ಸೋಮವಾರಪೇಟೆ, ಜು. ೧೬: ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಗಮನ ಹರಿಸಬೇಕು. ಫಲಾನುಭವಿಗಳಿಗೆ ಸರಕಾರದ ಯೋಜನೆಗಳನ್ನು ತಲುಪಿಸಲು ಅಧಿಕಾರಿಗಳು ಕ್ರಮವಹಿಸಬೇಕೆಂದು ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಕಾಂತರಾಜು ನಿರ್ದೇಶನ ನೀಡಿದರು.

ಇಲ್ಲಿನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಪ್ರಥಮ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು.

ಗೃಹಲಕ್ಷ್ಮೀ ಯೋಜನೆಯಡಿ ತಾಲೂಕಿನಲ್ಲಿ ೨೪,೨೩೮ ಮಂದಿ ಅರ್ಹರಾಗಿದ್ದು, ಇದರಲ್ಲಿ ೨೪,೧೨೪ ಮಂದಿಗೆ ಹಣ ಬರುತ್ತಿದೆ. ಐ.ಟಿ. ಹಾಗೂ ಜಿ.ಎಸ್.ಟಿ. ಕಟ್ಟುತ್ತಿರುವ ೮೪ ಮಂದಿಗೆ ಹಣ ಬರುತ್ತಿಲ್ಲ. ೫೦ ಮಂದಿ ಈಗಾಗಲೇ ನಿಧನರಾಗಿದ್ದು, ಹಣ ಪಾವತಿ ಸ್ಥಗಿತಗೊಂಡಿದೆ. ೧೮ ಮಂದಿಯ ಅರ್ಜಿಗಳು ಅನುಮೋದನೆಗೆ ಬಾಕಿ ಉಳಿದಿವೆ. ೧೯೪ ಮಂದಿಗೆ ಇಕೆವೈಸಿ ಸಮಸ್ಯೆಯಿಂದ ಹಣ ಬರುತ್ತಿಲ್ಲ ಎಂದು ಇಲಾಖೆಯ ಸೂಪರ್ ವೈಸರ್ ಸಾವಿತ್ರಮ್ಮ ಹೇಳಿದರು. ಕಳೆದ ೨ ತಿಂಗಳಿನಿAದ ಹಣ ಬರುತ್ತಿಲ್ಲ. ಅಪ್ಲಿಕೇಷನ್ ರಿಸೀವ್ ಅಂತ ಬಂದರೂ ಹಣ ಬರುತ್ತಿಲ್ಲ. ಖಾತೆಗೆ ಆಧಾರ್ ಲಿಂಕ್ ಮಾಡಿಸಿ ಕಚೇರಿಗೆ ನೀಡಿದ್ದರೂ ಹಣ ಬರುತ್ತಿಲ್ಲ ಎಂದು ಅಧ್ಯಕ್ಷ ಕಾಂತರಾಜ್ ಹೇಳಿದರು. ಐಟಿ ಮತ್ತು ಜಿ.ಎಸ್.ಟಿ. ಪಾವತಿ ಪಟ್ಟಿಯಲ್ಲಿರುವವರಿಗೆ ಹಣ ಬರುತ್ತಿಲ್ಲ. ಈ ಪಟ್ಟಿಯಲ್ಲಿರುವವರು ಆಡಿಟರ್ ಬಳಿ ಟ್ಯಾಕ್ಸ್ ಕಟ್ಟುತ್ತಿಲ್ಲ ಎಂದು ದೃಢೀಕರಣ ಮಾಡಿಸಿ ಕಚೇರಿಗೆ ನೀಡಬೇಕು ಎಂದು ಅಧಿಕಾರಿ ತಿಳಿಸಿದರು. ಗೃಹಲಕ್ಷ್ಮೀ ಯೋಜನೆಯಡಿ ಮೇ ತಿಂಗಳವರೆಗೆ ಹಣ ಬಂದಿದೆ. ಜೂನ್ ತಿಂಗಳಿನಿAದ ಬಂದಿಲ್ಲ. ಈಗಲೂ ಅರ್ಜಿ ಸಲ್ಲಿಸಲು ಅವಕಾಶವಿದ್ದು, ಸ್ಥಳೀಯ ಗ್ರಾಮ ಒನ್ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದು ಎಂದರು.

