ಮಡಿಕೇರಿ, ಜು. ೨೨: ಜಿಲ್ಲೆಯಲ್ಲಿ ಈತನಕ ಸುರಿದ ಮಳೆಯಿಂದಾಗಿ ಹಲವು ಕಷ್ಟ-ನಷ್ಟಗಳು ಸಂಭವಿಸಿರುವ ಬೆನ್ನಲ್ಲೇ ಇದೀಗ ಮತ್ತೊಂದು ಆತಂಕ ಎದುರಾಗಿದೆ.
ಜಿಲ್ಲೆಯ ಆರ್ಥಿಕತೆಯ ಬೆನ್ನೆಲುಬಾಗಿರುವ ಕಾಫಿ ಬೆಳೆಯ ಮೇಲೆ ಮಳೆಯಿಂದಾಗಿ ವ್ಯತಿರಿಕ್ತ ಪರಿಣಾಮ ಉಂಟಾಗಿದೆ. ಹಲವೆಡೆಗಳಲ್ಲಿ ಕಾಫಿಗೆ ಕೊಳೆ ರೋಗ ಕಾಣಿಸಿಕೊಂಡಿದೆಯಲ್ಲದೆ ಫಸಲು ಉದುರುವಿಕೆ ದಿನೇ ದಿನೇ ಹೆಚ್ಚಾಗುತ್ತಿದೆ. ಈಗಾಗಲೇ ಗಿಡಗಳಲ್ಲಿ ಕಾಫಿ ಕಾಯಿಗಟ್ಟಿದ್ದು, ದಪ್ಪವಾಗುತ್ತಿವೆ. ಈ ಕಾಫಿ ಗೊಂಚಲಿನಲ್ಲೇ ಕೊಳೆತು ನಾಶವಾಗುತ್ತಿರುವುದು ಕಂಡುಬAದಿದೆ. ಇದರೊಂದಿಗೆ ಉದುರುವಿಕೆ ಕೂಡ ಅಧಿಕವಾಗುತ್ತಿದ್ದು, ಬೆಳೆಗಾರರು ಆತಂಕಪಡುವAತಾಗಿದೆ. ಶ್ರೀಮಂಗಲ ವಿಭಾಗದ ಕುರ್ಚಿ, ಬೀರುಗ, ಕುಟ್ಟ, ನಾಲ್ಕೇರಿ, ಪಲ್ಲೇರಿ, ನೆಮ್ಮಲೆ, ಬಿರುನಾಣಿ, ತೆರಾಲು, ಪರಕಟಗೇರಿ, ಬಾಡಗರಕೇರಿ ಸೇರಿದಂತೆ ಹಲವಾರು ಗ್ರಾಮಗಳಲ್ಲಿ ಈ ಪರಿಸ್ಥಿತಿ ಎದುರಾಗಿದೆ. ಪ್ರಸ್ತುತ ಕಾಫಿಗೆ ಒಂದಷ್ಟು ದರ ಹೆಚ್ಚಿದ್ದರೂ, ಸಮಸ್ಯೆಗಳು ಮಾತ್ರ ಹಲವಷ್ಟು ಎದುರಾಗುತ್ತಿವೆ.
