ಕುಶಾಲನಗರ, ಜು. ೧೭: ಜೀವನದಿ ಕಾವೇರಿ ನೇರವಾಗಿ ಕಲುಷಿತಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಕ್ರಮಕ್ಕೆ ಮುಂದಾಗಿದ್ದು, ಇದೀಗ ದೂರೊಂದರ ಹಿನ್ನೆಲೆಯಲ್ಲಿ ಕುಶಾಲನಗರ ಪುರಸಭೆ ಮುಖ್ಯ ಅಧಿಕಾರಿ ವಿರುದ್ಧ ನ್ಯಾಯಾಲಯದಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಸಿದ್ಧತೆ ನಡೆಸಿದೆ.
ಕೊಡವ ಕೂಟಾಳಿಯಡ ಕೂಟದ ಅಧ್ಯಕ್ಷ ಜೋಡುಮಾಡ ಸಿ. ಸೂರಜ್ ಅವರು ಕೇಂದ್ರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಗೆ ದೂರು ಸಲ್ಲಿಸಿದ ಹಿನ್ನೆಲೆಯಲ್ಲಿ ಈ ಕ್ರಮ ನಡೆದಿದೆ.
ಕಾವೇರಿ ನದಿ ನೇರವಾಗಿ ಕಲುಷಿತಗೊಂಡು ತನ್ನ ಗುಣಮಟ್ಟ ಕ್ಷೀಣಿಸುತ್ತಿದ್ದರೂ ಮಂಡಳಿ ಯಾವುದೇ ಕ್ರಮವನ್ನು ಕೈಗೊಂಡಿಲ್ಲ ಎಂದು ಆರೋಪಿಸಿರುವ ಸೂರಜ್ ತಕ್ಷಣ ಕ್ರಮ ಕೈಗೊಳ್ಳುವಂತೆ ದಾಖಲೆ ಸಹಿತ ಪತ್ರ ಬರೆದಿದ್ದರು.
ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಕ್ರಮ ತೆಗೆದುಕೊಳ್ಳುವ ಬಗ್ಗೆ ಲಿಖಿತವಾಗಿ ಸೂರಜ್ ಅವರಿಗೆ ಉತ್ತರ ನೀಡಿ, ಸಂಬAಧಿಸಿದ ಇಲಾಖೆಗಳಿಗೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದೆ.
ಹಸಿರು ನ್ಯಾಯಪೀಠದ ಆದೇಶದ ಅನ್ವಯ ನದಿಗೆ ನೇರವಾಗಿ ತ್ಯಾಜ್ಯ ಹಾಗೂ ಕಲುಷಿತ ನೀರು ಹರಿಸುವಂತಿಲ್ಲ. ಸ್ಥಳೀಯ ಸಂಸ್ಥೆಗಳು ನ್ಯಾಯಾಲಯದ ಆದೇಶ ಪಾಲಿಸುತ್ತಿಲ್ಲ. ಜೀವನದಿ ಕಾವೇರಿ ನೇರವಾಗಿ ತ್ಯಾಜ್ಯವನ್ನು ಹೊತ್ತು ಸಾಗುತ್ತಿದೆ. ನದಿ ನೀರು ಕುಡಿಯಲು ಯೋಗ್ಯವಾಗಿಲ್ಲ ಎನ್ನುವ ವರದಿಗಳು ಬಂದಿವೆ. ಕಾವೇರಿ ನದಿ ಸೇರಿದಂತೆ ಲಕ್ಷ್ಮಣ ತೀರ್ಥ ಮುಂತಾದ ನದಿಗಳ ಗುಣಮಟ್ಟ ಪರಿಶೀಲನೆ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸಾಮಾಜಿಕ ಕಾರ್ಯಕರ್ತ ವಿ.ಟಿ. ಮದನ್ ದಾಖಲೆ ಸಹಿತ ಅರ್ಜಿ ಕೂಡ ಸಲ್ಲಿಸಿದ್ದಾರೆ.
ಕಾವೇರಿ ನದಿ ಮಲಿನವಾಗುತ್ತಿರುವ ಬಗ್ಗೆ ಶಕ್ತಿ ಪತ್ರಿಕೆ ಕಳೆದ ಹಲವು ವರ್ಷಗಳಿಂದ ನಿರಂತರವಾಗಿ ವರದಿ ಪ್ರಕಟಗೊಳಿಸುತ್ತಿರುವುದನ್ನು ಕೂಡ ಇಲ್ಲಿ ಗಮನಿಸಬಹುದು.
