ಗೋಣಿಕೊಪ್ಪಲು, ಜು. ೧೬: ದ.ಕೊಡಗಿನ ಕಾನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಲ್ಲಂಗೆರೆ ಗ್ರಾಮದ ಲೈನ್ ಮನೆಯೊಂದರಲ್ಲಿ ಮಹಿಳೆಯ ಮೃತದೇಹ ಪತ್ತೆಯಾಗಿದ್ದು, ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಮೃತ ಕಾರ್ಮಿಕ ಮಹಿಳೆ ಹುಣಸೂರು ಮೂಲದ ದರ್ಗ ಬಳಿಯ ರತ್ನಪುರಿ ನಿವಾಸಿ ಶಿವಮ್ಮ ಅಲಿಯಾಸ್ ಗೀತಾ (೪೫) ಎಂದು ತಿಳಿದು ಬಂದಿದೆ.
ಮೇಲ್ನೋಟಕ್ಕೆ ಗೀತಾಳ ಪತಿಯೇ ಆಕೆಯನ್ನು ಕೊಲೆಗೈದಿರಬಹುದೆಂದು ಅಂದಾಜಿಸಲಾಗಿದೆ. ಪೊಲೀಸರು ಈ ನಿಟ್ಟಿನಲ್ಲಿ ತನಿಖೆ ಕೈಗೊಂಡಿದ್ದಾರೆ.
ಘಟನಾ ಸ್ಥಳಕ್ಕೆ ಕೊಡಗು ಜಿಲ್ಲಾ ಹೆಚ್ಚುವರಿ ವರಿಷ್ಠಾಧಿಕಾರಿ ಸುಂದರ್ ರಾಜ್, ವೀರಾಜಪೇಟೆ ಡಿವೈಎಸ್ಪಿ ಮೋಹನ್ ಕುಮಾರ್, ಸರ್ಕಲ್ ಇನ್ಸ್ಪೆಕ್ಟರ್ ಶಿವರಾಜ್ ಮುದೋಳ್, ಪೊನ್ನಂಪೇಟೆ ಎಸ್.ಐ.ನವೀನ್ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕಾರ್ಮಿಕ ಮಹಿಳೆ ಮೂಲತಃ ಹುಣಸೂರು ತಾಲೂಕಿನವರಾಗಿದ್ದು ಕೆಲ ದಿನಗಳ ಹಿಂದಷ್ಟೇ ತನ್ನ ಪತಿಯೊಡನೆ ಮಲ್ಲಂಗೆರೆಯ ಕಾಫಿ ತೋಟಕ್ಕೆ ಕೆಲಸಕ್ಕಾಗಿ ಆಗಮಿಸಿದ್ದರು.
ಮಂಗಳವಾರ ದಿನ ಕಾಫಿ ತೋಟದ ಲೈನ್‌ಮನೆಯಲ್ಲಿ ಗೀತಾಳ ಮೃತದೇಹ ಪತ್ತೆಯಾಗಿದೆ. ಆದರೆ ಆಕೆಯೊಂದಿಗೆ ಇದ್ದ ಪತಿ ನಾಪತ್ತೆಯಾಗಿದ್ದಾನೆ. ಇದರಿಂ ದಾಗಿ ಸಹಜವಾಗಿಯೇ, ಗೀತಾಳ ಪತಿ ಕೊಲೆ ಮಾಡಿ ಅಲ್ಲಿಂದ ನಾಪತ್ತೆಯಾ ಗಿರಬಹುದಾಗಿದೆ ಎಂದು ಪೊಲೀಸರು ಮೇಲ್ನೋಟಕ್ಕೆ ಸಂಶಯ ವ್ಯಕ್ತಪಡಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ. ಅರೋಪಿಯ ಪತ್ತೆಗಾಗಿ ತನಿಖಾ ತಂಡ ರಚಿಸಲಾಗಿದ್ದು ತನಿಖೆ ಮುಂದುವರಿದಿದೆ. ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.