(ಮೊದಲ ಪುಟದಿಂದ) ವನ್ಯಪ್ರಾಣಿಗಳ ಉಪಟಳ, ಕಾರ್ಮಿಕರ ಸಮಸ್ಯೆ, ಅಧಿಕ ಕೂಲಿ, ಮತ್ತಿತರ ಸಮಸ್ಯೆಗಳ ಜೊತೆಯಲ್ಲೇ ಇದೀಗ ಮುಂದಿನ ಸಾಲಿನ ಫಸಲು ಈ ವೇಳೆಯಲ್ಲೇ ನೆಲಕಚ್ಚುತ್ತಿರುವುದು ಭವಿಷ್ಯದ ಬಗ್ಗೆ ಬೆಳೆಗಾರರು ಚಿಂತಿತರಾಗುವAತಾಗಿದೆ. ಕಾಫಿ ಕೊಳೆ ರೋಗ, ಉದುರುವಿಕೆ ಬಗ್ಗೆ ಈಗಾಗಲೇ ಹಲವು ಬೆಳೆಗಾರರು ಕಾಫಿ ಮಂಡಳಿಯ ಅಧಿಕಾರಿಗಳ ಗಮನಕ್ಕೂ ತಂದಿದ್ದಾರೆ. ತಕ್ಷಣವೇ ತೋಟಗಳಲ್ಲಿ ಸಮೀಕ್ಷೆ ನಡೆಸಿ ವರದಿ ನೀಡುವುದರೊಂದಿಗೆ ಅಗತ್ಯ ಪರಿಹಾರವನ್ನು ನೀಡುವಂತೆಯೂ ಆಗ್ರಹ ಕೇಳಿ ಬಂದಿದೆ. ಪ್ರಸ್ತುತ ಎದುರಾಗಿರುವ ಸಮಸ್ಯೆಯ ಬಗ್ಗೆ ಕಾಫಿ ಮಂಡಳಿಯ ಕಾರ್ಯದರ್ಶಿ ಜಗದೀಶ್ ಅವರನ್ನು ಸಂಪರ್ಕಿಸಿ ಮಾಹಿತಿ ನೀಡಲಾಗಿದೆ. ಅಲ್ಲದೆ, ಗೋಣಿಕೊಪ್ಪ, ಅರುವತ್ತೊಕ್ಕಲುವಿನಲ್ಲಿರುವ ವಿಭಾಗೀಯ ಕಚೇರಿಯ ಉಪನಿರ್ದೇಶಕರ ಗಮನಕ್ಕೂ ತರಲಾಗಿದೆ ಎಂದು ಶ್ರೀಮಂಗಲ ವಿ.ಎಸ್.ಎಸ್.ಎನ್. ಅಧ್ಯಕ್ಷ ಅಜ್ಜಮಾಡ ಟಿ. ಚಂಗಪ್ಪ ಅವರು ‘ಶಕ್ತಿ’ಗೆ ತಿಳಿಸಿದ್ದಾರೆ.
ಕೊಡಗು ಜಿಲ್ಲೆಯ ಜನರು ಬಹುತೇಕ ಕಾಫಿ ಬೆಳೆಯನ್ನೇ ಅವಲಂಬಿಸಿದ್ದಾರೆ. ಜಿಲ್ಲೆಯ ಆರ್ಥಿಕತೆಯಲ್ಲಿ ಕಾಫಿಯೇ ಪ್ರಾಮುಖ್ಯತೆ ಪಡೆದಿದ್ದು, ಇದರ ಪರಿಣಾಮ ಇನ್ನಿತರ ಎಲ್ಲಾ ವಹಿವಾಟುಗಳ ಮೇಲೂ ಬೀರುವುದರಿಂದ ತ್ವರಿತವಾಗಿ ಕಾಫಿ ಮಂಡಳಿ, ಜಿಲ್ಲಾಡಳಿತ, ಸರಕಾರ ಬೆಳೆಗಾರರ ಈ ಸಮಸ್ಯೆ ಬಗ್ಗೆ ತ್ವರಿತ ಗಮನ ಹರಿಸಬೇಕಾಗಿದೆ ಎಂಬುದು ಬೆಳೆಗಾರರ ಆಗ್ರಹವಾಗಿದೆ.
ವೀರಾಜಪೇಟೆ ವರದಿ
ಏಕಾಏಕಿ ಸುರಿದ ಮಳೆಯಿಂದಾಗಿ ಕಾಫಿ ತೋಟದಲ್ಲಿ ಮಳೆಗಾಲಕ್ಕೂ ಮುನ್ನ ಮುಗಿಸಬೇಕಿದ್ದ ಮರ ಕಪಾತು, ಗಿಡ ಕಪಾತು, ಕೊಟ್ಟಿಗೆ ಗೊಬ್ಬರ ನೀಡುವುದು ಸೇರಿದಂತೆ ಹಲವು ಕೆಲಸಗಳು ಸಾಕಷ್ಟು ಬಾಕಿ ಉಳಿದಿವೆ. ನಿರಂತರವಾಗಿ ಸುರಿದ ಜಡಿ ಮಳೆಯಿಂದ ಮಳೆ ನೀರು ಹೊರ ಹರಿದು, ಭೂಮಿಯಲ್ಲಿ ಇಂಗಿದ್ದೇ ಹೆಚ್ಚಾಗಿದ್ದು, ಈಗಾಗಲೇ ಭೂಮಿ ಶೀತಪೀಡಿತವಾಗಿರುವುದರಿಂದ ಹಲವು ತಗ್ಗು ಪ್ರದೇಶಗಳಲ್ಲಿ ಜಲ ಹೊರಹೊಮ್ಮುತ್ತಿದೆ.
