ಸುಂಟಿಕೊಪ್ಪ, ಜು. ೧೬: ಲಯನ್ಸ್ ಕ್ಲಬ್ನ ೨೦೨೪-೨೫ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣಲ್ಲಿ ನಡೆಯಿತು.
ನೂತನ ಅಧ್ಯಕ್ಷರಾಗಿ ಶಶಾಂಕ್ ಶ್ರೀನಿವಾಸ್, ಕಾರ್ಯದರ್ಶಿಯಾಗಿ ಗ್ಲೇನ್ ಮೆನೇಜಸ್, ಖಜಾಂಚಿಯಾಗಿ ಪ್ರೀತಮ್ ಪ್ರಭಾಕರ್ ಅಧಿಕಾರ ವಹಿಸಿಕೊಂಡರು. ಲಯನ್ ಜಿಲ್ಲಾ ಜಿಎಲ್ಟಿ ಮುಖ್ಯಸ್ಥ ಪಿ.ವಿ. ಅನಿಲ್ ಕುಮಾರ್ ಪದಗ್ರಹಣ ಕಾರ್ಯಕ್ರಮ ನೆರವೇರಿಸಿದರು. ನಂತರ ಮಾತನಾಡಿದ ಅವರು, ಲಯನ್ಸ್ ಸಂಸ್ಥೆಯ ಮೂಲಕ ಹಲವಾರು ಸಮಾಜಮುಖಿ ಸೇವೆಯನ್ನು ಮಾಡಲಾಗುತ್ತಿದ್ದು, ಇದಕ್ಕೆ ಎಲ್ಲರ ಸಹಕಾರ ಹಾಗೂ ಸೇವಾ ಮನೋಭಾವನೆ ಕಾರಣವಾಗಿದೆ ಎಂದರು. ನೂತನ ಅಧ್ಯಕ್ಷ ಶಶಾಂಕ್ ಶ್ರೀನಿವಾಸ್ ಮಾತನಾಡಿ, ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿ ಕೊಳ್ಳುವುದರ ಮೂಲಕ ಸುಂಟಿಕೊಪ್ಪ ಲಯನ್ಸ್ ಸಂಸ್ಥೆಯನ್ನು ಯಶಸ್ಸಿನತ್ತ ಕೊಂಡೊಯ್ಯಲು ಪ್ರಯತ್ನಿಸುವುದಾಗಿ ಹೇಳಿದರು.
ನಿರ್ಗಮಿತ ಅಧ್ಯಕ್ಷ ಸಿ.ವಿ. ನಿಕೇಶ್ ಒಂದು ವರ್ಷ ಅವಧಿಯ ಲಯನ್ಸ್ ಸಂಸ್ಥೆಯ ಕಾರ್ಯಕ್ರಮಗಳ ಬಗ್ಗೆ ಮಾತನಾಡಿದರು. ಕಳೆದ ಸಾಲಿನಲ್ಲಿ ಲಯನ್ಸ್ ಸಾಧನೆಗೆ ದೊರೆತ ಪ್ರಶಸ್ತಿಗಳನ್ನು ಅತಿಥಿಗಳಿಂದ ಹಸ್ತಾಂತರಿಸಲಾಯಿತು.
ಈ ಸಂದರ್ಭ ಕಳೆದ ಸಾಲಿನ ಕಾರ್ಯದರ್ಶಿಯಾದ ಪ್ರೀತಮ್ ಪ್ರಭಾಕರ್, ಖಜಾಂಚಿ ಟಿ.ಕೆ. ರಾಜೀವ್, ಪ್ರಾದೇಶಿಕ ಮುಖ್ಯಸ್ಥರಾದ ಕನ್ನಿಕಾ ಅಯ್ಯಪ್ಪ, ಸುಮನ್ ಬಾಲಚಂದ್ರನ್, ವಲಯ ಮುಖ್ಯಸ್ಥರಾದ ಬೊಳ್ಳಪ್ಪ, ಮಹಾದೇವಪ್ಪ, ಉಪಸ್ಥಿತರಿದ್ದರು.