ಮಡಿಕೇರಿ, ಜು. ೧೭: ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ನೂತನ ಅಧ್ಯಕ್ಷರಾಗಿ ನಿಯೋಜನೆ ಗೊಂಡ ರಾಜೇಶ್ ಯಲ್ಲಪ್ಪ, ಸದಸ್ಯರುಗಳಾಗಿ ನೇಮಕಗೊಂಡ ಮಿನಾಜ್ ಪ್ರವೀಣ್, ಕಾನೆಹಿತ್ಲು ಮೊಣ್ಣಪ್ಪ, ಮುಂಡAಡ ಸುದಯ್ ನಾಣಯ್ಯ, ಆರ್.ಪಿ. ಚಂದ್ರಶೇಖರ್ ಅವರುಗಳ ಪದಗ್ರಹಣ ಕಾರ್ಯಕ್ರಮ ನಗರದ ಮುಡಾ ಕಚೇರಿ ಆವರಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಮಡಿಕೇರಿ ಶಾಸಕ ಡಾ. ಮಂತರ್ ಗೌಡ, ಅಧಿಕಾರ ಹೋದ ನಂತರ ಕೆಲಸ ಮಾಡದ ಪಶ್ಚಾತಾಪ ಅನುಭವಿಸಬಾರದು. ದೊರೆತ ಅವಧಿಯಲ್ಲಿ ಮಾಡಿದ ಕೆಲಸ ಶಾಶ್ವತವಾಗಿ ಉಳಿದಿರುತ್ತದೆ. ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ಜನಹಿತ ಕಾಪಾಡ ಬೇಕೆಂದು ಕರೆ ನೀಡಿದರು. ಪ್ರಾಧಿಕಾರದ ವ್ಯಾಪ್ತಿಯಲ್ಲಿ ಅದ್ಭುತವಾದ ಜಾಗವಿದೆ. ಅದನ್ನು ಉಳಿಸಿಕೊಳ್ಳುವ ಕೆಲಸ ವಾಗಬೇಕು. ನಿಯಂತ್ರಣವಿಲ್ಲದೆ ಆಗುತ್ತಿರುವ ಭೂ ಕಬಳಿಕೆಗೆ ಲಗಾಮು ಹಾಕಬೇಕು. ಈ ಹಿನ್ನೆಲೆ ಪರಿಸರ ನಾಶವಾಗದೆ ಸುಸ್ಥಿರ ಅಭಿವೃದ್ಧಿಯತ್ತ ಚಿಂತನೆ ಹರಿಸಬೇಕಾಗಿದೆ. ಕಾನೂನು ಬದ್ಧವಾಗಿ ಕಾರ್ಯನಿರ್ವಹಿಸುವುದ ರೊಂದಿಗೆ ಮಡಿಕೇರಿಯ ಕೆರೆ, ಪಾರ್ಕ್ ಅಭಿವೃದ್ಧಿಗೆ ಅನುದಾನ ಮೀಸಲಿಡಬೇಕು. ನಗರದಲ್ಲಿ ಸಣ್ಣಪುಟ್ಟ ಪಾರ್ಕ್ಗಳಿದ್ದು, ರೋಶನಾರ ಕೆರೆಯನ್ನು ವಿಶಾಲವಾಗಿ ಅಭಿವೃದ್ಧಿಗೊಳಿಸಿ ಉದ್ಯಾನವನ ನಿರ್ಮಿಸಿ ವಾಯು ವಿಹಾರಕ್ಕೆ ಪೂರಕ ವಾತಾವರಣ ಸೃಷ್ಟಿಸಬೇಕು. ಸ್ಥಳೀಯರ ಬೇಕು-ಬೇಡಿಕೆಗಳಿಗೆ ತ್ವರಿತವಾಗಿ ಸ್ಪಂದಿಸಬೇಕು ಎಂದರು. ಅಭಿವೃದ್ಧಿಯಲ್ಲಿ ಎಂದಿಗೂ ರಾಜಕಾರಣ ಮಾಡಬಾರದು. ಜನರ ಸಲಹೆಯನ್ನು ಸ್ವೀಕರಿಸಿ ಕಾನೂನು ಚೌಕಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು. ಸರಕಾರದ ಸ್ಥಾನಮಾನದ ಆಕಾಂಕ್ಷಿಗಳಿಗೆ ಮುಂದಿನ ದಿನಗಳಲ್ಲಿ ಒಳ್ಳೆಯ ಅವಕಾಶ ಸಿಗಲಿದೆ ಎಂದರು.
