ಸೋಮವಾರಪೇಟೆ, ಜು. ೨೩: ತಾಲೂಕು ಒಕ್ಕಲಿಗರ ಯುವ ವೇದಿಕೆಯ ಆಶ್ರಯದಲ್ಲಿ ಆ.೪ ರಂದು ಒಕ್ಕಲಿಗ ಸಮುದಾಯ ಬಾಂಧವರಿಗೆ ಶಾಂತಳ್ಳಿಯಲ್ಲಿ ಕೆಸರು ಗದ್ದೆ ಕ್ರೀಡಾಕೂಟ ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಕೆ.ಬಿ. ಸುರೇಶ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯುವ ವೇದಿಕೆಯಿಂದ ೯ನೇ ವರ್ಷದ ಕ್ರೀಡಾಕೂಟ ಆಯೋಜಿಸಿದ್ದು, ಆ. ೪ ರಂದು ಬೆಳಿಗ್ಗೆ ೯ ರಿಂದ ಸಂಜೆ ೫ ಗಂಟೆಯವರೆಗೆ ಶಾಂತಳ್ಳಿಯ ಗೌರಿಕೆರೆ ಮುಂಭಾಗ ಇರುವ ಕೆ.ಎಲ್. ಸತೀಶ್ ಹಾಗೂ ಬಿದ್ದಪ್ಪ ಅವರಿಗೆ ಸೇರಿದ ಗದ್ದೆಯಲ್ಲಿ ವಿವಿಧ ಸ್ಪರ್ಧೆಗಳು ಜರುಗಲಿವೆ ಎಂದರು.
ಈ ಹಿಂದೆ ಯಡೂರು, ತೋಳೂರುಶೆಟ್ಟಳ್ಳಿ, ತಾಕೇರಿ, ಗೌಡಳ್ಳಿ, ಮೂದ್ರವಳ್ಳಿಯಲ್ಲಿ ನಡೆಸಿದ್ದು, ಈ ಬಾರಿ ಶಾಂತಳ್ಳಿಯಲ್ಲಿ ಆಯೋಜಿಸಲಾಗಿದೆ. ಒಕ್ಕಲಿಗ ಬಾಂಧವರಲ್ಲಿ ಪರಸ್ಪರ ಪರಿಚಯ, ಸಂಘಟನೆ, ಸಾಮರಸ್ಯವನ್ನು ವೃದ್ಧಿಸುವುದು ಕ್ರೀಡಾಕೂಟದ ಉದ್ದೇಶವಾಗಿದೆ ಎಂದು ತಿಳಿಸಿದರು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಹಾಸನ ಶಾಖಾ ಮಠಾಧೀಶರಾದ ಶಂಭುನಾಥ ಸ್ವಾಮೀಜಿ, ಶಾಸಕ ಡಾ. ಮಂತರ್ ಗೌಡ, ಒಕ್ಕಲಿಗರ ಸಂಘದ ರಾಜ್ಯಾಧ್ಯಕ್ಷ ಸಿ.ಎನ್. ಬಾಲಕೃಷ್ಣ, ನಿರ್ದೇಶಕರಾದ ಹೆಚ್.ಎನ್. ರವೀಂದ್ರ, ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎ.ಆರ್. ಮುತ್ತಣ್ಣ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ ಎಂದರು. ಪುರುಷರಿಗೆ ಹಗ್ಗಜಗ್ಗಾಟ, ವಾಲಿಬಾಲ್, ಗದ್ದೆ ಓಟ, ಮಹಿಳೆಯರಿಗೆ ಥ್ರೋಬಾಲ್, ಗದ್ದೆ ಓಟ, ಹಗ್ಗಜಗ್ಗಾಟ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಇದರೊಂದಿಗೆ ಪತಿ-ಪತ್ನಿಯನ್ನು ಎತ್ತಿಕೊಂಡು ಗದ್ದೆಯಲ್ಲಿ ಓಡುವ ಸ್ಪರ್ಧೆ, ಶಾಲಾ ಮಕ್ಕಳಿಗೆ ವಿವಿಧ ಆಟೋಟ ನಡೆಯಲಿದೆ ಎಂದು ಮಾಹಿತಿ ನೀಡಿದರು. ಸ್ಪರ್ಧೆಯಲ್ಲಿ ವಿಜೇತರಾಗುವವರಿಗೆ ಪ್ರಥಮ, ದ್ವಿತೀಯ ನಗದು ಬಹುಮಾನ ಹಾಗೂ ಟ್ರೋಫಿ ನೀಡಲಾಗುವುದು. ಸ್ಪರ್ಧೆಗಳಲ್ಲಿ ಭಾಗಿಯಾಗುವವರು ಆ.೨ ರೊಳಗೆ ಹೆಸರು ನೋಂದಾಯಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗೆ ಮೊ: ೯೪೪೮೪೩೩೨೯೪, ೯೪೪೮೨೭೮೫೨೫ ಸಂಖ್ಯೆಗಳನ್ನು ಸಂಪರ್ಕಿಸಬಹುದು ಎಂದರು. ಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಹೆಚ್.ಕೆ. ಪೃಥ್ವಿ, ಕಾರ್ಯದರ್ಶಿ ಯೋಗೇಂದ್ರ, ಪದಾಧಿಕಾರಿಗಳಾದ ಸುದೀಪ್, ದಿವಾಕರ್, ಕೆ.ಎ. ಪ್ರಕಾಶ್, ಸಜನ್ ಮಂದಣ್ಣ ಅವರುಗಳು ಉಪಸ್ಥಿತರಿದ್ದರು.