ವೀರಾಜಪೇಟೆ, ಜು. ೧೬: ಮನುಷ್ಯ ವಿದ್ಯಾವಂತನಾದರೆ ಮಾತ್ರ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ವೀರಾಜಪೇಟೆ ವೃತ್ತ ನಿರೀಕ್ಷಕ ಬಿ.ಎಸ್. ಶಿವರುದ್ರ ಹೇಳಿದರು.

ಜನಸೇವಾ ಟ್ರಸ್ಟ್ ವೀರಾಜಪೇಟೆ ವತಿಯಿಂದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಪ್ರತಿಭಾ ಪುರಸ್ಕಾರ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಗರದ ಪಂಜರಪೇಟೆಯ ವೈಟ್ ಪ್ಯಾಲೇಸ್ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಶಿವರುದ್ರ ಅವರು, ಇಂದಿನ ಸಮಾಜದಲ್ಲಿ ಪ್ರತಿಯೊಬ್ಬರು ಶಿಕ್ಷಣ ಪಡೆಯುವುದು ಅನಿವಾರ್ಯ ವಾಗಿದೆ. ಸರ್ಕಾರಿ ಶಾಲೆಗಳನ್ನು ತುಚ್ಚವಾಗಿ ಕಾಣದೆ ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ದಾಖಲಿಸಿ ಸರ್ಕಾರಿ ಶಾಲೆಗಳನ್ನು ಪುನರ್‌ಚೇತನ ಗೊಳಿಸುವಂತಾಗಬೇಕು ಎಂದರು.

ಜನಸೇವಾ ಟ್ರಸ್ಟ್ನ ಸ್ಥಾಪಕ ಅಧ್ಯಕ್ಷ ಎಂ.ಇ. ಶರೀಫ್ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಸ್ಥೆಯು ೨೦೧೭ರಲ್ಲಿ ಬಡ ವಿದ್ಯಾರ್ಥಿಗಳನ್ನು ಗುರುತಿಸಿ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕಾರ್ಯಕ್ರಮ ಹಮ್ಮಿಕೊಂಡು ವಿದ್ಯಾರ್ಥಿ ವೇತನವನ್ನು ನೀಡುತ್ತಾ ಬಂದಿದೆ ಎಂದರು. ವೀರಾಜಪೇಟೆ ಪುರಸಭೆಯ ಸದಸ್ಯೆ ಮನೆಯಪಂಡ ದೇಚಮ್ಮ ಕಾಳಪ್ಪ ಮತ್ತು ಕನ್ನಡ ಸಾಹಿತ್ಯ ಪರಿಷತ್‌ನ ತಾಲೂಕು ಅಧ್ಯಕ್ಷ ಡಿ.ಪಿ. ರಾಜೇಶ್ ಪದ್ಮನಾಭ ಕಾರ್ಯಕ್ರಮ ಉದ್ದೇಶಸಿ ಮಾತ ನಾಡಿದರು. ವೇದಿಕೆಯಲ್ಲಿ ವಕೀಲೆ ರೀಹಾನ, ಸಂಸ್ಥೆಯ ಉಪಾಧ್ಯಕ್ಷ ರಹೀಂ, ಸಮಾಜ ಸೇವಕರಾದ ಅಖೀಲ್, ರಜಾಕ್, ಉದ್ಯಮಿಗಳಾದ ಅಲ್ತಾಫ್ ಮುಂತಾದವರು ಉಪಸ್ಥಿತರಿದ್ದರು. ಸುಮಾರು ೪೦ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಯಿತು. ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ವಿಭಾಗದಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿ ಗಳನ್ನು ಹಾಗೂ ವೀರಾಜಪೇಟೆ ಸಂತ ಅನ್ನಮ್ಮ ಶಾಲೆ ದೈಹಿಕ ಶಿಕ್ಷಕ ಶಭರೀಶ್ ಅವರುಗಳನ್ನು ಸನ್ಮಾನಿಸಲಾಯಿತು.