ಪೊನ್ನಂಪೇಟೆ, ಜು. ೧೭: ದಕ್ಷಿಣ ಕೊಡಗಿನಲ್ಲಿ ಧಾರಕಾರ ಮಳೆ ಮುಂದುವರೆದಿರುವ ಕಾರಣ ಲಕ್ಷö್ಮಣತೀರ್ಥ ನದಿಯ ಹರಿವಿನ ಪ್ರಮಾಣ ತೀವ್ರ ಹೆಚ್ಚಳವಾಗಿದ್ದು, ಪೊನ್ನಂಪೇಟೆ ತಾಲೂಕಿನ ಹಲವು ಗ್ರಾಮಗಳಲ್ಲಿ ನದಿ, ತೊರೆ, ಗದ್ದೆ, ಕಾಫಿ, ಅಡಿಕೆ ತೋಟಗಳು ಜಲಾವೃತಗೊಂಡಿವೆ. ಕೆಲವು ಕಡೆ ರಸ್ತೆ ಮೇಲೆ ಮಳೆ ನೀರು ರಭಸವಾಗಿ ಹರಿಯುತ್ತಿದ್ದು, ರಸ್ತೆ ಸಂಪರ್ಕ ಕಡಿತಗೊಂಡಿದೆ.
ಹರಿಹರ-ಕಾನೂರು ಸಂಪರ್ಕ ಕಡಿತ
ಲಕ್ಷö್ಮಣತೀರ್ಥ ನದಿಯ ನೀರಿನ ಹರಿವಿನ ಪ್ರಮಾಣ ಹೆಚ್ಚಳವಾಗಿರುವ ಕಾರಣ ಹರಿಹರ ಗ್ರಾಮದಿಂದ ಕೋತೂರು ಸುಮಾರು ೨೦೦ ಮೀಟರ್ ವರೆಗೆ ನೀರು ಹರಿಯುತ್ತಿದ್ದು, ರಸ್ತೆ ಸಂಪರ್ಕ ಕಡಿತಗೊಂಡು ವಾಹನ ಸಂಚಾರ ಹಾಗೂ ಸಾರ್ವಜನಿಕರ ಓಡಾಟಕ್ಕೆ ತೊಂದರೆ ಆಗಿದೆ. ಗದ್ದೆ, ತೋಟಗಳು ಜಲಾವೃತ್ತವಾಗಿವೆ.
ಕಾನೂರು ಸೇತುವೆಯ ಬಳಿಯೂ ನೀರಿನ ಪ್ರಮಾಣ ಹೆಚ್ಚಳವಾಗಿದ್ದು, ಹೊಳೆಯ ಸುತ್ತಮುತ್ತಲಿನ ಗದ್ದೆಗಳು ಜಲಾವೃತಗೊಂಡಿವೆ.
ಅಲ್ಲಲ್ಲಿ ವಿದ್ಯುತ್ ತಂತಿಗಳ ಮೇಲೆ ಮರ ಬಿದ್ದಿರುವ ಕಾರಣ ಬಿರುನಾಣಿ, ತೆರಾಲು, ನಲ್ಲೂರು ಸೇರಿದಂತೆ ಬಹುತೇಕ ಗ್ರಾಮಗಳಲ್ಲಿ ಕಳೆದ ಮೂರು ನಾಲ್ಕು ದಿನಗಳಿಂದ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.
ಕೀರೆಹೊಳೆಯಲ್ಲಿ ನೀರಿನ ಹರಿವು ಹೆಚ್ಚಾಗಿರುವ ಕಾರಣ ಬೆಸಗೂರು, ಬೆಕ್ಕೆಸೊಡ್ಲೂರು ಗ್ರಾಮಗಳ ಗದ್ದೆಗಳು ನೀರಿನಿಂದ ತುಂಬಿ ತುಳುಕುತ್ತಿವೆ.
ನಿಟ್ಟೂರು ಕಾರ್ಮಾಡು, ಕೊಟ್ಟಗೇರಿ ಭಾಗದಲ್ಲಿ ಲಕ್ಷö್ಮಣತೀರ್ಥ ನದಿ ತುಂಬಿ ಹರಿಯುತ್ತಿದ್ದು, ನದಿ ಪಾತ್ರದ ಗದ್ದೆಗಳು ನೀರಿನಲ್ಲಿ ಮುಳುಗಿವೆ.
ಕಳೆದ ೨೪ ಗಂಟೆ ಅವಧಿಯಲ್ಲಿ ಬಿರುನಾಣಿಯಲ್ಲಿ ೬.೭೦ ಇಂಚು, ಬಿ.ಶೆಟ್ಟಿಗೇರಿಯಲ್ಲಿ ೫.೫೦ ಇಂಚು ಮಳೆಯಾಗಿರುವ ಬಗ್ಗೆ ವರದಿಯಾಗಿದೆ.
- ಚನ್ನನಾಯಕ