ವೀರಾಜಪೇಟೆ, ಜು. ೧೬: ವೀರಾಜಪೇಟೆ ವಿಭಾಗದಲ್ಲಿ ಕಳೆದ ೫ ದಿನಗಳಿಂದ ನಿರಂತರ ಮಳೆಯಾಗುತ್ತಿದ್ದು, ಈ ವಿಭಾಗದ ಗದ್ದೆಗಳು ನೆಲ ಮಟ್ಟದಲ್ಲಿ ಜಲಾವೃತ್ತವಾಗುತ್ತಿರುವುದರಿಂದ ಕೃಷಿ ಚಟುವಟಿಕೆ ಆರಂಭಿಸಲು ರೈತರು ಸಿದ್ಧತೆ ನಡೆಸಿದ್ದಾರೆ.
ವೀರಾಜಪೇಟೆ ವಿಭಾಗದ ಆರ್ಜಿ, ಬೇಟೋಳಿ, ಹೆಗ್ಗಳ, ಕೆದಮುಳ್ಳೂರು, ಬಿಟ್ಟಂಗಾಲ, ನಾಲ್ಕೇರಿ, ಕದನೂರು, ಕಾಕೋಟುಪರಂಬು, ಕಂಡAಗಾಲ, ಚೆಂಬೆಬೆಳ್ಳೂರು, ಪಾಲಂಗಾಲ, ದೇವಣಗೇರಿ, ಹಾಲುಗುಂದ, ಒಂಟಿಯAಗಡಿ, ಕಣ್ಣಂಗಾಲ, ಐಮಂಗಲ, ಬಿಳುಗುಂದ, ಅಮ್ಮತ್ತಿ, ಹೊಸೂರು, ಹೊಸಕೋಟೆ, ಕೊಮ್ಮೆತೋಡು, ಮಗ್ಗುಲ, ಐಮಂಗಲ, ಬಾಡಗ, ರುದ್ರಗುಪ್ಪೆ, ಕರಡ, ಕಡಂಗ, ಬೇತ್ರಿ, ಕಿಗ್ಗಾಲು, ಪ್ರದೇಶಗಳಲ್ಲಿನ ಭಾರಿ ಮಳೆಯಾಗುತ್ತಿರುವುದರಿಂದ ಈ ಭಾಗದಲ್ಲಿ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಿದೆ. ಐಮಂಗಲ, ಕೊಮ್ಮೆತೋಡು, ಬಿಳುಗುಂದ ಅಮ್ಮತ್ತಿ, ಕದನೂರು, ಬಿಟ್ಟಂಗಾಲ, ಆರ್ಜಿ ಭಾಗದಲ್ಲಿ ಮಳೆಯ ನೀರನ್ನು ನೋಡಿಕೊಂಡು ಕೃಷಿಗಾಗಿ ಮೊದಲ ಹಂತದ ಉಳುಮೆ ಮಾಡಲಾಗಿದೆ. ಮಳೆ ಇದೇ ರೀತಿ ಮುಂದುವರೆದರೆ ಕೃಷಿ ಚಟುವಟಿಕೆಗಳನ್ನು ಮುಂದುವರೆಸುವುದಾಗಿ ರೈತರು ತಿಳಿಸಿದ್ದಾರೆ.
ವೀರಾಜಪೇಟೆ ವಿಭಾಗಕ್ಕೆ ಮಂಗಳವಾರ ಸುರಿದ ಮಳೆಯ ಪರಿಣಾಮವಾಗಿ ಕುಕ್ಲೂರು ಗ್ರಾಮದ ನಿವಾಸಿ ಹೆಚ್.ಪಿ. ಲವ ಅವರ ವಾಸದ ಮನೆ ಕುಸಿದು ಭಾಗಶಃ ಹಾನಿಯಾಗಿದೆ.
ಸ್ಥಳಕ್ಕೆ ವೀರಾಜಪೇಟೆ ತಾಲೂಕು ಕಂದಾಯ ಪರಿವೀಕ್ಷಕ ಹರೀಶ್ ಎಂ. ಎಲ್. ಗ್ರಾಮ ಆಡಳಿತ ಅಧಿಕಾರಿ ಪರಸಪ್ಪ ಶಿವಣಗಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ರಾತ್ರಿ ಸುರಿದ ಮಳೆಗೆ ಕೊಟ್ಟೋಳಿ ಗ್ರಾಮದ ಬೀನಾ ಅವರ ಮನೆಗೆ ಭಾಗಶಃ ಹಾನಿಯಾಗಿದೆ. ಸ್ಥಳಕ್ಕೆ ಗ್ರಾಮ ಆಡಳಿತ ಅಧಿಕಾರಿ ಅನುಷಾ, ಕಂದಾಯ ಪರಿವೀಕ್ಷಕ ಹರೀಶ್ ಎಂ. ಎಲ್ ಭೇಟಿ ನೀಡಿ ಪರಿಶಿಲಿಸಿದರು.
ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕೊಂಡAಗೇರಿ, ಬೋಯಿಕೇರಿ, ಬೇತ್ರಿ ನದಿ ನೀರಿನ ಮಟ್ಟ ಹೆಚ್ಚಾಗಿದ್ದು ಸೇತುವೆಯ ಮೆಲ್ಮಟ್ಟಕ್ಕೆ ತಲುಪುವ ಹಂತದಲ್ಲಿದೆ. ಗ್ರಾಮೀಣ ಭಾಗಗಳಲ್ಲಿ ತಗ್ಗು ಪ್ರದೇಶಗಳ ಗದ್ದೆಗಳು ಸಂಪೂರ್ಣ ನೀರಿನಿಂದ ಆವೃತ್ತವಾಗಿವೆ.
ವೀರಾಜಪೇಟೆ ವಿಭಾಗಕ್ಕೆ ಸೋಮವಾರ ಬೆಳಗ್ಗಿನಿಂದ ಮಂಗಳವಾರ ಬೆಳಗಿನ ೮ ಗಂಟೆಯ ತನಕ ಒಟ್ಟು ೫೬.೩೦ ಮಿ.ಮೀ ಮಳೆ ಸುರಿದಿದೆ.