(ಹೆಚ್.ಕೆ. ಜಗದೀಶ್)
ಗೋಣಿಕೊಪ್ಪಲು, ಜು. ೧೬: ಸರ್ಕಾರಕ್ಕೆ ನ್ಯಾಯಯುತವಾಗಿ ರಾಯಲ್ಟಿ, ಪರ್ಮಿಟ್ ಇತ್ಯಾದಿಗಳನ್ನು ಪಾವತಿಸುವ ಜೊತೆಗೆ ಇಲಾಖೆಯ ಸುತ್ತೋಲೆಯಂತೆ ಲಾರಿ ಮಾಲೀಕರು ತಮ್ಮ ಲಾರಿಗಳಿಗೆ ಜಿಪಿಎಸ್ ಅಳವಡಿಸಿ ಸಾಗಾಟದಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ, ಅಳವಡಿಸಿರುವ ಜಿಪಿಎಸ್‌ನಿಂದ ಇದೀಗ ಸಮಸ್ಯೆ ಎದುರಾಗಿದೆ. ನ್ಯಾಯಯುತವಾಗಿ
ಸಾಗಾಟ ಮಾಡುವ ಲಾರಿ ಮಾಲೀಕರ ಮೇಲೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ದಂಡ ವಿಧಿಸುವ ಮೂಲಕ ಗಧಾ ಪ್ರಹಾರಕ್ಕೆ ಮುಂದಾಗಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ.
ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ಲಾರಿಗಳಿಗೆ ಜಿಪಿಎಸ್‌ಗಳನ್ನು ಅಳವಡಿಸದೆ ರಾಜರೋಷವಾಗಿ ಸಾಗಾಟ ಮಾಡುತ್ತಿವೆ. ಸರ್ಕಾರದ ನಿಯಮಗಳನ್ನು ಪಾಲಿಸುವ ಲಾರಿ ಮಾಲೀಕರುಗಳಿಗೆ ನಿಯಮ ಉಲ್ಲಂಘನೆ ನೆಪದಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ದಂಡ ವಿಧಿಸುತ್ತಿದ್ದಾರೆ. ಇದರಿಂದ ನ್ಯಾಯಯುತವಾಗಿ ಸರ್ಕಾರದ ನಿಯಮಗಳನ್ನು ಪಾಲಿಸುತ್ತ, ವ್ಯವಹಾರ ನಡೆಸುವ ಲಾರಿ ಮಾಲೀಕರಿಗೆ ಸಂಕಷ್ಟ ಎದುರಾಗಿದೆ. ತಾವು ಅನುಭವಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಒದಗಿಸುವಂತೆ ಕೊಡಗು ಜಿಲ್ಲಾ ಲಾರಿ ಮಾಲೀಕರ ಹಾಗೂ ಚಾಲಕರ ಸಂಘದ ಪದಾಧಿಕಾರಿಗಳು ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್. ಪೊನ್ನಣ್ಣ ಅವರನ್ನು ಭೇಟಿ ಮಾಡಿ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಗಮನ ಸೆಳೆದರು.
ಕೊಡಗು ಜಿಲ್ಲೆಯಲ್ಲಿ ಸಾವಿರಾರು ಲಾರಿಗಳು ದಿನಂಪ್ರತಿ ಕಟ್ಟಡ ಮತ್ತು ಇತರೆ ಸಾಮಾಗ್ರಿಗಳನ್ನು ಸಾಗಾಟ ಮಾಡುತ್ತಿವೆ. ಸರ್ಕಾರದ ಸುತ್ತೋಲೆಯಂತೆ ಇಂತಹ ಸಾಮಾಗ್ರಿಗಳನ್ನು ಸಾಗಿಸುವ ಲಾರಿಗಳು ಕಡ್ಡಾಯವಾಗಿ ಜಿಪಿಎಸ್‌ಗಳನ್ನು ಅಳವಡಿಸಿರಬೇಕು. ಇಂತಹ ಲಾರಿಗಳಿಗೆ ಕ್ರಷರ್‌ಗಳಲ್ಲಿ ಸಾಮಾಗ್ರಿಗಳನ್ನು ನೀಡಲಾಗುತ್ತಿದೆ. ಇದನ್ನು ಬೇಕಾದ ಸ್ಥಳಗಳಿಗೆ ಲಾರಿಗಳು ಸಾಗಾಟ ಮಾಡುತ್ತವೆ. ಲಾರಿಗಳು ಹೊರಡುವ ಸ್ಥಳಗಳಲ್ಲಿ ಜಿಪಿಎಸ್ ತೋರಿಸದೆ ಇರುವ ಸಂದರ್ಭ ಪಕ್ಕದ ಊರುಗಳ ಸ್ಥಳ ಎಂಟ್ರಿ ಮಾಡಿಸಿ ಲಾರಿಗಳನ್ನು ಕ್ರಷರ್‌ನಿಂದ ಬಿಡಲಾಗುತ್ತದೆ. ಸಾಮಾಗ್ರಿ ತುಂಬಿಸಿಕೊAಡ ಲಾರಿಗಳು ಸಂಬAಧಿಸಿದ ಸ್ಥಳಗಳಲ್ಲಿ ಲೋಡ್ ಇಳಿಸಿದ ನಂತರ ವಾಪಾಸ್ಸಾಗುತ್ತವೆ.
