ಮಡಿಕೇರಿ, ಜು. ೧೮: ಅಗ್ನಿಪಥ ಯೋಜನೆ ಮೂಲಕ ಸೇನಾ ಬಲ ಹೆಚ್ಚಾಗಿ ರಕ್ಷಣಾ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆ ನಿರೀಕ್ಷಿಸಬಹುದಾಗಿದೆ. ಈ ಯೋಜನೆ ದೇಶಕ್ಕೆ ಸಹಾಯಕ ಎಂದು ಬಿಜೆಪಿ ಸೈನಿಕ ಪ್ರಕೋಷ್ಠ ಪ್ರತಿಪಾದಿಸಿದೆ.

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಕೋಷ್ಠದ ರಾಜ್ಯ ಸಂಚಾಲಕ ಮೇಜರ್ ಓಡಿಯಂಡ ಎಸ್. ಚಿಂಗಪ್ಪ, ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ‘ಅಗ್ನಿಪಥ ಸೈನಿಕರನ್ನು ಬಳಸಿಕೊಂಡು ಎಸೆಯುವ ಯೋಜನೆ’ ಎಂದು ಟೀಕಿಸಿದ್ದು, ಇದು ಶುದ್ಧ ಸುಳ್ಳು. ದೇಶದಲ್ಲಿ ಮೊದಲು ಯೋಧರ ಕೊರತೆ ಇತ್ತು. ಜೊತೆಗೆ ಶಸ್ತಾçಸ್ತç ಸೇರಿದಂತೆ ಮೂಲಸೌಲಭ್ಯಗಳ ಕೊರತೆ ಕಾಡುತಿತ್ತು. ನರೇಂದ್ರ ಮೋದಿ ಅವರು ಪ್ರಧಾನಿಯಾದ ನಂತರ ರಕ್ಷಣಾ ಕ್ಷೇತ್ರಕ್ಕೆ ಪೂರಕ ಸೌಲಭ್ಯ ಕಲ್ಪಿಸಿ ಬಲಶಾಲಿಯಾಗಿ ಮಾಡಿದ್ದಾರೆ. ಅದರೊಂದಿಗೆ ಅಗ್ನಿಪಥದ ಮೂಲಕ ಅಗ್ನಿವೀರರನ್ನು ನೇಮಿಸಿಕೊಂಡು ಸೇನೆಯನ್ನು ಯುವಶಕ್ತಿಯೊಂದಿಗೆ ಸಾಮರ್ಥ್ಯಭರಿತವಾಗಿ ನಿರ್ಮಿಸುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದು, ಇಂತಹ ಯೋಜನೆ ವಿರುದ್ಧ ಇಲ್ಲಸಲ್ಲದ ವದಂತಿ ಸೃಷ್ಟಿಸಿ ಗೊಂದಲ ನಿರ್ಮಿಸುತ್ತಿರುವುದು ಅಸಮಂಜಸ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅಗ್ನಿವೀರರಿಗೆ ನಾಲ್ಕು ವರ್ಷಗಳ ಉತ್ತಮ ವೇತನ ನೀಡಲಾಗುವುದು. ಕೆಲಸ ಅಂತ್ಯಗೊAಡ ಬಳಿಕ ರೂ. ೧೨ ಲಕ್ಷ ಹಣ ನೀಡುವುದರೊಂದಿಗೆ ರೂ. ೪೮ ಲಕ್ಷ ವಿಮೆ ವ್ಯವಸ್ಥೆಯನ್ನು ಕೇಂದ್ರ ಸರಕಾರ ಮಾಡಿದೆ. ಜೊತೆಗೆ ಹುತಾತ್ಮರಾದ ಕುಟುಂಬಕ್ಕೆ ಪರಿಹಾರ ದೊರೆಯುತ್ತದೆ. ವಿವಿಧ ವಲಯಗಳಲ್ಲಿ ಕೆಲಸಕ್ಕೆ ಸೇರಲು ಶೇ ೧೦ ಮೀಸಲಾತಿ ದೊರೆಯುವದರಿಂದ ಕೆಲಸ ಅಂತ್ಯಗೊಳಿಸಿ ಬಂದ ಬಳಿಕ ಬೇರೆ ಉದ್ಯೋಗದಲ್ಲಿ ತೊಡಗಿಸಿ ಕೊಳ್ಳಬಹುದಾಗಿದೆ. ಇದರಿಂದ ನಿರುದ್ಯೋಗ ಸಮಸ್ಯೆ ದೂರವಾಗುತ್ತದೆ. ಸೇನೆಗೆ ಸೇರುವವರ ಸಂಖ್ಯೆಯೂ ಹೆಚ್ಚಾಗುತ್ತದೆ. ದೇಶ ಸೇವೆ ಮಾಡಿದ ನೆಮ್ಮದಿಯೂ ದೊರೆಯುತ್ತದೆ ಎಂದ ಅವರು, ೧ ವರ್ಷದಲ್ಲಿ ದೇಶದಲ್ಲಿ ೯೦ ಸಾವಿರ ಅಗ್ನಿವೀರರ ನೇಮಕವಾಗಿದ್ದು, ಮುಂದೆ ೧ ಲಕ್ಷ ಯೋಧರ ನೇಮಕಕ್ಕೂ ಕೇಂದ್ರ ಗುರಿ ಇಟ್ಟಿದೆ ಎಂದರು.

ಗೋಷ್ಠಿಯಲ್ಲಿ ಪ್ರಕೋಷ್ಠದ ಜಿಲ್ಲಾ ಸಂಚಾಲಕ ಸುಬೇದಾರ್ ಮೇಜರ್ ಪಟ್ರಪಂಡ ಕರುಂಬಯ್ಯ, ರಾಜ್ಯ ಸದಸ್ಯ ಕುಟ್ಟಂಡ ಎಂ. ಮಾದಪ್ಪ, ಜಿಲ್ಲಾ ಸದಸ್ಯರುಗಳಾದ ಸುಬೇದಾರ್ ಮೇಜರ್ ಅಗ್ರಿಮನೆ ವಾದಪ್ಪ, ಸುಬೇದಾರ್ ಮೇಜರ್ ನಾಟೋಳಂಡ ಸೋಮಯ್ಯ, ಹೆಚ್. ಅಪ್ಪಯ್ಯ ಹಾಜರಿದ್ದರು.