ಚೆಯ್ಯಂಡಾಣೆ, ಜು. ೧೭: ಬೆಟ್ಟ ಗುಡ್ಡಗಳ ನಡುವೆ ಜುಳು ಜುಳು ಶಬ್ದದೊಂದಿಗೆ ಮಂಜು ಮುಸುಕಿನಲ್ಲಿ ಎತ್ತರದಿಂದ ಧುಮುಕುವ ಚೇಲಾವರ ಜಲಪಾತ ಚೋಮಕುಂದ್, ಕಬ್ಬೆ ಬೆಟ್ಟ ಹಾಗೂ ದೊಡ್ಡ ಬೆಟ್ಟದ ಮೂಲಕ ಹರಿದು ಬರುತ್ತಿದೆ. ಈ ಜಲಪಾತವು ಕೊಡಗಿನ ಮಡಿಕೇರಿ ತಾಲೂಕಿನ ಚೆಯ್ಯಂಡಾಣೆ ಸಮೀಪದ ನರಿಯಂದಡ ಗ್ರಾಮ ಪಂಚಾಯಿತಿಗೆ ಒಳಪಟ್ಟ ಚೇಲಾವರ ಗ್ರಾಮದಲ್ಲಿದೆ.
ಜಲಪಾತದ ಸುತ್ತಲೂ ಪರ್ವತಗಳಿಂದ ಕೂಡಿದ ಬೆಟ್ಟ ಗುಡ್ಡಗಳ ಕಾಡು ಹಾಗೂ ಚಿಕ್ಕ ಚಿಕ್ಕ ಜಲ ಹರಿಯುವ ಕೊಲ್ಲಿಗಳು, ದೊಡ್ಡ ದೊಡ್ಡ ಬಂಡೆಗಳು ಇದನೆಲ್ಲಾ ಮನತುಂಬಲು ಹೆಚ್ಚಾಗಿ ಪ್ರವಾಸಿಗರು ಆಗಮಿಸುವ ತಾಣವಾಗಿ ಚೇಲಾವರ ಜಲಪಾತ ಹೆಸರುವಾಸಿಯಾಗಿದೆ.
ಈ ಜಲಪಾತವು ಆಮೆ ಆಕಾರದ ಬಂಡೆಯನ್ನು ಹೋಲುವ ಆಕೃತಿ ಹೊಂದಿರುವ ಕಾರಣ ಇದನ್ನು ಆಮೆಪಾರೆ ಎಂದು ಕೂಡ ಕರೆಯುತ್ತಾರೆ.