ಮಡಿಕೇರಿ, ಜು. ೧೭: ಬೆಂಗಳೂರಿನ ಕೆ.ಎಸ್.ಹೆಚ್.ಎ ಕ್ರೀಡಾಂಗಣದಲ್ಲಿ ನಡೆದ ಸಿ.ಐ.ಎಸ್.ಸಿ.ಇ ಅಂಡರ್ ೧೭ ವಲಯ ಮಟ್ಟದ ಹಾಕಿ ಟೂರ್ನಿಯ ವಿಜೇತರಾಗಿ ಗೋಣಿಕೊಪ್ಪ ಕಾಪ್ಸ್ ವಿದ್ಯಾಸಂಸ್ಥೆ ಹೊರಹೊಮ್ಮಿದೆ. ಸಂತ ಜೋಸೆಫರ ಯೂರೋಪಿಯನ್ ಪ್ರೌಢಶಾಲೆಯ ವಿರುದ್ಧ ಟೂರ್ನಿಯ ಫೈನಲ್‌ನಲ್ಲಿ ೧-೦ ಗೋಲುಗಳಿಂದ ಗೆಲುವು ಸಾಧಿಸಿದೆ. ತಂಡದ ಪರ ಎಂ.ಎಸ್ ಮಯಾನ್ ಮುತ್ತಣ್ಣ ಗೋಲು ದಾಖಲಿಸಿದರು. ಇದಕ್ಕೂ ಮುನ್ನ ನಡೆದ ಅರ್ಹತಾ ಪಂದ್ಯದಲ್ಲಿ ಕ್ಲಾರೆನ್ಸ್ ಪಬ್ಲಿಕ್ ಶಾಲೆಯ ವಿರುದ್ಧ ೬-೦ ಗೋಲುಗಳಿಂದ ಹಾಗೂ ಸೆಮಿಫೈನಲ್‌ನಲ್ಲಿ ವಿದ್ಯಾಶಿಲ್ಪ್ ಅಕಾಡೆಮಿ ವಿರುದ್ಧ ೨-೦ ಗೋಲುಗಳಿಂದ ಕಾಪ್ಸ್ ತಂಡ ಗೆಲುವು ಸಾಧಿಸಿತ್ತು. ಒಡಿಶಾದ ಭುವನೇಶ್ವರಿ ಕಾಳಿಂಗ ಕ್ರೀಡಾಂಗಣದಲ್ಲಿ ನಡೆಯಲಿರುವ ಸಿ.ಐ.ಎಸ್.ಸಿ.ಇ ರಾಷ್ಟ್ರೀಯ ಮಟ್ಟದ ಕ್ರೀಡಾಕೂಟಕ್ಕೆ ಈ ಮೂಲಕ ಕಾಪ್ಸ್ ತಂಡ ಆಯ್ಕೆಯಾಗಿದೆ. ಕ್ರೀಡಾಕೂಟದಲ್ಲಿ ಶಾಲಾ ಟ್ರಸ್ಟ್ ಅಧ್ಯಕ್ಷ ಕೆ.ಧನ್ಯ ಸುಬ್ಬಯ್ಯ, ದೈಹಿಕ ಶಿಕ್ಷಣ ನಿರ್ದೇಶಕ ಹಾಗೂ ತರಬೇತುದಾರ ಮಿಲನ್ ಕೆ.ಎನ್ ಅವರುಗಳು ಹಾಜರಿದ್ದರು.