ಮಡಿಕೇರಿ, ಜು. ೧೭: ತೀವ್ರ ಮಳೆಯಿಂದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮಕ್ಕೆ (ಚೆಸ್ಕಾಂ) ರೂ. ೧.೧೭ ಕೋಟಿ ನಷ್ಟ ಸಂಭವಿಸಿದೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.
ಏಪ್ರಿಲ್ನಿಂದ ಇಲ್ಲಿಯ ತನಕದ ನಷ್ಟದ ಮೊತ್ತ ಇದಾಗಿದ್ದು, ವಿದ್ಯುತ್ ಕಂಬ, ಟ್ರಾನ್ಸ್ಫಾರ್ಮರ್ಗಳನ್ನು ಬದಲಿಸಿ ವಿದ್ಯುತ್ ಸಮಸ್ಯೆಗಳನ್ನು ಬಗೆಹರಿಸಲಾಗುತ್ತಿದೆ.
ಜಿಲ್ಲೆಯಲ್ಲಿ ೧೬೦೬ ಕಂಬಗಳು ಹಾನಿಯಾಗಿದ್ದು, ೧೧೦ ಸರಿಪಡಿಸಲು ಬಾಕಿ ಇವೆ. ೧.೫ ಕಿ.ಮೀ ವಿದ್ಯುತ್ ವಾಹಕ ಅಳಡಿಸಲಾಗಿದೆ. ಮಳೆಯಿಂದ ಹಾನಿಗೀಡಾದ ೪೩ ಟ್ರಾನ್ಸ್ಫಾರ್ಮರ್ಗಳನ್ನು ಹೊಸದಾಗಿ ಅಳವಡಿಸಿ ಕ್ರಮವಹಿಸಲಾಗಿದೆ. ೨೩೫ ಖಾಯಂ ಲೈನ್ಮೆನ್ಗಳಿದ್ದು, ಮಳೆಗಾಲಕ್ಕಾಗಿ ವಿವಿಧೆಡೆಗಳಿಂದ ೪೦ ಲೈನ್ಮೆನ್ಗಳನ್ನು ನೇಮಿಸಿಕೊಳ್ಳಲಾಗಿದೆ. ಇದರೊಂದಿಗೆ ತಾತ್ಕಾಲಿಕವಾಗಿ ೬೨ ಗ್ಯಾಂಗ್ಮೆನ್ಗಳನ್ನು ನಿಯೋಜಿಸಿಕೊಂಡಿರುವುದಾಗಿ ಅಧಿಕಾರಿಗಳು ‘ಶಕ್ತಿ’ಗೆ ಮಾಹಿತಿ ಒದಗಿಸಿದ್ದಾರೆ.
ತೀವ್ರ ಮಳೆಯ ನಡುವೆ ಚೆಸ್ಕಾಂ ಸಿಬ್ಬಂದಿ ಹಗಲಿರುಳು ಶ್ರಮಿಸುತ್ತಿರುವುದು ಜಿಲ್ಲೆಯಲ್ಲಿ ಕಂಡುಬರುತ್ತಿದೆ.