ಸೋಮವಾರಪೇಟೆ, ಜು. ೧೮: ಭಾರೀ ಮಳೆಯಿಂದಾಗಿ ತಾಲೂಕಿನಾದ್ಯಂತ ಅಲ್ಲಲ್ಲಿ ವಾಸದ ಮನೆಗಳಿಗೆ ಹಾನಿಯಾಗುತ್ತಿದೆ. ಮನೆಗಳ ಸಮೀಪವಿರುವ ಮರಗಳು ಮನೆಯ ಮೇಲೆ ಬಿದ್ದು ಹಾನಿಯಾಗುತ್ತಿದ್ದರೆ, ಅತೀ ಶೀತಕ್ಕೆ ಮನೆಯ ಗೋಡೆಗಳು ಕುಸಿದು ನಷ್ಟ ಸಂಭವಿಸುತ್ತಿವೆ.

ಪಟ್ಟಣ ಸಮೀಪದ ಬಿಳಿಕಿಕೊಪ್ಪ ಗ್ರಾಮದ ಸರಸ್ವತಿ ಎಂಬವರಿಗೆ ಸೇರಿದ ವಾಸದ ಮನೆಯ ಮೇಲೆ ಮರ ಬಿದ್ದು, ಭಾಗಶಃ ಹಾನಿಯಾಗಿದೆ. ಅಂತೆಯೇ ಕೊಡ್ಲಿಪೇಟೆ ಹೋಬಳಿಯ ಅವರೆದಾಳು ಗ್ರಾಮದ ಮೀನಾಕ್ಷಿ ರಂಗಯ್ಯ ಅವರಿಗೆ ಸೇರಿದ ವಾಸದ ಮನೆಯು ಶೇ ೮೦ರಷ್ಟು ಕುಸಿದು ಬಿದ್ದಿದೆ. ಮೂವತ್ತೊಕ್ಲು ಗ್ರಾಮದ ಜಾನು ಎಂಬವರ ಮನೆಯ ಒಂದು ವಾರ್ಶ್ವ ಧರಾಶಾಹಿಯಾಗಿದೆ.

ಸೋಮವಾರಪೇಟೆ ಹೋಬಳಿಯ ದೊಡ್ಡಬ್ಬೂರು ಗ್ರಾಮದ ಗೌರಿ ರಾಜು ಅವರ ವಾಸದ ಮನೆಯ ಗೋಡೆ ಕುಸಿದು ನಷ್ಟ ಸಂಭವಿಸಿದೆ. ಶನಿವಾರಸಂತೆ ಹೋಬಳಿಯ ಆಲೂರು ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾರೋಹಳ್ಳಿ ಗ್ರಾಮದಲ್ಲಿ ರಸ್ತೆಯ ಎರಡು ಭಾಗದಲ್ಲಿ ಬರೆ ಕುಸಿದು ರಸ್ತೆ ಸಂಚಾರ ಸ್ಥಗಿತಗೊಂಡಿತ್ತು. ನಂತರ ಮಣ್ಣು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.

ಕೊಡ್ಲಿಪೇಟೆ ಹೋಬಳಿ ದೊಡ್ಡಕುಂದ ಗ್ರಾಮದ ಮೈಮುನ ಎಂಬವರಿಗೆ ಸೇರಿದ ವಾಸದ ಮನೆಯ ಗೋಡೆ ಕುಸಿದು ನಷ್ಟವಾಗಿದೆ. ಸೋಮವಾರಪೇಟೆ ಪಟ್ಟಣ ಸಮೀಪದ ನೇಗಳ್ಳೆ ಕರ್ಕಳ್ಳಿ ಗ್ರಾಮದ ಮುನಿಯಮ್ಮ ಅವರ ವಾಸದ ಮನೆಯು ಭಾರೀ ಗಾಳಿಗೆ ಸಿಲುಕಿ ಛಾವಣಿ ಕುಸಿತಗೊಂಡಿದೆ. ಶಾಂತಳ್ಳಿ ಹೋಬಳಿಯ ಕುಮಾರಳ್ಳಿ ಬೀದಳ್ಳಿ ಗ್ರಾಮದ ಎನ್.ಈ. ಪೊನ್ನಪ್ಪ ಅವರ ವಾಸದ ಮನೆಯ ಹಿಂಭಾಗದ ಗೋಡೆ ಅತೀ ಶೀತಕ್ಕೆ ಕುಸಿದಿದೆ. ತೋಳೂರುಶೆಟ್ಟಳ್ಳಿ ಗ್ರಾಮದ ಟಿ. ಲಕ್ಷö್ಮಮ್ಮ ಅವರಿಗೆ ಸೇರಿದ ಮನೆಯ ಗೋಡೆ ಅತೀ ಶೀತಕ್ಕೆ ಕುಸಿದಿದ್ದು, ಅದೃಷ್ಟವಶಾತ್ ಹೆಚ್ಚಿನ ಅಪಾಯ ತಪ್ಪಿದೆ.

ಮನೆಗಳು ಹಾನಿಯಾಗಿರುವ ಸ್ಥಳಗಳಿಗೆ ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೆಲವು ಕಡೆಗಳಿಗೆ ಖುದ್ದು ತಹಶೀಲ್ದಾರ್ ನವೀನ್‌ಕುಮಾರ್ ಭೇಟಿ ನೀಡಿದ್ದಾರೆ. ವಾತಾವರಣದಲ್ಲಿ ಅತೀ ಶೀತ ಉಂಟಾಗಿದ್ದು, ಮಣ್ಣಿನಿಂದ ನಿರ್ಮಿಸಿದ ಗೋಡೆಗಳು, ಕಚ್ಚಾ ಮನೆಯ ಗೋಡೆಗಳು ಹೆಚ್ಚು ಹಾನಿಗೊಳಗಾಗುತ್ತಿವೆ.