ಈ ಸಂದರ್ಭ ಹಲವೆಡೆ ಜಿಪಿಎಸ್ ಪಾಯಿಂಟ್‌ಗಳು ತೋರಿಸದೆ ಇರುವುದರಿಂದ ಸಮೀಪದ ಸ್ಥಳಗಳನ್ನು ತೋರಿಸುತ್ತವೆ. ಜಿಪಿಎಸ್ ಪಾಯಿಂಟ್‌ನಲ್ಲಿ ತೆರಳದೆ ಇರುವುದನ್ನು ಗುರಿಯಾಗಿರಿಸಿಕೊಂಡು ತಮ್ಮ ಕಚೇರಿಯಿಂದಲೇ ಪ್ರತಿ ಟ್ರಿಪ್‌ಗೆ ರೂ. ೧೦ ಸಾವಿರದಂತೆ ಅಧಿಕಾರಿಗಳು ದಂಡ ವಿಧಿಸುತ್ತಿದ್ದಾರೆ. ವಿಪರ್ಯಾಸವೆಂದರೆ, ಹಲವು ಪ್ರದೇಶಗಳಲ್ಲಿ ಜಿಪಿಎಸ್ ನೆಟ್‌ವರ್ಕಿಂಗ್ ಸರಿಯಾಗಿ ತೋರಿಸದೆ ಇರುವುದು ಈ ಸಮಸ್ಯೆಗೆ ಮೂಲ ಕಾರಣವಾಗಿದೆ. ಜಿಪಿಎಸ್ ಅಳವಡಿಸಲು ಏಜೆನ್ಸಿ ಪಡೆದಿರುವವರು ಈ ತಾಂತ್ರಿಕ ಸಮಸ್ಯೆ ಪರಿಹರಿಸುತ್ತಿಲ್ಲ.
ಇಲಾಖೆಯು ಸರಿಯಾದ ರೀತಿಯಲ್ಲಿ ಜಿಪಿಎಸ್ ಪಾಯಿಂಟ್ ಅಳವಡಿಸದೇ ಇರುವುದರಿಂದ ಈ ಸಮಸ್ಯೆ ಕಾಡುತ್ತಿದೆ. ಇದರ ದುರ್ಲಾಭ ಪಡೆದ ಲಾರಿಗಳು ಜಿಪಿಎಸ್ ಅನ್ನು ಅಳವಡಿಸದೆ ಸರ್ಕಾರದ ನಿಯಮಗಳನ್ನು ಗಾಳಿಗೆ ತೂರುವ ಮೂಲಕ, ನಿಯಮಾಬಾಹಿರವಾಗಿ ಕ್ರಷರ್‌ಗಳಿಂದ ಸಾಮಾಗ್ರಿಗಳನ್ನು ಪಡೆದು ರಾಜರೋಷವಾಗಿ ತೆರಳುತ್ತಿವೆ. ಇಂತಹ ಲಾರಿಗಳಿಗೆ ದಂಡದಿAದ ವಿನಾಯಿತಿ ಲಭಿಸುತ್ತಿದೆ.! ಜಿಪಿಎಸ್ ಇಲ್ಲದ ಲಾರಿಗಳಿಗೆ ಕ್ರಷರ್‌ನಲ್ಲಿ ಸರಕುಗಳನ್ನು ನೀಡುವುದು ನಿಲ್ಲಿಸಬೇಕು. ಇದರಿಂದ ಅಕ್ರಮಕ್ಕೆ ಕಡಿವಾಣ ಬೀಳಲಿದೆ. ಇದರಿಂದ ನ್ಯಾಯಯುತವಾಗಿರುವ ಲಾರಿ ಮಾಲೀಕರಿಗೆ ಅನುಕೂಲವಾಗಲಿದೆ.
