ಮಡಿಕೇರಿ, ಜು. ೧೬: ಪ್ರತೀ ದಿನ ಎರಡೂವರೆ ಕಿ.ಮೀ. ಕಲ್ಲುಗಳಿಂದ ತುಂಬಿದ ದಟ್ಟವಾದ ಅರಣ್ಯದ ಮಧ್ಯೆ ನಡೆದೇ ಶಾಲೆಗೆ ತೆರಳಿ ಶಿಕ್ಷಣ ಪಡೆದು, ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಳು. ಅದೇ ದಿನ ಆಕೆಯ ನಿಶ್ಚಿತಾರ್ಥ ಕೂಡ ನೆರವೇರಿತ್ತು. ಕೇವಲ ೧೬ ವರ್ಷದ ಹೆಣ್ಣುಮಗಳನ್ನು ೩೪ ವರ್ಷ ಪ್ರಾಯದ ವ್ಯಕ್ತಿಯೊಂದಿಗೆ ತಂದೆ-ತಾಯಿ, ಊರಿನವರು ಸೇರಿ ದೊಡ್ಡದಾಗಿ ನಿಶ್ಚಿತಾರ್ಥ ಮಾಡಿ ಸಂಭ್ರಮಿಸಿದ್ದರು.

ಆದರೆ ಸಮಾಜ ಕಲ್ಯಾಣ ಇಲಾಖೆಯವರು ಹೆಣ್ಣುಮಗಳ ಮನೆಗೆ ಭೇಟಿ ನೀಡಿ ಬಾಲ್ಯ ವಿವಾಹದ ಬಗ್ಗೆ ಅರಿವು ಮೂಡಿಸಿ ಮುಚ್ಚಳಿಕೆ ಪತ್ರವನ್ನು ಬರೆಸಿದ್ದರು. ಹೆಣ್ಣು ಮಗಳಿಗೆ ೧೮ ವರ್ಷ ತುಂಬಿದ ನಂತರ ಮದುವೆ ಮಾಡಿ ಕೊಡಿ ಎಂದು ಪೋಷಕರಿಗೆ ಮನವರಿಕೆ ಮಾಡಿಕೊಟ್ಟಿದ್ದರು. ಆದರೆ ನಂತರ ನಡೆದ ಘಟನೆಗಳು ಇಡೀ ಕೊಡಗು ಜಿಲ್ಲೆ ತಲೆ ತಗ್ಗಿಸುವಂತ ಘಟನೆಯಾಗಿತ್ತು. ೧೬ ವರ್ಷದ ಮೀನಾಳನ್ನು ೩೪ ವರ್ಷ ಪ್ರಾಯದ ಪ್ರಕಾಶ್ ಎಂಬಾತನು ಆಕೆಯ ರುಂಡವನ್ನು ಕತ್ತರಿಸಿ ಅಮಾನವೀಯ ರೀತಿಯಲ್ಲಿ ಕೊಲೆಗೈದನು. ಮೀನಾಳ ಕೊರಳಿಗೆ ತಾಳಿ ಕಟ್ಟಬೇಕಾದವನೇ ಮೀನಾಳ ಜೀವವನ್ನು ತೆಗೆದು ಜೈಲು ಸೇರಿರುವ ಅಮಾನವೀಯ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಗರ್ವಾಲೆ ಸಮೀಪದ ಸೂರ್ಲಬ್ಬಿಯ ಕುಂಬಾರಗಡಿಯಲ್ಲಿ ಮೇ ತಿಂಗಳ ೯ ರಂದು ನಡೆದು ರಾಜ್ಯವನ್ನೇ ಬೆಚ್ಚೆಬ್ಬಿಸಿತು.

ಮೀನಾಳನ್ನು ಶಿರಚ್ಛೇದ ಮಾಡಿ ರುಂಡದೊAದಿಗೆ ಪರಾರಿಯಾಗಿದ್ದ ಪಾಗಲ್ ಪ್ರೇಮಿ ಹಮ್ಮಿಯಾಲದ ಪ್ರಕಾಶ್ ಘಟನೆ ನಡೆದ ಎರಡು ದಿನಗಳ ಬಳಿಕ ಪೊಲೀಸರ ಅತಿಥಿಯಾದನು.