ಸೋಮವಾರಪೇಟೆ ಉಪ ವಿಭಾಗಕ್ಕೆ ಒಳಪಟ್ಟಂತೆ ೨೮,೩೬೪ ಸಂಪರ್ಕಗಳಿದ್ದು, ಗೃಹ ಜ್ಯೋತಿ ಯೋಜನೆಯಡಿ ೨೬,೦೩೨ ನೋಂದಣಿಯಾಗಿದೆ. ೨,೩೩೨ ಮಂದಿ ನೋಂದಣಿ ಮಾಡಿಸಿಲ್ಲ. ಪ್ರತಿ ತಿಂಗಳು ೯೫ ಲಕ್ಷದಿಂದ ಒಂದು ಕೋಟಿ ಅನುದಾನ ಸರ್ಕಾರದಿಂದ ಇಲಾಖೆಗೆ ಭರಿಸಲಾಗುತ್ತಿದೆ ಎಂದು ಅಧಿಕಾರಿ ಗುಣಶೇಖರ್ ತಿಳಿಸಿದರು. ಬಿಲ್ ರೀಡಿಂಗ್‌ಗೆ ಹೋಗುವ ಸಂದರ್ಭ ಗೃಹಜ್ಯೋತಿ ಬಗ್ಗೆ ಮಾಹಿತಿ ನೀಡಿ ಯೊಜನೆಯ ಲಾಭ ನೀಡಬೇಕೆಂದು ಅಧ್ಯಕ್ಷರು ತಿಳಿಸಿದರು. ಮಳೆಗಾಲದಲ್ಲಿ ಜಂಗಲ್ ಕಟ್ಟಿಂಗ್ ಮಾಡುವ ಬದಲು ಮೇ ತಿಂಗಳಲ್ಲಿಯೇ ಮುಗಿಸಬೇಕು. ಲೈನ್‌ಮೆನ್‌ಗಳಿಗೆ ಮಳೆಗಾಲದಲ್ಲಿ ಭಾರ ಹಾಕಬಾರದು ಎಂದು ಸದಸ್ಯರುಗಳು ತಿಳಿಸಿದರು. ಲೈನ್‌ಮೆನ್‌ಗಳ ನೇಮಕ ಸಂದರ್ಭ ಆಯಾ ಜಿಲ್ಲೆಯವರಿಗೆ ಆದ್ಯತೆ ನೀಡಬೇಕು. ಹೀಗಾದಾಗ ಮಾತ್ರ ಸಿಬ್ಬಂದಿಗಳ ಕೊರತೆಯನ್ನು ತಡೆಯಬಹುದು. ಈ ನಿಟ್ಟಿನಲ್ಲಿ ಶಾಸಕರು, ಸಚಿವರೊಂದಿಗೆ ಮಾತುಕತೆ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಅನ್ನಭಾಗ್ಯ ಯೋಜನೆಯಡಿ ೨೩,೧೧೯ ಕಾರ್ಡ್ಗಳು ಡಿಬಿಟಿ ಯೋಜನೆಯ ಹಣ ಪಡೆಯಲು ಅರ್ಹವಾಗಿವೆ. ಇದರಲ್ಲಿ ಏಪ್ರಿಲ್ ಅಂತ್ಯಕ್ಕೆ ೨೨,೬೪೭ ಮಂದಿಗೆ ಹಣ ಸಂದಾಯವಾಗಿದೆ. ಇಕೆವೈಸಿ ಹಾಗೂ ಎನ್.ಪಿ.ಸಿ.ಐ. ಸಮಸ್ಯೆಯಿಂದಾಗಿ ೪೭೨ ಮಂದಿಗೆ ಡಿಬಿಟಿ ಆಗಿಲ್ಲ ಎಂದು ಅಧಿಕಾರಿ ಯಶಸ್ವಿನಿ ಸಭೆಯ ಗಮನ ಸೆಳೆದರು.

ಕೆಲವೊಂದು ನ್ಯಾಯಬೆಲೆ ಅಂಗಡಿಗಳಲ್ಲಿ ಸರಿಯಾಗಿ ಅಕ್ಕಿ ಕೊಡುತ್ತಿಲ್ಲ. ಇಕೆವೈಸಿ ಮಾಡಲು ೧೦ ರಿಂದ ೨೦ ರೂಪಾಯಿ ಪಡೆಯಲಾಗುತ್ತಿದೆ. ಹೆಬ್ಬೆಟ್ಟು ಗುರುತು ನೀಡಿದ ದಿನವೇ ಅಕ್ಕಿ ನೀಡುತ್ತಿಲ್ಲ. ಸರ್ವರ್ ಸಮಸ್ಯೆಯ ನೆಪ ನೀಡಿ ಬಡವರನ್ನು ಸಾಗ ಹಾಕುತ್ತಿದ್ದಾರೆ. ಸಮಯ ಪಾಲನೆ ಮಾಡುತ್ತಿಲ್ಲ ಎಂಬಿತ್ಯಾದಿ ಆರೋಪಗಳು ಸಭೆಯಲ್ಲಿ ಕೇಳಿ ಬಂದವು. ಮಂಗಳವಾರ ಹೊರತುಪಡಿಸಿ ಉಳಿದ ಕೆಲಸದ ದಿನಗಳಲ್ಲಿ ಬೆಳಿಗ್ಗೆ ೮ ರಿಂದ ೧೨ ಹಾಗೂ ಸಂಜೆ ೪ ರಿಂದ ೮ ಗಂಟೆಯವರೆಗೆ ಅಕ್ಕಿ ನೀಡಬೇಕು. ಪ್ರತಿ ತಿಂಗಳ ೧೨ನೇ ತಾರೀಕಿನಿಂದ ತಿಂಗಳಾAತ್ಯದವರೆಗೆ ಪಡಿತರ ವಿತರಿಸಬೇಕು. ಸಮಸ್ಯೆಗಳಿರುವ ನ್ಯಾಯಬೆಲೆ ಅಂಗಡಿಗಳ ಮಾಹಿತಿ ನೀಡಿದರೆ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿ ತಿಳಿಸಿದರು.

