ಚೆಟ್ಟಳ್ಳಿ, ಜು. ೧೬: ದೈನಂದಿನ ಪಾಠ ಪ್ರವಚನದ ಜೊತೆಗೆ ಪ್ರಾಯೋಗಿಕವಾಗಿ ಭತ್ತದ ನಾಟಿ ಕಾರ್ಯದ ಬಗ್ಗೆ ಸರಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರು ತಿಳಿಸಿದ್ದು ವಿಶೇಷವಾಗಿತ್ತು.
ಮಡಿಕೇರಿ ತಾಲೂಕಿನ ಚೆಂಬುವಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಬದಿಯಲ್ಲಿ ಭೂಮಿಯನ್ನು ಹದಗೊಳಿಸಿ ಪುಟ್ಟದಾದ ಗದ್ದೆಯನ್ನು ನಿರ್ಮಿಸಲಾಗಿದೆ. ಭತ್ತದ ಪೈರನ್ನು ಮಕ್ಕಳಿಂದಲೇ ನಾಟಿ ಮಾಡಿಸಿ ಶಾಲಾ ಮಕ್ಕಳಿಗೆ ಶಿಕ್ಷಣದ ಜೊತೆಗೆ ಭತ್ತದ ಕೃಷಿ ಬಗ್ಗೆ ತಿಳುವಳಿಕೆ ನೀಡಲಾಯಿತು.
ಗದ್ದೆಯಲ್ಲಿ ಎಷ್ಟು ನೀರು ಇರಬೇಕು ಹಾಗೂ ಏನೆಲ್ಲಾ ಕ್ರಮ ಕೈಗೊಳ್ಳಬೇಕು ಎಂಬ ಮಾಹಿತಿಯನ್ನು ಮಕ್ಕಳಿಗೆ ಶಿಕ್ಷಕರು ತಿಳಿಸಿದರು. ಮಕ್ಕಳು ಆಸಕ್ತಿಯಿಂದ ನಾಟಿ ಕಾರ್ಯದಲ್ಲಿ ಪಾಲ್ಗೊಂಡರು. ಶಾಲಾ ಮಕ್ಕಳಲ್ಲಿ ಭತ್ತದ ಕಾರ್ಯದ ಬಗ್ಗೆ ಹೆಚ್ಚಿನ ಆಸಕ್ತಿ ಹುಟ್ಟಿಸುವ ಉದ್ದೇಶದಿಂದ ಆಟ-ಪಾಠದ ಜೊತೆ ಪ್ರಾಯೋಗಿಕ ಪಾಠವನ್ನು ಮಾಡಲಾಗುತ್ತಿದೆ ಎಂದು ಶಾಲಾ ಶಿಕ್ಷಕ ದಿನಕರ್ ಶೆಟ್ಟಿ ತಿಳಿಸಿದರು.
- ಕರುಣ್ ಕಾಳಯ್ಯ