ಮಡಿಕೇರಿ, ಜು. ೧೭: ೨೦೨೪-೨೫ನೇ ಸಾಲಿನಲ್ಲಿ ಮುಂಗಾರು ಹಂಗಾಮಿನ ಮರು ವಿನ್ಯಾಸಗೊಳಿಸಲಾದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯನ್ನು ಕೊಡಗು ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಜಿಲ್ಲೆಯ ಮುಖ್ಯ ಬಹುವಾರ್ಷಿಕ ಬೆಳೆಗಳಾದ ಕಾಳುಮೆಣಸು ಹಾಗೂ ಅಡಿಕೆ ಬೆಳೆಗಳಿಗೆ ಅನುಷ್ಠಾನಗೊಳಿಸಲಾಗುವುದು.

ಹವಾಮಾನ ಅಂಶಗಳಾದ ಮಳೆಯ ಪ್ರಮಾಣ, ತಾಪಮಾನ ಆದ್ರತೆ ಮತ್ತಿತರ ಮಾಹಿತಿಗಳನ್ನು ಸ್ಥಳೀಯವಾಗಿ ಲಭ್ಯವಿರುವ ಟೆಲಿಮೆಟ್ರಿಕ್ ಮಳೆ ಮಾಪನ ಕೇಂದ್ರಗಳಲ್ಲಿ ದಾಖಲಿಸುವ ಅಂಶಗಳ ಆಧಾರದ ಮೇಲೆ ಬೆಳೆ ವಿಮೆ ನಷ್ಟವನ್ನು ತೀರ್ಮಾನಿಸಲಾಗುವುದು. ಈ ಯೋಜನೆಯ ವಿಮೆ ನೋಂದಣಿಗೆ ತಾ. ೩೧ ಕೊನೆಯ ದಿನವಾಗಿದೆ.

೨೦೨೪-೨೫ನೇ ಸಾಲಿನಲ್ಲಿ ಮುಂಗಾರು ಹಂಗಾಮಿನ ಮರು ವಿನ್ಯಾಸಗೊಳಿಸಲಾದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ ಬೆಳೆವಾರು ವಿಮಾ ಮೊತ್ತ ಹಾಗೂ ಕಂತಿನ ವಿವರ ಇಂತಿದೆ.

ಕಾಳುಮೆಣಸು ಬೆಳೆಗೆ ಪ್ರತಿ ಹೆಕ್ಟೇರ್‌ಗೆ ವಿಮಾ ಮೊತ್ತ (ರೂ.ಗಳಲ್ಲಿ) ರೂ. ೪೭,೦೦೦, ಪ್ರತಿ ಹೆಕ್ಟೇರ್‌ಗೆ ವಿಮಾ ಕಂತು (ಶೇ. ೩೦) ರೂ. ೧೪,೧೦೦ ಮತ್ತು ರೈತರು ಪಾವತಿಸಬೇಕಾಗಿರುವ ಕಂತು (ಶೇ. ೫) ರೂ. ೨,೩೫೦.

ಅಡಿಕೆ ಬೆಳೆಗೆ ಪ್ರತಿ ಹೆಕ್ಟೇರ್‌ಗೆ ವಿಮಾ ಮೊತ್ತ (ರೂ.ಗಳಲ್ಲಿ) ರೂ. ೧,೨೮,೦೦೦, ಪ್ರತಿ ಹೆಕ್ಟೇರ್‌ಗೆ ವಿಮಾ ಕಂತು (ಶೇ. ೩೦) ರೂ. ೩೮,೪೦೦ ಮತ್ತು ರೈತರು ಪಾವತಿಸಬೇಕಾಗಿರುವ ಕಂತು (ಶೇ. ೫) ರೂ. ೬,೪೦೦ ಆಗಿರುತ್ತದೆ.

ಹೆಚ್ಚಿನ ಮಾಹಿತಿಗೆ ರೈತರು ಕೂಡಲೇ ಸಮೀಪದ ಬ್ಯಾಂಕ್ ಶಾಖೆ ಅಥವಾ ತಾಲೂಕಿನ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಹಾಗೂ ರೈತ ಸಂಪರ್ಕ ಕೇಂದ್ರದ ಸಹಾಯಕ ತೋಟಗಾರಿಕೆ ಅಧಿಕಾರಿಗಳನ್ನು ಅಥವಾ ಸಾಮಾನ್ಯ ಸೇವಾ ಕೇಂದ್ರಗಳನ್ನು (ಸಿಎಸ್‌ಸಿ) ಸಂಪರ್ಕಿಸಬಹುದು ಎಂದು ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಯೋಗೇಶ್ ತಿಳಿಸಿದ್ದಾರೆ.