ಸೋಮವಾರಪೇಟೆ, ಜು. ೧೮: ತಾಲೂಕಿನಾದ್ಯಂತ ಮಳೆ ರಭಸವಾಗಿದೆ. ಗಾಳಿಯ ಆರ್ಭಟಕ್ಕೆ ಅಲ್ಲಲ್ಲಿ ಮರಗಳು ನೆಲಕ್ಕುರುಳುತ್ತಿವೆ. ಸೋಮವಾರಪೇಟೆ-ಶನಿವಾರಸಂತೆ ರಾಜ್ಯ ಹೆದ್ದಾರಿಯ ಹೆಗ್ಗುಳ ಗ್ರಾಮದಲ್ಲಿ ಭಾರೀ ಗಾತ್ರದ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದ ಹಿನ್ನೆಲೆ ಕೆಲಕಾಲ ವಾಹನ ಸಂಚಾರ ಸ್ಥಗಿತಗೊಂಡಿತ್ತು.
ರಾಜ್ಯ ಹೆದ್ದಾರಿಯ ಬದಿಯಲ್ಲಿದ್ದ ಮರವೊಂದು ಭಾರೀ ಗಾಳಿ-ಮಳೆಗೆ ರಸ್ತೆಗೆ ಮಗುಚಿಕೊಂಡಿದೆ. ಅದೃಷ್ಟವಶಾತ್ ಈ ಸಮಯದಲ್ಲಿ ಯಾವುದೇ ವಾಹನಗಳು ಸಂಚರಿಸದ ಹಿನ್ನೆಲೆ ಭಾರೀ ಅನಾಹುತ ತಪ್ಪಿದಂತಾಗಿದೆ. ರಸ್ತೆ ಮೇಲೆ ಮರ ಬಿದ್ದಿದ್ದರಿಂದ ಕೆಲಕಾಲ ರಾಜ್ಯ ಹೆದ್ದಾರಿಯಲ್ಲಿ ವಾಹನಗಳ ಸಂಚಾರ ಬಂದ್ ಆಗಿತ್ತು.
ರಸ್ತೆ ಬಂದ್ ಆದ್ದರಿಂದ ಕೆಲವೊಂದು ವಾಹನಗಳು ಬೀಟಿಕಟ್ಟೆ, ಹನಸೆ ಮಾರ್ಗವಾಗಿ ಸಂಚರಿಸಿದವು. ಸ್ಥಳೀಯರು ಮರವನ್ನು ತೆರವುಗೊಳಿಸಿದ ನಂತರ ಈ ಮಾರ್ಗದಲ್ಲಿ ವಾಹನಗಳು ತೆರಳಿದವು. ಇನ್ನು ತಾಲೂಕಿನಾದ್ಯಂತ ಮಳೆಯ ಆರ್ಭಟ ಜೋರಾಗಿದ್ದು, ಜನಜೀವನ ಅಸ್ತವ್ಯಸ್ಥಗೊಂಡಿದೆ. ಪಟ್ಟಣದಲ್ಲಿ ಜನರ ಓಡಾಟವೂ ಕಡಿಮೆಯಾಗಿದೆ.
ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ತಂತಿಗಳ ಮೇಲೆ ಮರಗಳು ಬೀಳುತ್ತಿದ್ದು, ಆಗಾಗ್ಗೆ ವಿದ್ಯುತ್ ಸ್ಥಗಿತಗೊಳ್ಳುತ್ತಿದೆ. ರಸ್ತೆಗಳೂ ಗುಂಡಿ ಬೀಳುತ್ತಿದ್ದು, ವಾಹನ ಚಾಲನೆ ದುಸ್ತರವಾಗುತ್ತಿದೆ.