ಐಗೂರು, ಜು. ೧೭: ಕಿರಗಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ದುರ್ಗಾ ನಗರದ ನಿವಾಸಿಗಳಿಗೆ ಕಳೆದ ಬೇಸಿಗೆ ಸಮಯದಲ್ಲಿ ಕುಡಿಯುವ ನೀರಿಗೆ ಆಗಾಗ ತೊಂದರೆಗಳು ಉಂಟಾಗುತ್ತಿತ್ತು. ಈ ವ್ಯಾಪ್ತಿಯಲ್ಲಿ ಎರಡು ಕೊಳವೆ ಬಾವಿಗಳಿದ್ದು, ಒಂದು ಕೊಳವೆ ಬಾವಿ ಕಾರ್ಯಾಚರಣೆಗೊಳ್ಳದೆ ಸಂಪೂರ್ಣ ನಶಿಸಿ ಹೋಗಿದೆ.

ಆದ್ದರಿಂದ ಇನ್ನೊಂದು ಕೊಳವೆ ಬಾವಿಯ ಕುಡಿಯುವ ನೀರಿನ ಮಾದರಿಯನ್ನು ಸ್ಥಳೀಯ ಕಿರುಗಂದೂರು ಗ್ರಾಮ ಪಂಚಾಯಿತಿ ಮತ್ತು ದುರ್ಗಾ ನಗರದ ನಿವಾಸಿಗಳು ಪ್ರತ್ಯೇಕವಾಗಿ ಜಿಲ್ಲಾಮಟ್ಟದ ನೀರಿನ ಪರೀಕ್ಷಾ ಘಟಕಕ್ಕೆ ಪರೀಕ್ಷೆಗಾಗಿ ಕಳುಹಿಸಿದ್ದರು. ಪರೀಕ್ಷಾ ಪ್ರಯೋಗಾಲಯದಲ್ಲಿ ಎರಡು ಮಾದರಿಯ ವರದಿಗಳಲ್ಲಿ ಈ ನೀರು ನಿಗದಿಪಡಿಸಿದ್ದಕ್ಕಿಂತ ಹೆಚ್ಚು ರಾಸಾಯನಿಕ ಅಂಶವನ್ನು ಒಳಗೊಂಡಿದ್ದು, ಈ ಕೊಳವೆ ಬಾವಿಯ ನೀರು ಕುಡಿಯಲು ಯೋಗ್ಯವಲ್ಲ ಎಂಬ ಫಲಿತಾಂಶ ಬಂದಿದ್ದು, ಈ ಭಾಗದ ನಿವಾಸಿಗಳು ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಯಿತು. ನಂತರ ಇತ್ತೀಚೆಗೆ ಈ ಭಾಗದ ನಿವಾಸಿಗಳಾದ ದಿನೇಶ್ ಶೆಟ್ಟಿ, ಕಿರಗಂದೂರು ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಗಣೇಶ್ ಮತ್ತು ನಾಗಭೂಷಣ್ ಸೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಅವರಲ್ಲಿ ಕುಡಿಯುವ ನೀರಿನ ಸಮಸ್ಯೆಯ ಬಗ್ಗೆ ವಿವರಿಸಿದ್ದರು.

ಮನವಿಯನ್ನು ಪರಿಶೀಲಿಸಿ ಆದಷ್ಟು ಬೇಗ ದುರ್ಗಾ ನಗರದ ನಿವಾಸಿಗಳಿಗೆ ಕುಡಿಯುವ ನೀರಿಗಾಗಿ ಕೊಳವೆ ಬಾವಿಯನ್ನು ನಿರ್ಮಿಸಿ ಕೊಡುವುದಾಗಿ ಶಾಸಕರು ಭರವಸೆ ಇತ್ತಿದ್ದಾರೆ.