ಸೋಮವಾರಪೇಟೆ, ಜು. ೧೭: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೋಮವಾರಪೇಟೆ ಯೋಜನಾ ಕಚೇರಿ ವತಿಯಿಂದ ಪಟ್ಟಣದ ಸವಿತಾ ಸಮಾಜದಲ್ಲಿ ಸಾಮಾಜಿಕ ಅರಣ್ಯೀಕರಣ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮವನ್ನು ಸಾಮಾಜಿಕ ಅರಣ್ಯ ಇಲಾಖೆಯ ವಲಯ ಅರಣ್ಯ ಅಧಿಕಾರಿ ಭವ್ಯ ಸಿ.ಕೆ. ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಯೋಜನಾಧಿಕಾರಿ ರೋಹಿತ್, ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಡಬೇಕು. ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಬೇಕು. ಕೊಡಗು ಜಿಲ್ಲೆಯಲ್ಲಿ ಕಳೆದ ವರ್ಷದಿಂದ ಉಷ್ಣತೆ ಹೆಚ್ಚಾಗಿರುವುದು ಕಳವಳಕಾರಿ. ಈ ಹಿನ್ನೆಲೆ ಪರಿಸರದ ಸಮತೋಲನ ಕಾಯ್ದುಕೊಳ್ಳಬೇಕು ಎಂದರು. ಇದರೊಂದಿಗೆ ಯೋಜನೆಯ ಶೌರ್ಯ ವಿಪತ್ತು ನಿರ್ವಹಣಾ ತಂಡದ ಬಗ್ಗೆ ಮಾಹಿತಿ ನೀಡಿದರು.

ಕೊಡಗು ಜಿಲ್ಲಾ ಜನಜಾಗೃತಿ ಸಮಿತಿ ಸ್ಥಾಪಕ ಅಧ್ಯಕ್ಷ ಅಭಿಮನ್ಯು ಕುಮಾರ್ ಮಾತನಾಡಿ, ಗಿಡ ನಾಟಿಯ ಜೊತೆಗೆ ಪೋಷಣೆಗೂ ಸಹ ಅಗತ್ಯ ಎಂದರು. ಸರ್ಕಾರಿ ಪ್ರಕೃತಿ ಚಿಕಿತ್ಸೆ ಯೋಗ ಆಸ್ಪತ್ರೆಯ ಆರ್ಯುವೇದ ವೈದ್ಯೆ ಶ್ವೇತ ಮಾತನಾಡಿ, ಔಷಧೀಯ ಗಿಡಗಳನ್ನು ಬೆಳೆಸಲು ಕರೆ ನೀಡಿದರು. ಜೊತೆಗೆ ಔಷಧೀಯ ಗುಣಗಳಿರುವ ಸಸಿಗಳ ಬಗ್ಗೆ ಮಾಹಿತಿ ನೀಡಿದರು. ನಂತರ ಸರ್ಕಾರಿ ಪಶು ಚಿಕಿತ್ಸೆ ಹಾಗೂ ಯೋಗಾ ಆಸ್ಪತ್ರೆ ಯಲ್ಲಿ ಸಸಿಗಳನ್ನು ನೆಡಲಾಯಿತು. ಸ್ವ ಸಹಾಯ ಸಂಘದ ಸದಸ್ಯರಿಗೆ ೧೫೦ ಗಿಡಗಳನ್ನು ವಿತರಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಸವಿತಾ ಸಮಾಜದ ಕಾರ್ಯದರ್ಶಿ ಬಾಲಕೃಷ್ಣ, ಒಕ್ಕೂಟದ ಅಧ್ಯಕ್ಷೆ ಲತಾ, ಅಣ್ಣಪ್ಪ, ಶೌರ್ಯ ವಿಪತ್ತು ತಂಡದ ಸದಸ್ಯರು, ಸ್ವಸಹಾಯ ಹಾಗೂ ಪ್ರಗತಿ ಬಂದು ಸಂಘದ ಸದಸ್ಯರು ಭಾಗಿಯಾಗಿದ್ದರು.