ಸಿದ್ದಾಪುರ, ಜು. ೧೭: ನಡೆದಾಡಲು ಹರಸಾಹಸಪಡುತ್ತಿರುವ ಬಾಣಂತಿಯರು, ನವಜಾತ ಶಿಶುವಿನೊಂದಿಗೆ ಜೀವ ಭಯದಲ್ಲಿ ತೆರಳುವ ಪೋಷಕರು. ಇದು ನೆಲ್ಲಿಹುದಿಕೇರಿ ಗ್ರಾ.ಪಂ. ಕಚೇರಿಯ ಸಮೀಪದಲ್ಲಿರುವ ಆರೋಗ್ಯ ಉಪಕೇಂದ್ರದ ದುರವಸ್ಥೆಯಾಗಿದೆ.
ಮಳೆ ಸುರಿಯುತ್ತಿರುವುದರಿಂದ ಆಸ್ಪತ್ರೆಯ ಮುಂಭಾಗ ನೀರು ನಿಂತು ನಡೆದಾಡಲು ಸಾಧ್ಯವಾಗದಂತಿದೆ. ಒಂದೆಡೆ ನೀರು ನಿಂತಿರುವುದು ಇನ್ನೊಂದೆಡೆ ಪಾಚಿ ಕಟ್ಟಿರುವ ನೆಲ, ಈ ಹಿನ್ನೆಲೆಯಲ್ಲಿ ಇಲ್ಲಿನ ಸಿಬ್ಬಂದಿಗಳು ಇಟ್ಟಿಗೆಗಳನ್ನು ಜೋಡಿಸಿ ತಾತ್ಕಾಲಿಕವಾಗಿ ನಡೆದಾಡಲು ಅನುಕೂಲ ಮಾಡಿಕೊಂಡಿದ್ದಾರೆ.
ಕಳೆದ ಕೆಲವು ದಿನಗಳ ಹಿಂದೆ ನವಜಾತ ಶಿಶುವಿಗೆ ಚುಚ್ಚುಮದ್ದು ಹಾಕಲೆಂದು ಉಪಕೇಂದ್ರಕ್ಕೆ ಬಂದ ಮಹಿಳೆಯು ಕೆಸರಿನಲ್ಲಿ ಜಾರಿ ಬಿದ್ದ ಘಟನೆ ನಡೆದಿದೆ.
ಇಷ್ಟೆಲ್ಲಾ ಅನಾಹುತಗಳಾದರೂ ಕೂಡ ಆಸ್ಪತ್ರೆಯ ಮುಂಭಾಗದ ರಸ್ತೆಯ ದುರಸ್ತಿಗೆ ಸ್ಥಳೀಯ ಗ್ರಾ.ಪಂ. ಹಾಗೂ ಆರೋಗ್ಯ ಇಲಾಖೆ ನಿರ್ಲಕ್ಷö್ಯ ವಹಿಸಿರುವುದು ವಿಪರ್ಯಾಸ. ಕೆಲವು ದಿನಗಳ ಹಿಂದೆ ಮಗುವಿಗೆ ಚುಚ್ಚುಮದ್ದು ನೀಡಲು ಉಪಕೇಂದ್ರಕ್ಕೆ ಬಂದಿದ್ದೆ. ಮುಖ್ಯ ರಸ್ತೆಯಿಂದ ಉಪಕೇಂದ್ರಕ್ಕೆ ಐವತ್ತು ಅಡಿ ದೂರವಿದ್ದರೂ ಕೂಡ ಆ ದೂರವನ್ನು ಕ್ರಮಿಸಲು ಹರಸಾಹಸಪಡಬೇಕಾಗಿದೆ. ಒಬ್ಬಳೇ ನಡೆಯಲು ಅಸಾಧ್ಯವಾಗಿರುವ ದಾರಿಯಾಗಿದ್ದು ಮಗುವಿನೊಂದಿಗೆ ತೆರಳುವ ಸಂದÀರ್ಭದಲ್ಲಿ ಪಾಚಿಕಟ್ಟಿದ ನೆಲದಲ್ಲಿ ಕಾಲು ಜಾರಿ ಮಗುವಿನೊಂದಿಗೆ ಕೆಳಗೆ ಬಿದ್ದ ಪರಿಣಾಮ ಸೊಂಟಕ್ಕೆ ನೋವಾಗಿದೆ. ಈಗಲೂ ಸೊಂಟ ನೋವಿದ್ದು ಸುಧಾರಿಸು ಕೊಳ್ಳುತ್ತಿದ್ದೇನೆ. ಗ್ರಾ.ಪಂ. ಎದುರೇ ಈ ರೀತಿ ಇದ್ದು ಗ್ರಾ.ಪಂ. ಕಣ್ಣಿದ್ದೂ ಕುರುಡರಂತೆ ವರ್ತಿಸುತ್ತಿದೆ ಎಂದು ಆಸ್ಪತ್ರೆಗೆ ಬಂದ ಮಹಿಳೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.