ಜಿಲ್ಲೆಯ ವಿವಿಧೆಡೆ ಒಳಚರಂಡಿ ವ್ಯವಸ್ಥೆ ಹಾಗೂ ವಾಣಿಜ್ಯ ಘಟಕಗಳಿಂದ ಹೊರಹೋಗುವ ತ್ಯಾಜ್ಯಗಳನ್ನು ವಿಲೇವಾರಿ ಮಾಡಲು ಶುದ್ಧೀಕರಣ ಘಟಕಗಳು ಇಲ್ಲದ ಕಾರಣ ನದಿ ನೀರು ವಿವಿಧ ರೀತಿಯಲ್ಲಿ ನೇರವಾಗಿ ಕಲುಷಿತಗೊಳ್ಳುತ್ತಿದೆ.
ಈ ಹಿನ್ನೆಲೆಯಲ್ಲಿ ನ್ಯಾಯಾಲಯದಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಮೂಲಕ ಸಿದ್ಧತೆ ನಡೆದಿದೆ.
ಬೆಂಗಳೂರಿನಲ್ಲಿ ಜನವರಿ ತಿಂಗಳಲ್ಲಿ ಮಂಡಳಿಯ ಕೇಂದ್ರ ಕಚೇರಿಯಲ್ಲಿ ಕುಶಾಲನಗರ ಪುರಸಭೆ ಪ್ರಮುಖರನ್ನು ಒಳಗೊಂಡAತೆ ಮಂಡಳಿಯ ಅಧ್ಯಕ್ಷರ ಸಮ್ಮುಖದಲ್ಲಿ ವಿಚಾರಣೆ ನಡೆದಿತ್ತು. ವಿಚಾರಣೆ ಸಂದರ್ಭ ನೀಡಿದ ಮೌಖಿಕ ನಿರ್ದೇಶನಗಳನ್ನು ಇದುವರೆಗೂ ಪಾಲಿಸದೆ ಇರುವ ಹಿನ್ನೆಲೆಯಲ್ಲಿ ಕುಶಾಲನಗರ ಪುರಸಭೆ ಮುಖ್ಯ ಅಧಿಕಾರಿ ವಿರುದ್ಧ ನ್ಯಾಯಾಲಯದಲ್ಲಿ ಕ್ರಿಮಿನಲ್ ಮೊಕದಮ್ಮೆ ಹೂಡಲು ಮಂಡಳಿಗೆ ಸಂಬAಧಿಸಿದ ಇಲಾಖೆಗಳಿಂದ ಆಡಳಿತಾತ್ಮಕ ಅನುಮೋದನೆ ದೊರೆತಿದೆ.
ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಅನ್ವಯ ಕಾವೇರಿ ನದಿಯ ನೀರಿನ ಗುಣಮಟ್ಟವು ಸಂಪೂರ್ಣ ಕೆಳದರ್ಜೆಗೆ ಇಳಿದಿರುವುದು ದಾಖಲೆಗಳ ಮೂಲಕ ದೃಢಪಟ್ಟಿದೆ.
ಕಾವೇರಿ ಮೂಲ ಕೊಡಗು ಜಿಲ್ಲೆ ಸೇರಿದಂತೆ ನದಿ ಹರಿಯುವ ಮೈಸೂರು ಮತ್ತಿತರ ಜಿಲ್ಲೆಗಳಲ್ಲಿ ನದಿ ನೀರಿನ ಗುಣಮಟ್ಟ ಪರಿಶೀಲಿಸಲು ಉನ್ನತ ಮಟ್ಟದ ತಾಂತ್ರಿಕ ಸಮಿತಿಯನ್ನು ಈಗಾಗಲೇ ಸರ್ಕಾರ ರಚಿಸಿದೆ.
ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷರ ನೇತೃತ್ವದಲ್ಲಿ ನದಿ ನೀರಿನ ಮಾಲಿನ್ಯದ ತಡೆಗೆ ಅಗತ್ಯವಿರುವ ಮಾರ್ಗೋಪಾಯಗಳನ್ನು ಕಂಡುಕೊಳ್ಳಲು ಸಂಬAಧಪಟ್ಟ ಇಲಾಖೆಗಳ ತಜ್ಞರು ಸೇರಿಸಿ ಈ ಸಮಿತಿ ರಚಿಸಲಾಗಿದೆ.
ಮಾಲಿನ್ಯ ನಿಯಂತ್ರಣ ಮಂಡಳಿಯ ಮುಖ್ಯ ಪರಿಸರ ಅಧಿಕಾರಿ ನಿರಂಜನ್ ಸೇರಿದಂತೆ ಒಟ್ಟು ಒಂಭತ್ತು ಮಂದಿ ಈ ತಜ್ಞರ ಸಮಿತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು ಸದ್ಯದಲ್ಲಿಯೇ ಸರಕಾರಕ್ಕೆ ನದಿ ಮಾಲಿನ್ಯದ ಬಗ್ಗೆ ವರದಿ ನೀಡಬೇಕಾಗಿದೆ.