ನಿರಂತರ ಜಡಿ ಮಳೆಯಿಂದಾಗಿ ವಾಣಿಜ್ಯ ಬೆಳೆ ಕಾಫಿಯೊಂದಿಗೆ ಮೆಣಸು ಹಾಗೂ ಅಡಿಕೆಗೂ ಕೊಳೆರೋಗ ಎದುರಾಗಿದೆ. ಶೀಘ್ರವೇ ಈ ಬೆಳೆಗಳಿಗೆ ಕ್ರಿಮಿನಾಶಕ ಸಿಂಪಡಿಸುವ ಕೆಲಸವನ್ನು ಮಳೆ ಮಧ್ಯೆಯೇ ಹಲವು ತೋಟಗಳಲ್ಲಿ ಆರಂಭಿಸಿದ್ದರಾದರೂ ಹೆಚ್ಚಿನ ಪರಿಣಾಮವಿಲ್ಲ ಎನ್ನಲಾಗುತ್ತಿದೆ. ಸಾಕಷ್ಟು ಕಾಫಿ ಬೆಳೆಗಾರರು ಕ್ರಿಮಿನಾಶಕ ಸಿಂಪಡಣೆಗೆ ಮಳೆ ಬಿಡುವು ನೀಡುವುದನ್ನೆ ಕಾಯುತ್ತಿದ್ದಾರೆ.
ಬಿರುಸಿನ ಮಳೆ
ಆಷಾಢ ಮಾಸದಲ್ಲಿ ಭಾರಿ ಪ್ರಮಾಣದ ಗಾಳಿ, ಎಡಬಿಡದ ಮಳೆ ಸುರಿಯುವುದು ಸಾಮಾನ್ಯ, ಗಾಳಿ ಮಳೆಗೆ ಮಲೆನಾಡಿನಲ್ಲಿ ಸಾಮಾನ್ಯವಾಗಿ ಅಂರ್ತಜಲ ಉಕ್ಕುತ್ತಿದ್ದರೆ, ನೂರಾರು ಮರಗಳು ಧರಾಶಾಯಿಯಾಗುತ್ತಿದ್ದವು. ಅಲ್ಲದೆ ನದಿಗಳ ತಮ್ಮ ಹರಿವನ್ನು ವಿಸ್ತಾರಗೊಳಿಸುತ್ತಿದ್ದರಿಂದ ನೈಜ ಮಲೆನಾಡಿನ ಮಳೆ ಗೋಚರವಾಗುತಿತ್ತು. ಆದರೆ, ಈ ಬಾರಿ ಶೀತದಿಂದ ಕೂಡಿದ ಭಾರಿ ಮಳೆಯಾಗಿದೆ.
ತುಂಬಿದ ಕಾವೇರಿ ನದಿ
ಜಿಲ್ಲೆಯಾದ್ಯಂತ ನಿರಂತರವಾಗಿ ಮಳೆಯಾಗುತ್ತಿದ್ದುದರಿಂದ ಜಿಲ್ಲೆಯ ಪ್ರಮುಖ ಜೀವನದಿ ಕಾವೇರಿ ನದಿ ತುಂಬಿ ಹರಿದಿದೆ. ಹಾರಂಗಿ ಅಣೆಕಟ್ಟೆಯಿಂದ ನಿರಂತರವಾಗಿ ನೀರು ಹೊರ ಹರಿಯುತ್ತಿದೆ. ಸಾವಿರಾರು ಎಕರೆ ಪ್ರದೇಶ ಸಂಪೂರ್ಣ ಹಸಿರು ಹುಲ್ಲಿನ ಹೊದಿಕೆಯಾಗಿದೆ.