ಕನಿಷ್ಟ ಮಳೆಗಾಲದಲ್ಲಾದರೂ ಸೀಮೆಎಣ್ಣೆ ನೀಡಲು ಕ್ರಮ ಕೈಗೊಳ್ಳಬೇಕೆಂದು ಸದಸ್ಯ ರಾಜಪ್ಪ, ದೇವರಾಜ್ ಮನವಿ ಮಾಡಿದರು. ಈ ಬಗ್ಗೆ ನಿರ್ಣಯ ಕೈಗೊಂಡು ಸರ್ಕಾರಕ್ಕೆ ಸಲ್ಲಿಸಲು ಸಭೆ ತೀರ್ಮಾನಿಸಿತು. ಶಕ್ತಿ ಯೋಜನೆಯಡಿ ಮಡಿಕೇರಿ ಘಟಕ ವ್ಯಾಪ್ತಿಯಲ್ಲಿ ೬೦,೭೭,೧೩೭ ಮಹಿಳೆಯರು ಉಚಿತ ಪ್ರಯಾಣ ಮಾಡಿದ್ದಾರೆ. ೨೪.೧೪ ಕೋಟಿ ಆದಾಯ ಬಂದಿದೆ ಎಂದು ಅಧಿಕಾರಿ ಮೆಹಬೂಬ್ ಆಲಿ ತಿಳಿಸಿದರು. ಶನಿವಾರಸಂತೆಯ ಹಂಡ್ಲಿಯಲ್ಲಿ ಸರ್ಕಾರಿ ಬಸ್‌ಗಳು ನಿಲುಗಡೆಯಾಗುತ್ತಿಲ್ಲ. ಇದರಿಂದ ಪ್ರಯಾಣಿಕರು, ವಿದ್ಯಾರ್ಥಿಗಳಿಗೆ ಸಮಸ್ಯೆಯಾಗುತ್ತಿದೆ. ಶನಿವಾರಸಂತೆ ಮಾರ್ಗವಾಗಿ ಕೇರಳಕ್ಕೆ ಬಸ್ ವ್ಯವಸ್ಥೆಬೇಕು. ಈ ಹಿಂದೆ ಇದ್ದ ಪುತ್ತೂರು-ತಿಪಟೂರು ಮಾರ್ಗದ ಬಸ್ ಪುನರಾರಂಭಿಸಬೇಕು ಎಂದು ಸದಸ್ಯರುಗಳು ಗಮನ ಸೆಳೆದರು. ಕುಶಾಲನಗರದಲ್ಲಿ ನೂತನ ಡಿಪೋ ಸ್ಥಾಪನೆಯಾದರೆ ಸಾಕಷ್ಟು ಸಮಸ್ಯೆಗಳು ಬಗೆಹರಿಯುತ್ತವೆ. ಇದರೊಂದಿಗೆ ರಾಜ್ಯದಲ್ಲಿ ೨೫೦೦ ಸಿಬ್ಬಂದಿಗಳ ನೇಮಕವಾಗುತ್ತಿದ್ದು, ನೂತನ ಮಾರ್ಗಕ್ಕೆ ಬಸ್‌ಗಳನ್ನು ನೀಡಲು ಅನುಕೂಲವಾಗಲಿದೆ ಎಂದು ಮೆಹಬೂಬ್ ಆಲಿ ತಿಳಿಸಿದರು.

ಸಭೆಯಲ್ಲಿ ತಾ.ಪಂ. ಪ್ರಬಾರ ಕಾರ್ಯನಿರ್ವಹಣಾಧಿಕಾರಿ ವೀರಣ್ಣ ಸೇರಿದಂತೆ ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರುಗಳು, ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.