ಮೀನಾಳ ನೆನಪಿನಲ್ಲೇ ದಿನ ದೂಡುತ್ತಿರುವ ಕುಟುಂಬಸ್ಥರು

ಮೀನಾಳನ್ನು ನನ್ನ ಕಣ್ಣಮುಂದೆಯೇ ಆಕೆಯ ತಲೆ ಕಡಿದು ಕೊಂದು ಬಿಟ್ಟ. ಆ ಘಟನೆಯನ್ನು ಮರೆಯಲು ಸಾಧ್ಯವಾಗುತ್ತಿಲ್ಲ, ಪ್ರತೀ ದಿನ ಮೀನಾ ಕನಸಿನಲ್ಲಿ ಬಂದು ಅಮ್ಮಾ ಎಂದು ಕರೆಯುತ್ತಿದ್ದಾಳೆ. ರಾತ್ರಿ ನಿದ್ರೆ ಮಾಡುವಾಗ ಮೀನಾಳ ನೆನಪು ಕಾಡುತ್ತಿದೆ. ಮಧ್ಯರಾತ್ರಿಯಲ್ಲಿ ನಿದ್ದೆಯಿಂದ ಎಚ್ಚರವಾಗುವಾಗ ಆಕೆಯ ಮುಖ ಕಣ್ಣಮುಂದೆ ಬರುತ್ತಿದೆ ಎಂದು ಮೀನಾಳ ತಾಯಿ ಜಾನಕಿ ಕಣ್ಣೀರು ಹಾಕುತ್ತಾ ಮೀನಾಳನ್ನು ನೆನಪಿಸಿಕೊಳ್ಳುತ್ತಾರೆ.

ಸೂರ್ಲಬ್ಬಿ ಪ್ರೌಢಶಾಲೆಯ ಏಕೈಕ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಯಾಗಿದ್ದಳು. ಮೀನಾ ಜೀವಂತವಾಗಿ ನಮ್ಮೊಂದಿಗೆ ಬದುಕಿದ್ದರೆ, ಕಾಲೇಜಿನ ಮೆಟ್ಟಿಲೇರಬಹುದಿತ್ತು. ಆದರೆ ವಿಧಿಯಾಟವೇ ಬೇರೆಯಾಗಿತ್ತು. ಪಾಗಲ್ ಪ್ರೇಮಿಯ ಹುಚ್ಚಾಟಕ್ಕೆ ಬಲಿಯಾಗಿ ಇದೀಗ ಎರಡು ತಿಂಗಳು ಕಳೆದಿವೆ. ಮೀನಾಳ ಮನೆಗೆ ಗೃಹ ಸಚಿವರಾದ ಡಾ.ಜಿ ಪರಮೇಶ್ವರ್, ಮಡಿಕೇರಿ ಕ್ಷೇತ್ರದ ಶಾಸಕರಾದ ಡಾ.ಮಂತರ್ ಗೌಡ ಅವರು ಭೇಟಿ ನೀಡಿ, ಕುಟುಂಬದೊAದಿಗೆ ಎಲ್ಲಾ ರೀತಿಯಲ್ಲಿ ಕೈ ಜೋಡಿಸುತ್ತೇವೆ. ಕೊಲೆಗೈದವನಿಗೆ ಶಿಕ್ಷೆ ವಿಧಿಸುತ್ತೇವೆ ಎಂದು ಭರವಸೆ ನೀಡಿದ್ದರು. ಅದಲ್ಲದೇ ಲೋಕಸಭಾ ಚುನಾವಣಾ ನೀತಿ ಸಂಹಿತೆ ಬಳಿಕ ಪರಿಹಾರದ ಭರವಸೆ ಕೂಡ ನೀಡಿದ್ದರು.

ವೈಯಕ್ತಿಕವಾಗಿ ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರು ರೂ.೫೦ ಸಾವಿರ ನೀಡಿ ಮಾನವೀಯತೆ ಮೆರೆದಿದ್ದರು. ಆದರೆ ಇದೀಗ ಚುನಾವಣಾ ನೀತಿ ಸಂಹಿತೆ ತೆರವಾಗಿ ತಿಂಗಳುಗಳು ಕಳೆದಿವೆ. ಮೀನಾಳ ಕುಟುಂಬಕ್ಕೆ ಸರ್ಕಾರದಿಂದ ಯಾವುದೇ ಪರಿಹಾರ ಲಭಿಸಿಲ್ಲ. ಗೃಹ ಸಚಿವರು ಬಂದು ಹೋದ ಬಳಿಕ ಮೀನಾಳ ಕುಟುಂಬದತ್ತ ಯಾರು ಕೂಡ ತಿರುಗಿ ನೋಡಿಯೇ ಇಲ್ಲ. ಒಂದೆರೆಡು ಸಂಘ-ಸAಸ್ಥೆಗಳು ವೈಯಕ್ತಿಕವಾಗಿ ಒಂದಷ್ಟು ಹಣವನ್ನು ಕುಟುಂಬಕ್ಕೆ ನೀಡಿವೆ. ಆದರೆ ಪರಿಹಾರದ ಭರವಸೆ ನೀಡಿದ್ದ ಸರ್ಕಾರ ಮೀನಾಳ ಕುಟುಂಬವನ್ನು ಮರೆತಂತೆ ಕಾಣುತ್ತಿದೆ. ಗೃಹ ಸಚಿವರ ಭೇಟಿ ಬಳಿಕ ಇತ್ತ ಯಾರು ಕೂಡ ತಿರುಗಿ ನೋಡಿಯೇ ಇಲ್ಲ.

