ಭಾಗಮಂಡಲ, ಜು. ೧೮: ಭಾಗಮಂಡಲ ಇಲ್ಲಿನ ಗ್ರಾಮ ಪಂಚಾಯಿತಿಯಲ್ಲಿ ಎರಡನೇ ಬಾರಿಗೆ ಅಧಿಕಾರಿಗಳ ಟಾಸ್ಕ್ ಫೋರ್ಸ್ ಸಭೆ ನಡೆಯಿತು. ಭಾಗಮಂಡಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಕಾಳನ ರವಿ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆ ಸರ್ವೆ ಅಧಿಕಾರಿ ಅರುಣ್ ಕುಮಾರ್ ಆಗಮಿಸಿದ್ದರು. ಸಭೆಯಲ್ಲಿ ಪ್ರವಾಹ ದೊಡ್ಡ ಮಟ್ಟದಲ್ಲಿ ಉಂಟಾದರೆ ಕಾಳಜಿ ಕೇಂದ್ರಗಳ ವ್ಯವಸ್ಥೆ ಮಾಡಲಾಗಿದೆ ಎಂದು ಭಾಗಮಂಡಲ ಕಂದಾಯ ಇಲಾಖೆಯವರು ಮಾಹಿತಿ ನೀಡಿದರು. ಗ್ರಾಮ ಪಂಚಾಯಿತಿ ವತಿಯಿಂದ ಈಜುಗಾರರ ತಂಡ ಮತ್ತು ಸ್ವಯಂ ಸೇವಕರನ್ನು ನೇಮಿಸಲಾಗಿದೆ. ಭಾಗಮಂಡಲ ಆಸ್ಪತ್ರೆಯಲ್ಲಿ ವೈದ್ಯರು ಪ್ರತಿನಿತ್ಯ ಇರುವುದಿಲ್ಲ ಎಂದು ಗ್ರಾಮ ಪಂಚಾಯಿತಿ ಸದಸ್ಯರು ಆರೋಗ್ಯ ನಿರೀಕ್ಷಕರೊಂದಿಗೆ ಅಳಲು ತೋಡಿಕೊಂಡರು. ಆರೋಗ್ಯ ಅಧಿಕಾರಿಯೊಂದಿಗೆ ಈ ಬಗ್ಗೆ ಮಾತನಾಡಿ ವ್ಯವಸ್ಥೆ ಮಾಡಲಾಗುವುದು ಎಂದರು ಆರೋಗ್ಯ ನಿರೀಕ್ಷಕರು ತಿಳಿಸಿದರು. ಒಂದು ಆ್ಯಂಬ್ಯುಲೆನ್ಸ್ ಇದ್ದು ಅದಕ್ಕೆ ಚಾಲಕರಿಲ್ಲ ಎಂಬ ಬಗ್ಗೆ ಗಮನ ಸೆಳೆದಾಗ ಅದಕ್ಕೂ ವ್ಯವಸ್ಥೆ ಮಾಡಲಾಗುವುದು ಎಂದರು. ಸಭೆಯಲ್ಲಿ ಗ್ರಾಮ ಪಂಚಾಯಿತಿಯ ಸರ್ವ ಸದಸ್ಯರು, ಆರೋಗ್ಯ ಇಲಾಖೆ, ಕಂದಾಯ ಇಲಾಖೆ, ಅಂಗನವಾಡಿ ಕಾರ್ಯಕರ್ತೆಯರು, ಅಧಿಕಾರಿಗಳು ಹಾಜರಿದ್ದರು.