ಈ ಮಳೆ ಬೆಳೆಗಳಿಗೆ ರೋಗಕಾರಕವಾಗಿದೆ. ಸದ್ಯ ಕೆಲದಿನಗಳ ಮಳೆ ಬಿಡುವು ನೀಡಿದರೆ ಬೆಳೆ ಉಳಿಸಿಕೊಳ್ಳಲು ಅನುಕೂಲವಾಗಲಿದೆ. ವ್ಯಾಪಕವಾಗಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಬೆಳೆಗಾರರು ಆತಂಕಗೊಳ್ಳುವAತಾಗಿದೆ. ಜುಲೈ ತಿಂಗಳಿನಲ್ಲಿಯೇ ಬಹುತೇಕ ಕಡೆಗಳಲ್ಲಿ ಕಾಫಿ ಕೊಳೆ ರೋಗ ಕಾಣಿಸಿಕೊಳ್ಳುತ್ತಿರುವುದರೊಂದಿಗೆ ಉದುರುವಿಕೆಯೂ ಹೆಚ್ಚಾಗುತ್ತಿದೆ. ಇನ್ನೂ ಮಳೆಗಾಲ ಮುಂದುವರಿಯಲಿದ್ದು, ಇನ್ನಷ್ಟು ಸಮಸ್ಯೆ ಎದುರಾಗುವ ಸಾಧ್ಯತೆ ಇದೆ.
ದಕ್ಷಿಣ ಕೊಡಗಿನ ಶ್ರೀಮಂಗಲ, ಕುರ್ಚಿ, ಬೀರುಗ, ಟಿ. ಶೆಟ್ಟಿಗೇರಿ, ನೆಮ್ಮಲೆ ಭಾಗದಲ್ಲಿ ಮಳೆ ಅಬ್ಬರ ಹೆಚ್ಚಾಗಿದ್ದು, ಕಾಫಿ ಬೆಳೆ ನೆಲ ಕಚ್ಚಿದೆ. ಇದಲ್ಲದೇ ಜಿಲ್ಲೆ ಪಾಲಂಗಾಲ, ಕೆದಮುಳ್ಳೂರು, ಹೆಗ್ಗಳ, ತೋರ, ಕಂಡAಗಾಲ, ಬಾಡಗ, ಒಂಟಿಯAಗಡಿ, ನಾಪೋಕ್ಲು, ಕಕ್ಕಬ್ಬೆ, ನೆಲಜಿ ವಿಭಾಗಗಳಲ್ಲೂ ಕಾಫಿ ನೆಲ ಕಚ್ಚಿದೆ. ಜೂನ್, ಜುಲೈನಲ್ಲಿ ಮಳೆಯ ಅಬ್ಬರಕ್ಕೆ ಶೇ. ೮ -೧೦ರಷ್ಟು ಕಾಫಿ ಫಸಲು ಉದುರುವುದು ಸಾಮಾನ್ಯವಾದರೂ ಮಳೆ ಹೆಚ್ಚಾಗುತ್ತಲೇ ಇರುವುದು ಬೆಳೆಗಾರರ ಆತಂಕಕ್ಕೆ ಕಾರಣ.
ವಿಪರೀತ ಮಳೆ ಗಾಳಿಯಿಂದಾಗಿ ಕಾಫಿ ತೋಟದ ತುಂಬಾ ಮರ, ರೆಂಬೆ ಕೊಂಬೆಗಳು ಬಿದ್ದು ಹಾಳಾಗಿವೆ. ಅಲ್ಲದೆ ಕೆಲವು ಕಡೆಗಳಲ್ಲಿ ಕಾಡಾನೆ ದಾಳಿ ನಡೆಸಿ ಕಾಫಿ ತೋಟಗಳನ್ನು ಧÀ್ವಂಸಗೊಳಿಸಿವೆ. ಮಳೆಯ ನಡುವೆ ಕೃಷಿಕರಿಗೆ ತೋಟದೊಳಗೆ ಪ್ರವೇಶ ಮಾಡಲು ಸಾಧ್ಯವಾಗದ ಪರಿಸ್ಥಿತಿಯ ನಡುವೆ ಕಾಡಾನೆಗಳ ಉಪಟಳ ರೈತರನ್ನು ಇನ್ನಷ್ಟು ಹೈರಾಣಾಗಿಸಿದೆ.
ರೈತರಿಗೆ ಪರಿಹಾರ ನೀಡುವುದರೊಂದಿಗೆ ರೈತರು ಮಾಡಿರುವ ಸಾಲವನ್ನು ಮನ್ನಾ ಮಾಡಬೇಕು ಎಂದು ಬೆಳೆಗಾರರಾದ ವಿ.ಟಿ. ನಾರಾಯಣ ಅವರು ಆಗ್ರಹಿಸಿದ್ದಾರೆ.