ಮಾನವೀಯ ನೆಲೆಯಲ್ಲಿ ಬೇಕಿದೆ ಆಸರೆ

ಮೀನಾಳ ತಂದೆ-ತಾಯಿ ಇಬ್ಬರು ಕೂಡ ಅನಕ್ಷರಸ್ಥರು. ಕಾನೂನಿನ ಬಗ್ಗೆ ಅರಿವು ಇಲ್ಲದವರು. ಸೂರ್ಲಬ್ಬಿಯ ಕುಂಬಾರಗಡಿಯ ಸುತ್ತಲೂ ದಟ್ಟವಾದ ಅರಣ್ಯದ ಮಧ್ಯೆ ಮೀನಾಳ ಕುಟುಂಬ ಜೀವನ ನಡೆಸುತ್ತಿದೆ. ಮಳೆಗಾಲದಲ್ಲಿ ಮನೆ ಬೀಳುವ ಆತಂಕದಲ್ಲಿ ಮೀನಾಳ ಪೋಷಕರು ದಿನದೂಡುತ್ತಿದ್ದಾರೆ. ಮೀನಾಳಿಗೆ ಇಬ್ಬರು ಅಣ್ಣಂದಿರು ಹಾಗೂ ಮೂವರು ಅಕ್ಕಂದಿರು ಇದ್ದಾರೆ. ಒಬ್ಬ ಅಣ್ಣ ಮಡಿಕೇರಿಯ ಕೋಳಿ ಮಾಂಸದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಾನೆ. ಇನ್ನೊಬ್ಬ ಸಣ್ಣ ಪುಟ್ಟ ಕೆಲಸ ಮಾಡಿಕೊಂಡು ಊರಿನಲ್ಲಿಯೇ ಇದ್ದಾನೆ. ಮೂವರು ಅಕ್ಕಂದಿರು ಮದುವೆಯಾಗಿದ್ದಾರೆ.

ಮೀನಾಳ ತಂದೆ-ತಾಯಿ ವಾಸಿಸುತ್ತಿರುವ ಗುಡಿಸಲು ಮನೆಯ ಸುತ್ತಲೂ ಪ್ಲಾಸ್ಟಿಕ್ ಮೂಲಕ ಹೊದಿಸಲಾಗಿದೆ. ಮಳೆ ಬಂದರೆ ನೀರು ಮನೆಯೊಳಗೆ ಸೇರುತ್ತದೆ. ಇಂದೋ, ನಾಳೆಯೋ ಗುಡಿಸಲು ಬೀಳುವ ಆತಂಕದಿAದಲೇ ದಿನ ದೂಡುತ್ತಿದ್ದಾರೆ. ಗುಡಿಸಲು ಆಗಿರುವುದರಿಂದ ಮನೆಗೆ ವಿದ್ಯುತ್ ಸಂಪರ್ಕ ಕೂಡ ಇಲ್ಲ. ಹೆಂಚು ಮೇಲೆ ಒಣಗಿದ ಹುಲ್ಲನ್ನು ಹಾಕಲಾಗಿದೆ. ಕಷ್ಟದಿಂದಲೇ ಜೀವನ ನಡೆಸುತ್ತಿರುವ ಕುಟುಂಬಕ್ಕೆ ಸಿಡಿಲಿನಂತೆ ಅಮಾನವೀಯ ರೀತಿಯಲ್ಲಿ ಹೆತ್ತ ಮಗಳನ್ನು ತಮ್ಮ ಮುಂದೆಯೇ ಕೊಂದು ಹಾಕಿರುವ ಘಟನೆ ಸದಾ ಕಾಡುತ್ತಿದೆ. ಪರಿಹಾರದ ಭರವಸೆ ನೀಡಿದ ಸರ್ಕಾರ ಕೂಡ ತಿರುಗಿ ನೋಡದಿರುವುದು ವಿಪರ್ಯಾಸ.

ರಾಜ್ಯದಲ್ಲಿ ಕೋಮುಗಲಭೆ, ಇನ್ನಿತರ ಹಲವಾರು ಘಟನೆಗಳಲ್ಲಿ ನೊಂದವರಿಗೆ ಸರ್ಕಾರ ತಕ್ಷಣ ಸ್ಪಂದಿಸಿ ರೂ. ೨೫ ಲಕ್ಷಕ್ಕೂ ಅಧಿಕ ಪರಿಹಾರ ನೀಡಿದ ಹಲವು ನಿದರ್ಶನಗಳಿವೆ. ಆದರೆ, ಬಾಳಿ ಬೆಳಗಬೇಕಾದ ಬಾಲಕಿ ಅಮಾನವೀಯ ರೀತಿಯಲ್ಲಿ ಸಾವನ್ನಪ್ಪಿದ್ದನ್ನು ಪರಿಗಣಿಸಿ ಪರಿಹಾರ ನೀಡದಿರುವುದು ವಿಪರ್ಯಾಸ. ಮೀನಾಳ ಕುಟುಂಬದೊAದಿಗೆ ಸರ್ಕಾರ ಕೈ ಜೋಡಿಸಿ, ಮಾನವೀಯತೆಯಿಂದ ಪರಿಹಾರ ಒದಗಿಸ ಬೇಕಾಗಿದೆ.

- ಕೆ.ಎಂ. ಇಸ್ಮಾಯಿಲ್, ಕಂಡಕರೆ