ಗೋಣಿಕೊಪ್ಪಲು, ಜು. ೧೮: ದಕ್ಷಿಣ ಕೊಡಗಿನೆಲ್ಲೆಡೆ ಮಳೆರಾಯನ ಅಬ್ಬರ ನಿಲ್ಲುವ ಸಾಧ್ಯತೆ ಕಂಡು ಬರುತ್ತಿಲ್ಲ. ಗುರುವಾರ ಮುಂಜಾನೆಯಿAದಲೇ ವರುಣ ಬಿಡುವಿಲ್ಲದಂತೆ ಸುರಿಯಲಾರಂಭಿಸಿದ್ದು, ಮಧ್ಯಾಹ್ನದ ವೇಳೆ ಮೋಡ ಕವಿದ ವಾತಾವರಣ ಕಂಡು ಬಂದಿದ್ದು ಕತ್ತಲೆಯ ವಾತಾವರಣ ಸೃಷ್ಟಿಯಾಗಿತ್ತು.

ಮಳೆ ಹಾಗೂ ಗಾಳಿಯ ರಭಸಕ್ಕೆ ಪೊನ್ನಂಪೇಟೆ ತಾಲೂಕಿನ ಹುದಿಕೇರಿ, ಬಾಳೆಲೆ, ಶ್ರೀಮಂಗಲ ಹೋಬಳಿಯ ಹಲವೆಡೆ ವಿದ್ಯುತ್ ಕಂಬಗಳು ಧರೆಗುರುಳುತ್ತಿವೆ. ರಸ್ತೆ ಬದಿಯ ಮರಗಳು ಗಾಳಿಯ ರಭಸಕ್ಕೆ ವಿದ್ಯುತ್ ಲೈನ್‌ನ ಮೇಲೆ ಬೀಳುತ್ತಿರುವುದರಿಂದ ವಿದ್ಯುತ್ ಕಂಬಗಳು ನೆಲಕಚ್ಚುತ್ತಿವೆ. ತೀವ್ರ ಗಾಳಿ, ಮಳೆಯಿಂದಾಗಿ ಮರಗಳು ಬೀಳುತ್ತಿರುವುದರಿಂದ ಸೆಸ್ಕ್ ಸಿಬ್ಬಂದಿಗಳಿಗೆ ವಿದ್ಯುತ್ ನೀಡಲು ಸಾಧ್ಯವಾಗುತ್ತಿಲ್ಲ.

ಒಂದು ಬದಿಯಲ್ಲಿ ವಿದ್ಯುತ್ ಸರಿ ಪಡಿಸುತ್ತಿದ್ದಂತೆಯೇ ಮತ್ತೊಂದು ಬದಿಯಲ್ಲಿ ಮರಗಳು ಉರುಳಿ ಬೀಳುತ್ತಿರುವುದರಿಂದ ವಿದ್ಯುತ್ ಸಿಬ್ಬಂದಿಗಳಿಗೆ ಸಂಕಷ್ಟ ಎದುರಾಗಿದೆ. ಮಳೆಯನ್ನು ಲೆಕ್ಕಿಸದೆ ಹಗಲು ರಾತ್ರಿ ಎನ್ನದೆ ವಿದ್ಯುತ್ ಕೆಲಸದಲ್ಲಿ ಸೆಸ್ಕ್ ಸಿಬ್ಬಂದಿಗಳು ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಈಗಾಗಲೇ ಪೊನ್ನಂಪೇಟೆ ತಾಲೂಕಿನಲ್ಲಿ ೨೫೭ ವಿದ್ಯುತ್ ಕಂಬಗಳು ಹಾಳಾಗಿದ್ದು, ಬದಲಿ ವ್ಯವಸ್ಥೆ ಮಾಡಲಾಗಿದೆ. ಇನ್ನು ೪೦ ಕಂಬಗಳನ್ನು ಬದಲಿಸಬೇಕಿದೆ. ೧೭ ಟ್ರಾನ್ಸ್ಫಾರ್ಮರ್‌ಗಳು ಹಾಳಾಗಿದ್ದು ಇವುಗಳನ್ನು ದುರಸ್ಥಿಪಡಿಸಿ ಅಳವಡಿಸಲಾಗಿದೆ. ಗ್ರಾಮೀಣ ಭಾಗದಲ್ಲಿ ಇನ್ನು ಕೂಡ ವಿದ್ಯುತ್ ನೀಡಲು ಸಾಧ್ಯವಾಗುತ್ತಿಲ್ಲ. ಗ್ರಾಹಕರು ಇಲಾಖೆಯೊಂದಿಗೆ ಸಹಕರಿಸುವಂತೆ ಸೆಸ್ಕ್ ಎಇಇ ಎಂ.ಎಸ್.ವಿವೇಕಾನAದ ಮನವಿ ಮಾಡಿದ್ದಾರೆ.

