್ತೆ ಬದಿಯಲ್ಲಿ ಗಿಡಗಂಟಿಗಳು, ಕುರುಚಲು ಬೆಳೆದು ನಿಂತಿವೆ. ಜಿಲ್ಲಾ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ರಸ್ತೆಗಳೂ ಸಹ ದುಸ್ಥಿತಿಗೆ ತಲುಪಿವೆ.

-ವಿಜಯ್ ಹಾನಗಲ್