ಕೊಡಗಿನಲ್ಲಿ ಸಾವಿರಾರು ಲಾರಿಗಳಿದ್ದರೂ ಕೇವಲ ೪೬೦ ಲಾರಿಗಳು ಮಾತ್ರ ಜಿಪಿಎಸ್ ಅಳವಡಿಸಿಕೊಂಡಿದೆ. ಇನ್ನುಳಿದ ಲಾರಿಗಳು ವಾಮ ಮಾರ್ಗದಲ್ಲಿಯೇ ಜಿಪಿಎಸ್ ಇಲ್ಲದೆ ಸಂಚರಿಸುತ್ತಿವೆ. ಬಹುತೇಕ ಕ್ರಷರ್‌ಗಳಲ್ಲಿ ಅಕ್ರಮವಾಗಿ ಕಾರ್ಯನಿರ್ವಹಿಸುವ ಇಂತಹ ಲಾರಿಗಳಿಗೆ ಸಾಮಾಗ್ರಿಗಳನ್ನು ವಿತರಿಸುತ್ತಿವೆ ಎಂಬ ಆರೋಪವು ವ್ಯಕ್ತವಾಗಿದೆ. ಆರೋಪದಿಂದ ಮುಕ್ತವಾಗಲು ಜಿಪಿಎಸ್ ಇಲ್ಲದ ಲಾರಿಗಳನ್ನು ಕ್ರಷರ್ ಬಳಿ ಬರುವುದನ್ನೇ ತಡೆಹಿಡಿಯಬೇಕಾಗಿದೆ ಎಂದು ಲಾರಿ ಮಾಲೀಕರ ಸಲಹೆಯಾಗಿದೆ. ಪ್ರತಿ ಟ್ರಿಪ್‌ಗಳಿಗೆ ರಾಯಲ್ಟಿ, ಪರ್ಮಿಟ್ ಪಡೆದು ಲೋಡ್ ಮಾಡಲಾಗುತ್ತಿದೆ. ಪರ್ಮಿಟ್ ಪಡೆದ ಸ್ಥಳಕ್ಕೆ ತೆರಳಿಲ್ಲ ಎಂಬ ಕಾರಣ ನೀಡಿ ಮಾಲೀಕರಿಗೆ ದಂಡದ ನೋಟಿಸ್ ನೀಡಲಾಗುತ್ತಿದೆ. ಲಾರಿಯವರು ಕೇಳಿದ ಪ್ರದೇಶಗಳಿಗೆ ಪರ್ಮಿಟ್ ಲಭಿಸುತ್ತಿಲ್ಲ. ಈ ಸಂದರ್ಭದಲ್ಲಿ ಸಮೀಪದ ಊರಿಗೆ ಪರ್ಮಿಟ್ ನೀಡಲಾಗುತ್ತಿದೆ. ಆದರೆ ಲಾರಿಯವರು ಪರ್ಮಿಟ್ ಪಡೆದ ನಿಗದಿತ ಸ್ಥಳಕ್ಕೆ ತೆರಳದಿದ್ದಲ್ಲಿ ೧೦ ಸಾವಿರ ರೂಪಾಯಿ ಮೊತ್ತದ ದಂಡದ ನೋಟಿಸ್ ಜಾರಿ ಮಾಡಲಾಗುತ್ತಿದೆ. ನೋಟಿಸ್ ಕೂಡ ಹಲವು ತಿಂಗಳ ನಂತರ ನೀಡಲಾಗುತ್ತಿದೆ. ಬ್ಯಾಂಕ್‌ಗಳಲ್ಲಿ ಸಾಲ ಮಾಡಿ ಲಾರಿ ಓಡಿಸುವ ಮಾಲೀಕರು ಹಾಗೂ ಚಾಲಕರಿಗೆ ಈಗ ಇದೊಂದು ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ.