*ಸಿದ್ದಾಪುರ, ಜು. ೧೭: ಬಿಸಿಲ ಬೇಗೆ ಕ್ಷಿಣವಾಗಿ, ತಂಪು ಗಾಳಿ ಮೈ ಸೋಕುವ ಹೊತ್ತಿನಲ್ಲೇ ಮಳೆಗಾಲದ ಆಗಮನವಾಗುತ್ತದೆ. ಜಗತ್ತೆಲ್ಲ ಮಳೆಯ ಪುಳಕಕ್ಕೆ ಮೈತೆರೆದುಕೊಳ್ಳುತ್ತದೆ. ಜೀವಜಲ ಹುಟ್ಟುವ ಹೊತ್ತು. ಜೀವರಾಶಿಗಳಿಗೆ ಹೊಸ ಬದುಕಿನ ಭರವಸೆ ನೀಡುವ ಮಳೆ ಧೋ ಎಂದು ಭೂಮ್ಯಾಕಾಶಗಳನ್ನು ಒಂದು ಮಾಡಿ ಸುರಿಯುತ್ತಿದ್ದರೆ, ಈ ಮಂದಿಗೆ ಮಾತ್ರ ಪುಳಕವಾಗದು. ಮಳೆಯು ಜೀವ ರಕ್ಷಿಸುವ ಅಮೃತಧಾರೆ ಎಂಬ ಊಹೆಯೂ ಬಾರದು!.
ಇವರ ಪಾಲಿಗೆ ಮಳೆಯು ಸಾಕ್ಷಾತ್ ಜವರಾಯನ ದೂತ!. ಕಾಯ್ದು ಕಾಯ್ದು ತಮ್ಮ ಬದುಕನ್ನು ಛಿದ್ರ ಮಾಡಲು ಬಂದಿರುವ ಮೃತ್ಯುರೂಪೀ ವರ್ಷಧಾರೆ!
ಮತ್ತೆ ಕರಡಿಗೋಡು ಎಂಬ ನತದೃಷ್ಟ ಗ್ರಾಮದಲ್ಲಿ ಆಕ್ರಂದನದ ಸುಳಿವು ಸಿಗುತ್ತಿದೆ. ಮಳೆಗೆ ಜರ್ಜರಿತವಾಗುವ ಬದುಕಿನ ಚೀತ್ಕಾರ, ಎಲ್ಲವನ್ನೂ ಕಳೆದುಕೊಂಡು ಬೀದಿಯಲ್ಲಿ ನಿಲ್ಲಬೇಕಾದ ನೋವಿನ ಕೂಗು, ಸಂತೈಸಲು ಬರುವವರ ಭರವಸೆಗಳನ್ನು ಅರಗಿಸಿಕೊಳ್ಳಲಾಗದ ಅಸಹಾಯಕತೆ- ಇವೆಲ್ಲದರ ಸುಳಿವು ಮತ್ತೊಮ್ಮೆ ದೃಗ್ಗೋಚರವಾಗುತ್ತಿದೆ.
ಸಿದ್ದಾಪುರ ಗ್ರಾಮ ಪಂಚಾಯಿತಿಗೆ ಒಳಪಡುವ ಕರಡಿಗೋಡಿನಲ್ಲಿ ಪ್ರತೀ ಮಳೆಗಾಲದಲ್ಲೂ ಕಾಡುವ ಬವಣೆಯಿದÀÄ. ಕಾವೇರಿ ದಂಡೆಯಲ್ಲಿ ಬದುಕು ಕಟ್ಟಿಕೊಂಡಿರುವ ಈ ಮಂದಿಗೆ ಈವರೆಗೂ ಶಾಶ್ವತ ಪರಿಹಾರ ಸಿಕ್ಕಿಲ್ಲ. ಪರ್ಯಾಯ ಜಾಗವಾಗಲೀ, ಮನೆಯಾಗಲೀ ಇಲ್ಲ. ಪ್ರತೀ ಮಳೆಗಾಲದಲ್ಲಿ ತೇಲಿ, ಮುಳುಗುವ ಬದುಕನ್ನು ಮೇಲೆತ್ತಿ ದಡ ಸೇರಿಸುವುದೇ ಇವರೆಲ್ಲರ ಜಾಯಮಾನ. ಇಂದಿಗೂ ಕುಸಿದುಬಿದ್ದ ೧೮ ರಿಂದ ೨೦ ಮನೆಗಳು ಇಲ್ಲಿ ಮಳೆ ಮತ್ತು ಪ್ರವಾಹದ ಕುರುಹಾಗಿ ಉಳಿದುಕೊಂಡಿವೆ. ಕೆಲವು ಮನೆಗಳು ಇಂದೋ ನಾಳೆಯೋ ನೀರು ಪಾಲಾಗುವ ಸನ್ನಾಹದಲ್ಲಿವೆ.
ಪರಿಹಾರ ಕೇಂದ್ರವೇ ಪರಿಹಾರ! ; ಕೆಲವು ನಿವಾಸಿಗಳಿಗೆ ವಿಕೋಪ ಪರಿಹಾರ ಸಿಕ್ಕಿದೆ. ಉಳಿದವರಿಗೆ ಅದೂ ಸಿಗಲಿಲ್ಲ. ಕಾರಣ, ಅಂಗಳ ದಾಟಿ ಹೊಸ್ತಿಲಿಗೆ ಬಂದ ಕಾವೇರಿ, ಆಧಾರ್, ಗುರುತಿನ ಚೀಟಿ, ಜಾತಿ ಮತ್ತು ಆದಾಯ ದೃಢೀಕರಣ ಪತ್ರ ಇತ್ಯಾದಿ ದಾಖಲಾತಿಗಳನ್ನೂ ಹೊತ್ತೊಯ್ದಿದ್ದಾಳೆ!. ಈ ಸಂತ್ರಸ್ತರನ್ನು ಕರಡಿಗೋಡಿನಿಂದ ಸ್ಥಳಾಂತರಿಸುವು ದೊಂದೇ ಪರಿಹಾರ ಎಂದು ಹಿಂದೆಯೇ ನಿರ್ಧರಿಸಲಾಗಿತ್ತು. ಆ ಕಾರ್ಯ ಇಂದಿಗೂ ಸಾಕಾರ ಗೊಂಡಿಲ್ಲ. ಸದ್ಯಕ್ಕಿರುವ ಪರಿಹಾರವೆಂದರೆ, ಪ್ರತೀ ವರ್ಷ ಪರಿಹಾರ ಕೇಂದ್ರ ಸ್ಥಾಪಿಸುವುದು. ಈ ಚರ್ವಿತಚರ್ವಣ ಸಾಧನೆ ಕಳೆದ ಒಂದು ದಶಕದಿಂದಲೂ ನಡೆಯುತ್ತಿದೆ. ಅಧಿಕಾರಿಗಳ ಪ್ರಯಾಣ, ಪರಿಶೀಲನೆ, ಪರಿಹಾರ ಕೇಂದ್ರ ಸ್ಥಾಪನೆ ಎಂದೆಲ್ಲ ಲಕ್ಷ ಲಕ್ಷ ಖರ್ಚು ಮಾಡಲಾಗುತ್ತಿದೆ. ಬಿರುಸಿನ ಮಳೆಗೆ ಪರಿಹಾರ ಕೇಂದ್ರ ಸೇರುವ ನಿವಾಸಿಗಳು, ಮಳೆ ಕ್ಷೀಣಗೊಂಡಾಗ
(ಮೊದಲ ಪುಟದಿಂದ) ಅದೇ ಹೊಳೆದಂಡೆಯ ಅಪಾಯಕಾರಿ ಮನೆಗೆ ಮರಳುತ್ತಾರೆ! ಈವರೆಗೆ ಕರಡಿಗೋಡು ಸಂತ್ರಸ್ತರಿಗೆ ಪರಿಹಾರ ಕೇಂದ್ರದ ಹೆಸರಲ್ಲಿ ತಾತ್ಕಾಲಿಕ ಪರಿಹಾರಕ್ಕೆ ಸರ್ಕಾರ ಖರ್ಚು ಮಾಡಿರುವುದು ಅದೆಷ್ಟೋ ಲಕ್ಷ ರೂಪಾಯಿ!
