ವೀರಾಜಪೇಟೆ, ಜು. ೧೮: ಯುವಕನೋರ್ವ ೧೧ ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡಿ ಇದೀಗ ಜೈಲು ಪಾಲಾಗಿರುವ ಘಟನೆ ನಡೆದಿದೆ.
ಆರ್ಜಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಒಂದನೇ ಪೆರುಂಬಾಡಿ ಗ್ರಾಮದ ನಿವಾಸಿ ಕೂಲಿ ಕಾರ್ಮಿಕ ಎನ್. ದರ್ಶನ್ ನಾಯಕ್ (೨೮) ಬಂಧಿತ ಯುವಕ.
ದಿನಾಂಕ ೦೭-೦೭-೨೦೨೪ ರಂದು ಪೆರುಂಬಾಡಿಯ ಬಸ್ ತಂಗುದಾಣದ ಬಳಿ ಕೆಲ ಯುವಕರು ವಾಹನಗಳನ್ನು ನಿಲುಗಡೆಗೊಳಿಸಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದಾಗ ಪೊಲೀಸರು ದಾಳಿ ನಡೆಸಿ ಯುವಕರನ್ನು ಬಂಧಿಸಿ ನಾಲ್ಕು ದ್ವಿಚಕ್ರ ವಾಹನ ಸೇರಿದಂತೆ ಒಂದು ಮಾರುತಿ ಓಮ್ನಿ ಕಾರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದರು. ಆದರೆ ವಶಕ್ಕೆ ಪಡೆದಿದ್ದ ನಾಲ್ಕು ದ್ವಿಚಕ್ರ ವಾಹನಗಳ ದಾಖಲೆಗಳು ಸಮರ್ಪಕವಾಗಿಲ್ಲ ದಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಈ ಗಾಂಜಾ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ದರ್ಶನ್ ಮತ್ತು ಸಾಧಿಕ್ ಎಂಬವರುಗಳಿಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರೆಸಿ ದರ್ಶನ್‌ನನ್ನು ಪೆರುಂಬಾಡಿಯಲ್ಲಿ ಬಂಧಿಸುತ್ತಾರೆ. ಬಳಿಕ ಆತನನ್ನು ವಿಚಾರಣೆಗೆ ಒಳಪಡಿಸಿದಾಗ ಮಾರುತಿ ಓಮ್ನಿಯನ್ನು ತಾನು ಮತ್ತು ತನ್ನ ಸ್ನೇಹಿತರಾದ ಪೆರುಂಬಾಡಿ ಶಮೀರ್, ಶಫೀಕ್, ಅಲಿಯಾಸ್ ಎಪು, ಮುನೀರ್ ಸಾಧಿಕ್ ಮತ್ತು ಆಶೀಂ ಸೇರಿ ಹುಣಸೂರು ಬಿಳಿಕೆರೆಯಿಂದ ಕಳವು ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ. ಮುಂದುವರೆದ ಪೊಲೀಸರು ದರ್ಶನ್‌ನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಹುಣಸೂರು, ಬಿಳಿಕೆರೆ, ಪಿರಿಯಾಪಟ್ಟಣ, ಹನಗೋಡು, ರಾಮನಾಥಪುರ, ಬೆಟ್ಟದಪುರ ಮತ್ತು ಇತರ ಭಾಗಗಳಿಂದ ಬರೋಬ್ಬರಿ ೧೧ ದ್ವಿಚಕ್ರ ವಾಹನಗಳನ್ನು ತಾನೇ ಕಳವು ಮಾಡಿರುವುದಾಗಿ ಬಾಯಿ ಬಿಟ್ಟಿದ್ದಾನೆ.
ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಮತ್ತು ವೀರಾಜಪೇಟೆ ಉಪ ಅಧೀಕ್ಷಕ ಮೋಹನ್ ಕುಮಾರ್ ಮಾರ್ಗದರ್ಶನದಲ್ಲಿ ವೀರಾಜಪೇಟೆ ವೃತ್ತ ನಿರೀಕ್ಷಕ ಬಿ.ಎಸ್. ಶಿವರುದ್ರ ನೇತೃತ್ವದಲ್ಲಿ ವೀರಾಜಪೇಟೆ ನಗರ ಠಾಣೆಯ ಪ್ರಬಾರ ಠಾಣಾಧಿಕಾರಿ ವಾಣಿಶ್ರೀ, ಎ.ಎಸ್.ಐ. ಮಂಜು, ಗ್ರಾಮಾಂತರ ಠಾಣೆಯ ಜೋಸ್ ನಿಶಾನ್, ನಗರ ಠಾಣೆಯ ಸಿಬ್ಬಂದಿಗಳಾದ ಟಿ.ಎಸ್. ಗಿರೀಶ್, ಧರ್ಮ ಕೆ.ಎಂ, ಸುರೇಶ್, ವಸಂತ, ಸತೀಶ್, ಮೋಹನ್ ಮುಂತಾದವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಈ ಪ್ರಕರಣದ ಮತ್ತೋರ್ವ ಆರೋಪಿ ಸಾಧಿಕ್ ತಲೆಮರೆಸಿಕೊಂಡಿದ್ದಾನೆ.
-ಕಿಶೋರ್‌ಕುಮಾರ್ ಶೆಟ್ಟಿ