ವಾಣಿಜ್ಯ ನಗರ ಗೋಣಿಕೊಪ್ಪಲುವಿನಿಂದ ಹಲವು ಗ್ರಾಮೀಣ ಪ್ರದೇಶಕ್ಕೆ ಸಂಚರಿಸುವ ಖಾಸಗಿ ಬಸ್‌ಗಳಿಗೆ ಪ್ರಯಾಣಿಕರ ಕೊರತೆ ಎದುರಾಗಿದೆ. ಹಲವು ಬಸ್‌ಗಳು ಮಳೆಯಿಂದಾಗಿ ಸಂಚಾರ ಸ್ಥಗಿತಗೊಳಿಸಿವೆ. ನಗರದಲ್ಲಿ ಸದಾ ಗಿಜಿಗುಡುತ್ತಿದ್ದ ಮಾರುಕಟ್ಟೆ ಆವರಣವು ಜನರ ಸಂಚಾರವಿಲ್ಲದೆ ಖಾಲಿ ಖಾಲಿಯಾಗಿತ್ತು. ಹೊಟೇಲ್, ಬೇಕರಿ, ಅಂಗಡಿ ಮಳಿಗೆಗಳಲ್ಲಿಯೂ ಕೂಡ ಗ್ರಾಹಕರು ಹೆಚ್ಚಾಗಿ ಕಂಡು ಬರಲಿಲ್ಲ.

ಮಳೆಯ ರಭಸ ಹೆಚ್ಚಾಗುತ್ತಿದ್ದಂತೆಯೇ ಗೋಣಿಕೊಪ್ಪಲುವಿನ ಪ್ರಮುಖ ನದಿ ಕೀರೆಹೊಳೆಯಲ್ಲಿ ನೀರಿನ ಮಟ್ಟ ಹೆಚ್ಚಾಗಿದೆ. ಕಳೆದ ಒಂದು ತಿಂಗಳ ಹಿಂದೆ ಕೀರೆಹೊಳೆಯ ಹೂಳನ್ನು ಎತ್ತಿ ಶುದ್ದಿಗೊಳಿಸಿದ ಹಿನ್ನಲೆಯಲ್ಲಿ ನೀರು ಸರಾಗವಾಗಿ ಹರಿಯುವಂತಾಗಿದೆ. ಇದರಿಂದಾಗಿ ಮುಂದಾಗಬಹುದಾದ ಅನಾಹುತವನ್ನು ತಪ್ಪಿಸುವ ಪ್ರಯತ್ನದಲ್ಲಿ ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಯಶಸ್ವಿಯಾಗಿದೆ. ಹೊಳೆಯ ಎರಡು ಬದಿಯಲ್ಲಿಯೂ ಬಡಾವಣೆಗಳಿದ್ದರೂ ಯಾರಿಗೂ ಇಲ್ಲಿಯ ತನಕ ಕೀರೆಹೊಳೆಯಿಂದ ಸಮಸ್ಯೆ ಎದುರಾಗಿಲ್ಲ.

ಮುಂಜಾಗ್ರತ ಕ್ರಮವಾಗಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಮೋದ್ ಗಣಪತಿ,ಉಪಾಧ್ಯಕ್ಷೆ ಮಂಜುಳ, ಪಿಡಿಒ ತಿಮ್ಮಯ್ಯ ಕೀರೆಹೊಳೆಯ ಬದಿಯಲ್ಲಿರುವ ಮನೆಗಳಿಗೆ ತೆರಳಿ ವೀಕ್ಷಣೆ ಮಾಡಿದರು. ರಾತ್ರಿ ವೇಳೆ ಮಳೆಯ ಅಬ್ಬರ ಹೆಚ್ಚಾದಲ್ಲಿ ಕೀರೆಹೊಳೆಯು ಅಪಾಯದ ಮಟ್ಟ ಮೀರಿದಲ್ಲಿ ಹಲವು ಕುಟುಂಬಗಳನ್ನು ತಕ್ಷಣವೇ ಸ್ಥಳಾಂತರಗೊಳಿಸುವ ನಿಟ್ಟಿನಲ್ಲಿ ಕ್ರಮಕ್ಕೆ ಮುಂದಾಗಿದ್ದಾರೆ. ಸಾಂತ್ವನ ಕೇಂದ್ರಕ್ಕೆ ತೆರಳಲು ಸಿದ್ದರಿರುವಂತೆ ಹಲವು ಕುಟುಂಬಗಳಿಗೆ ಸೂಚನೆ ನೀಡಲಾಗಿದೆ. ಕಂದಾಯ ಇಲಾಖೆಯ ಅಧಿಕಾರಿಗಳಾದ ಸುಧೀಂದ್ರ ಹಾಗೂ ಸಿಬ್ಬಂದಿ ಕೀರೆ ಹೊಳೆಯ ಬದಿಗೆ ತೆರಳಿ ನೀರಿನ ಮಟ್ಟ ಪರಿಶೀಲನೆ ಮಾಡಿದರು. ರಾತ್ರಿ ವೇಳೆ ನೀರಿನ ಮಟ್ಟ ಹೆಚ್ಚಾದಲ್ಲಿ ಗೋಣಿಕೊಪ್ಪ ನಗರದ ೩ನೇ ವಿಭಾಗಕ್ಕೆ ತೆರಳುವ ಸೇತುವೆ ಬಳಿ ರಸ್ತೆಯನ್ನು ಬಂದ್ ಮಾಡಲು ಹಾಗೂ ಬ್ಯಾರಿಕೇಡ್ ಅಳವಡಿಸಲು ಪೊಲೀಸರಿಗೆ ತಿಳಿಸಿದ್ದಾರೆ.

-ಹೆಚ್.ಕೆ. ಜಗದೀಶ್