ವಿಧಾನ ಪರಿಷತ್ ಮಾಜಿ ಸದಸ್ಯೆ ಶಾಂತೆಯAಡ ವೀಣಾ ಅಚ್ಚಯ್ಯ ಮಾತನಾಡಿ, ಹಲವು ವರ್ಷಗಳಿಂದ ಪದಾಧಿಕಾರಿಗಳ ನೇಮಕವಾಗದೆ ಮುಡಾದ ಕಾರ್ಯಕ್ಷಮತೆ ಕಡಿಮೆಯಾಗಿತ್ತು. ಕೊಡಗು ಜಿಲ್ಲೆಯ ಮುಕುಟಮಣಿಯಾಗಿರುವ ಮಡಿಕೇರಿ ಮಹತ್ತರ ಬದಲಾವಣೆ ಕಾಣುತ್ತಿದೆ. ಈ ಹಿನ್ನೆಲೆ ಪದಾಧಿಕಾರಿಗಳಿಗೆ ಅತ್ಯುನ್ನತ ಜವಾಬ್ದಾರಿ ಇದೆ. ಮಡಿಕೇರಿ ಉಳಿಯಬೇಕಾದರೆ ಪರಿಸರ ಉಳಿಯಬೇಕು. ಪ್ರವಾಸಿಗರ ನೆಚ್ಚಿನ ತಾಣವಾಗಿರುವ ಮಡಿಕೇರಿಯ ಶುದ್ಧ ಗಾಳಿ, ವಾತಾವರಣವನ್ನು ಉಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದ್ದು, ಪ್ರವಾಸೋದ್ಯಮದೊಂದಿಗೆ ಮಡಿಕೇರಿ ನೈಜತೆ ಉಳಿಸಿಕೊಳ್ಳುವ ಕೆಲಸ ವಾಗಬೇಕು. ಸಾರ್ವಜನಿಕರಿಗೆ ಉತ್ತಮ ಸೇವೆ ನೀಡಿ ಎಂದು ಕಿವಿ ಮಾತನಾಡಿದರು.
ಕಾಂಗ್ರೆಸ್ ಮುಖಂಡ ಟಿ.ಪಿ. ರಮೇಶ್ ಮಾತನಾಡಿ, ೧೯೮೫ರಲ್ಲಿ ತಾನು ಅಧ್ಯಕ್ಷನಾಗಿದ್ದ ಸಂದರ್ಭ ಮುಡಾದಲ್ಲಿ ಸೂಕ್ತ ವ್ಯವಸ್ಥೆಗಳಿರಲಿಲ್ಲ. ಇಂದಿಗೂ ನಿರೀಕ್ಷಿತ ಅಭಿವೃದ್ಧಿ ಸಾಧಿಸುವಲ್ಲಿ ವಿಫಲವಾಗಿದ್ದೇವೆ. ಮುಡಾ ಬೇಕ-ಬೇಡವೋ ಎಂಬ ತರ್ಕವೂ ಇತ್ತು. ಗಾಳಿಬೀಡು ಗ್ರಾಮವನ್ನು ಎರಡನೇ ಮಡಿಕೇರಿ ಮಾಡಬೇಕೆಂಬ ಪ್ರಸ್ತಾಪವು ಮೊದಲಿನಿಂದಲಿದೆ. ಭೂಪರಿವರ್ತನೆಗೆ ಹೆಚ್ಚಿನ ಬೇಡಿಕೆ ಇದ್ದು, ಪರಿಸರ, ಪ್ರವಾಸೋದ್ಯಮಕ್ಕೆ ಪೂರಕ ಬೆಳವಣಿಗೆ ಸಾಧಿಸಲು ಯೋಜನಬದ್ಧವಾಗಿ ಕೆಲಸ ಮಾಡುವಂತೆ ಸಲಹೆ ನೀಡಿದರು.
ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ, ಮುಡಾ ಮಾಜಿ ಅಧ್ಯಕ್ಷೆ ಸುರಯ್ಯ ಅಬ್ರಾರ್ ಮಾತನಾಡಿ, ರಾಜೇಶ್ ಯಲ್ಲಪ್ಪ ನೇತೃತ್ವದ ತಂಡ ಜನಸ್ಪಂದನ ನೀಡುವ ವಿಶ್ವಾಸವಿದೆ. ಮುಡಾಕ್ಕೆ ಉತ್ತಮ ಕಚೇರಿಯ ಅವಶ್ಯಕತೆಯಿದೆ. ಈ ಬಗ್ಗೆ ಕಾರ್ಯೋನ್ಮುಖಗೊಳ್ಳಬೇಕು. ಬಡಾವಣೆ ನಿರ್ಮಾಣದ ಬಗ್ಗೆಯೂ ಪ್ರಸ್ತಾಪವಿದ್ದು, ಕಡತಗಳು ರಾಜ್ಯ ಮಟ್ಟದಲ್ಲಿದೆ. ಈ ಬಗ್ಗೆ ಕಾರ್ಯ ಚಟುವಟಿಕೆ ಕೈಗೊಳ್ಳುವಂತೆ ಹೇಳಿದರು.
ತಾಂತ್ರಿಕ ಸಮಸ್ಯೆ - ಅವೈಜ್ಞಾನಿಕ ನೀತಿಗಳಿಗೆ ಪರಿಹಾರ
ಬಿ.ವೈ. ರಾಜೇಶ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿ, ಮಡಿಕೇರಿಯಲ್ಲಿ ಬಹಳಷ್ಟು ಸಮಸ್ಯೆಗಳಿವೆ. ಮುಡಾಕ್ಕೆ ಸ್ವಂತ ಕಚೇರಿ ಸಂಬAಧ ಕೆಲಸ ಮಾಡಲಾಗುವುದು. ನಗರಸಭೆಯಲ್ಲಿ ನಮೂನೆ ೩ ಪಡೆಯಲು ಮೂಡಾದಿಂದ ದಾಖಲೆಗಳನ್ನು ಪಡೆಯಬೇಕಾಗಿದ್ದು, ಈ ಸಮಸ್ಯೆ ನಿವಾರಿಸಲು ಪ್ರಯತ್ನ ನಡೆಸಲಾಗುವುದು. ಹಲವು ವರ್ಷಗಳ ಹಿಂದೆ ನಿರ್ಮಿಸಿದ ಬಡಾವಣೆಗಳು, ಮನೆಗಳು ಏಕನಿವೇಶನ ಮಾಡಿಸದ ಹಿನ್ನೆಲೆ ಕೆಲವೊಂದು ತಾಂತ್ರಿಕ ಸಮಸ್ಯೆಗಳು ಉಂಟಾಗಿವೆ. ಈ ಬಗ್ಗೆ ಸರಕಾರದ ಗಮನ ಸೆಳೆದು ಪರಿಹಾರದ ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು. ಮಡಿಕೇರಿಯಲ್ಲಿ ಪ್ರವಾಸೋದ್ಯಮ ದೊಡ್ಡ ಮಟ್ಟದಲ್ಲಿ ಬೆಳೆಯುತ್ತಿದ್ದು, ಆರ್ಥಿಕವಾಗಿಯೂ ಇದು ಸಹಕಾರಿಯಾಗಿದೆ. ಪರಿಸರಕ್ಕೆ ಹಾನಿಯಾಗದಂತೆ ಭೂಪರಿವರ್ತನೆಗೆ ಗಮನ ಹರಿಸಲಾಗುವುದು. ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಮಡಿಕೇರಿ ನಗರ ಸೇರಿದಂತೆ ೫ ಪಂಚಾಯಿತಿ, ೮ ಗ್ರಾಮಗಳು ಸೇರುತ್ತವೆ. ತೋಟ ಜಾಗ ಖರೀದಿಸಿ ಅಲ್ಲಿ ಮನೆ ನಿರ್ಮಿಸುವುದು ಕಷ್ಟದಾಯಕವಾಗಿದೆ. ಇದಕ್ಕೆ ಅವೈಜ್ಞಾನಿಕ ನೀತಿಗಳು ಕಾರಣ ವಾಗಿದ್ದು, ಮುಡಾದ ‘ಮಾಸ್ಟರ್ ಪ್ಲಾನ್’ ಪರಿಷ್ಕರಿಸಿ ಕಾನೂನಿನ ತೊಡಕು ನಿವಾರಣೆ ಮಾಡಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭ ನಂಜನಗೂಡು ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಮಡಿಕೇರಿ ತಾಲೂಕು ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ನೆರವಂಡ ಉಮೇಶ್, ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಂಸ ಕೊಟ್ಟಮುಡಿ, ಸೋಮವಾರಪೇಟೆ ಬ್ಲಾಕ್ ಅಧ್ಯಕ್ಷ ಸತೀಶ್ ಕುಮಾರ್, ಕೆಪಿಸಿಸಿ ಕಾರ್ಯದರ್ಶಿಗಳಾದ ಜಿ.ಜಿ. ಕಾವೇರಪ್ಪ, ಬಸವರಾಜು, ಗ್ಯಾರಂಟಿ ಅನುಷ್ಠಾನ ಸಮಿತಿ ಮಡಿಕೇರಿ ತಾಲೂಕು ಅಧ್ಯಕ್ಷ ಮಂದ್ರೀರ ಮೋಹನ್ ದಾಸ್, ಕುಶಾಲನಗರ ತಾಲೂಕು ಅಧ್ಯಕ್ಷ ವಿ.ಪಿ. ಶಶಿಧರ್, ನಗರಾಭಿವೃದ್ಧಿ ಮಾಜಿ ಅಧ್ಯಕ್ಷ ಅಪ್ಪನೆರವಂಡ ಚುಮ್ಮಿ ದೇವಯ್ಯ, ಸೋಮವಾರಪೇಟೆ ಪಟ್ಟಣ ಅಭಿವೃದ್ಧಿ ಯೋಜನೆ ಅಧ್ಯಕ್ಷ ಆದಂ, ಕುಶಾಲನಗರ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಪ್ರಮೋದ್, ಗೌಡ ವಿದ್ಯಾಸಂಘ ಅಧ್ಯಕ್ಷ ಅಂಬೇಕಲ್ ನವೀನ್ ಕುಶಾಲಪ್ಪ, ಕೆಡಿಪಿ ಸದಸ್ಯ ಸತೀಶ್, ಎಸ್.ಸಿ. ಘಟಕದ ಅಧ್ಯಕ್ಷ ಜಯೇಂದ್ರ, ಮಡಿಕೇರಿ ಪಟ್ಟಣ ಸಹಕಾರ ಬ್ಯಾಂಕ್ ಅಧ್ಯಕ್ಷ ಸತೀಶ್ ಪೈ, ನಗರಸಭಾ ಮಾಜಿ ಅಧ್ಯಕ್ಷ ಯಲ್ಲಪ್ಪ, ಮಾಜಿ ಸದಸ್ಯ ಅಬ್ದುಲ್ ರಜಾಕ್ ಸೇರಿದಂತೆ ಇನ್ನಿತರರು ಹಾಜರಿದ್ದರು.
ವೇಣು ಕಿಶೋರ್ ಪ್ರಾರ್ಥಿಸಿ, ತೆನ್ನೀರ ಮೈನಾ ಸ್ವಾಗತಿಸಿ, ಮಂಜುಳಾ ರಾಮಕೃಷ್ಣ ನಿರೂಪಿಸಿ, ಪ್ರಕಾಶ್ ಆಚಾರ್ಯ ವಂದಿಸಿದರು.