ಮಡಿಕೇರಿ, ಜು. ೨೩: ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಜಿಲ್ಲೆಯವರಾದ ಕರ್ತಚ್ಚಿರ ಜಿ. ಕುಮಾರ್ ದೇವಯ್ಯ ಅವರು ಇದೀಗ ಮೇಜರ್ ಜನರಲ್ ಹುದ್ದೆಗೆ ಬಡ್ತಿ ಪಡೆದಿದ್ದಾರೆ. ಆರ್ಮಿ ಡೆಂಟಲ್ ದಳದಲ್ಲಿ ಕರ್ತವ್ಯದಲ್ಲಿರುವ ಇವರು ಇದೀಗ ಈ ಸ್ಥಾನಕ್ಕೆ ನೇಮಕಗೊಂಡಿದ್ದಾರೆ.
ಸೇನೆ ಮತ್ತು ನೌಕಾಪಡೆ ಎರಡರಲ್ಲಿನ ಸೇವೆಯ ಪರಿಗಣನೆಯೊಂದಿಗೆ ಇವರು ಬಡ್ತಿ ಪಡೆದಿದ್ದಾರೆ. ಪ್ರಸ್ತುತ ನವದೆಹಲಿಯ ಸೇನಾ ಪ್ರಧಾನ ಕಛೇರಿಯಲ್ಲಿ ದಂತ ಸೇವೆಗಳ ಹೆಚ್ಚುವರಿ ಮಹಾನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿರುವ ಮೇಜರ್ ಜನರಲ್ ಕುಮಾರ್ ದೇವಯ್ಯ ಅವರು ವೀರಾಜಪೇಟೆ ತಾಲೂಕಿನ ಆರ್ಜಿ ಗ್ರಾಮದವರಾಗಿದ್ದು, ದಿವಂಗತ ಕರ್ತಚ್ಚಿರ ಎಂ ಗಣಪತಿ ಮತ್ತು ಪೊನ್ನಕ್ಕಿ (ತಾಮನೆ - ಪಟ್ಟಮಾಡ) ದಂಪತಿಯ ಪುತ್ರರಾಗಿದ್ದಾರೆ.
ಪತ್ನಿ ರೇಣುಕಾ (ತಾಮನೆ - ಪಟ್ಟಮಾಡ) ಅವರನ್ನು ವಿವಾಹವಾಗಿದ್ದಾರೆ.
ದಾವಣಗೆರೆಯ ಬಾಪೂಜಿ ಡೆಂಟಲ್ ಕಾಲೇಜಿನಲ್ಲಿ ಪದವಿ ಪಡೆದ ಅವರು ಪುಣೆಯ ಸಶಸ್ತç ಪಡೆಗಳ ವೈದ್ಯಕೀಯ ಕಾಲೇಜಿನಲ್ಲಿ ಮಾಸ್ಟರ್ ಆಫ್ ಡೆಂಟಲ್ ಸರ್ಜರಿಯೊಂದಿಗೆ ತಮ್ಮ ಶಿಕ್ಷಣವನ್ನು ಮುಂದುವರೆಸಿದರು.
ಅವರ ಸೇವೆಯನ್ನು ಪ್ರತಿಷ್ಠಿತ ಪ್ರಶಸ್ತಿಗಳ ಮೂಲಕ ಗುರುತಿಸಲಾಗಿದೆ. ೨೦೦೬ ರಲ್ಲಿ ಈಔಅ-iಟಿ-ಅ (Wಅ) ಶ್ಲಾಘನೆ ಮತ್ತು ೨೦೧೧ ರಲ್ಲಿ ನೌಕಾಪಡೆಯ ಮುಖ್ಯಸ್ಥರಿಂದ ಶ್ಲಾಘನೆಗೊಳಪಟ್ಟಿದ್ದಾರೆ. ಸೈನಿಕರ ಜಿಲ್ಲೆಯಾದ ಕೊಡಗಿನ ಖ್ಯಾತಿಯನ್ನು ಇದು ಮತ್ತೊಮ್ಮೆ ಪ್ರತಿಬಿಂಬಿಸಿದೆ.