ಬಿಟ್ಟಂಗಾಲಕ್ಕೆ ಹೋಗಲೊಪ್ಪದ ಜನ!!
ಕೆ.ಜಿ. ಬೋಪಯ್ಯ ಶಾಸಕರಾಗಿದ್ದ ಅವಧಿಯಲ್ಲಿ ಕರಡಿಗೋಡು ಜನರಿಗಾಗಿ ಬಿಟ್ಟಂಗಾಲ ಸಮೀಪ ಜಾಗ ಗುರುತಿಸಲಾಗಿತ್ತು. ಆದರೆ, ಸಂತ್ರಸ್ತರು ಸÀÄತಾರಾಮ್ ಅಲ್ಲಿಗೆ ತೆರಳಲು ಒಪ್ಪಲೇ ಇಲ್ಲ. ಹುಟ್ಟಿ ಬೆಳೆದ ಜಾಗವನ್ನು ತೊರೆದು ಹೊಸ ಪ್ರದೇಶಕ್ಕೆ ಬರಲಾರೆವು ಎಂದು ಪಟ್ಟು ಹಿಡಿದರು. ಸಾರಿಗೆ ಸಂಪರ್ಕವಿಲ್ಲದ, ಮೂಲಭೂತÀ ಸೌಲಭ್ಯಗಳೂ ಇಲ್ಲದ ಕುಗ್ರಾಮಕ್ಕಿಂತ ಪ್ರವಾಹದ ಸಾಂಗತ್ಯವೇ ಮೇಲು ಎಂದು ಕುಳಿತುಬಿಟ್ಟರು. ಅಲ್ಲಿಗೆ ಸ್ಥಳಾಂತರದ ಯೋಜನೆ ಕುಸಿದುಬಿತ್ತು.
ಮಳೆ ಆರ್ಭಟಿಸಿದರೆ, ಹೊಳೆ ಬದಿಯ ನಿವಾಸಿಗಳು ಅಕ್ಷರಶ: ನಡುಗಿಹೋಗುತ್ತಾರೆ. ಹೊಳೆೆ ನೀರಿನಲ್ಲಿ ಏರಿಕೆಯಾದರೆ ಶಾಂತಿ ನೆಮ್ಮದಿ ಕಳೆದುಕೊಳ್ಳುತ್ತಾರೆ. ಕಷ್ಟದ ಬೆವರಿನಿಂದ ಸಂಪಾದಿಸಿದ ಟಿವಿ, ಫ್ರಿಡ್ಜ್, ಅಲ್ಮೇರಾಗಳೆಲ್ಲ ನೀರಿನಲ್ಲಿ ತೇಲಿಹೋಗುತ್ತಿದ್ದರೆ, ಕಣ್ಣೀರ್ಗರೆಯುತ್ತಾರೆ.
ಆದರೆ, ಅವರ ಕಣ್ಣೀರು ಮಳೆಯ ಹನಿಗಳ ಜೊತೆಗೆ ಕರಗಿಹೋಗುತ್ತದೆ!
ಸರ್ಕಾರ ಒಂದೇ ಒಂದು ಇಚ್ಛಾಶಕ್ತಿ ತೋರಿದ್ದರೆ ಕರಡಿಗೋಡಿನ ಜನರ ಕಣ್ಣೀರಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಬಹುದಿತ್ತು. ಹಾಗಾಗದಿರುವುದು ಮಾತ್ರ ವಿಪರ್ಯಾಸವೇ ಸರಿ!
ವರದಿ: ಅಂಚೆಮನೆ ಸುಧಿ, ಸಿದ್ದಾಪುರ