ಮಡಿಕೇರಿ, ಜು. ೨೩: ಮಡಿಕೇರಿ ತಾಲೂಕಿನ ಅರ್ವತ್ತೊಕ್ಕಲು ಗ್ರಾಮದ ಬೇಕೋಟ್ ಮಕ್ಕ ಕ್ಲಬ್ ವತಿಯಿಂದ ಹಿಂದೂ ಬಾಂಧವರ ೪ನೇ ವರ್ಷದ ರಾಜ್ಯಮಟ್ಟದ ಕೆಸರು ಗದ್ದೆ ಕ್ರೀಡಾಕೂಟ ತಾ. ೨೭ ಹಾಗೂ ೨೮ರಂದು ಗ್ರಾಮದ ತಳೂರು ಚಂಗಪ್ಪ, ಕುಶಾಲಪ್ಪ ಅವರ ಗದ್ದೆಯಲ್ಲಿ ನಡೆಯಲಿದೆ ಎಂದು ಕ್ಲಬ್ ಪ್ರಮುಖರು ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾರ್ಯದರ್ಶಿ ಗಿರಿ ಅಪ್ಪಯ್ಯ, ೨೦ ತಂಡಗಳಿಗೆ ಸೀಮಿತವಾದ ಪುರುಷರ ಕ್ರಿಕೆಟ್ ಪಂದ್ಯಾಟ, ಪುರುಷರ ಹಾಗೂ ಮಹಿಳೆಯರ ವಿಭಾಗದ ಹಗ್ಗಜಗ್ಗಾಟ, ವಿವಿಧ ಹಂತದ ಕೆಸರು ಗದ್ದೆ ಓಟ, ದಂಪತಿಗೆ ಕೆಸರು ಗದ್ದೆಯಲ್ಲಿ ಅಡಿಕೆ ಹಾಳೆ ಎಳೆಯುವ ಸ್ಪರ್ಧೆ ನಡೆಯಲಿದೆ. ತಾ. ೨೮ ರಂದು ಸಭಾ ಕಾರ್ಯಕ್ರಮ ನಡೆಯಲಿದ್ದು, ಸ್ಥಳ ದಾನಿಗಳಾದ ತಳೂರು ಎಂ. ಚಂಗಪ್ಪ, ಕುಶಾಲಪ್ಪ, ದಾನಿ ಪೊನ್ನೇಟಿ ಅಕ್ಕಮ ಕುಟ್ಟಪ್ಪ ಅವರು ಉದ್ಘಾಟಿಸಲಿದ್ದಾರೆ. ಮಧ್ಯಾಹ್ನ ೩ ಗಂಟೆಗೆ ನಡೆಯಲಿರುವ ಸಮಾರೋಪ ಸಮಾರಂಭ ಕ್ಲಬ್ ಅಧ್ಯಕ್ಷ ತಳೂರು ವಿವೇಕ್ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಸಂಸದ ಯದುವೀರ್ ಒಡೆಯರ್, ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ, ಶಾಸಕರುಗಳಾದ ಎ.ಎಸ್. ಪೊನ್ನಣ್ಣ, ಮಂತರ್ ಗೌಡ, ಮಾಜಿ ಶಾಸಕರುಗಳಾದ ಕೆ.ಜಿ. ಬೋಪಯ್ಯ, ಎಂ.ಪಿ. ಅಪ್ಪಚ್ಚು ರಂಜನ್, ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಸಿ.ಕೆ. ಬೋಪಣ್ಣ, ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಬೆಟ್ಟಗೇರಿ ವಿ.ಎಸ್.ಎಸ್.ಎನ್ ಅಧ್ಯಕ್ಷ ತಳೂರು ಕಿಶೋರ್ ಕುಮಾರ್, ಬೆಟ್ಟಗೇರಿ ಗ್ರಾ.ಪಂ. ಅಧ್ಯಕ್ಷೆ ಚಳಿಯಂಡ ಕಮಲ ಉತ್ತಯ್ಯ, ಸದಸ್ಯ ದಿನೇಶ್ ಕರುಂಬಯ್ಯ, ನಿವೃತ್ತ ಮುಖ್ಯ ಶಿಕ್ಷಕ ಕೆ.ಎಸ್. ಪುಟ್ಟಯ್ಯ ಸೇರಿದಂತೆ ಇನ್ನಿತರರು ಹಾಜರಿರುತ್ತಾರೆ ಎಂದು ತಿಳಿಸಿದರು.
ಅಧ್ಯಕ್ಷ ತಳೂರು ವಿವೇಕ್ ಮಾತನಾಡಿ, ವ್ಯವಸ್ಥಿತವಾಗಿ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತಿದ್ದು, ಉಡುಪಿ, ದಕ್ಷಿಣ ಕನ್ನಡ, ಸುಳ್ಯ ಭಾಗಗಳಿಂದಲೂ ತಂಡಗಳು ಭಾಗವಹಿಸುತ್ತಿವೆ. ಹಗ್ಗಜಗ್ಗಾಟದಲ್ಲಿ ಸ್ಥಳದಲ್ಲಿ ತಂಡಗಳ ನೋಂದಣಿಗೆ ಅವಕಾಶವಿದೆ. ಹೆಚ್ಚಿನ ಮಾಹಿತಿಗೆ ೭೩೩೮೧೫೧೨೭೭, ೯೯೦೬೮೯೪೪೨೯ ಸಂಖ್ಯೆ ಸಂಪರ್ಕಿಸುವAತೆ ಮನವಿ ಮಾಡಿದರು.
ಗೋಷ್ಠಿಯಲ್ಲಿ ಉಪಾಧ್ಯಕ್ಷ ಟಿ.ಕೆ. ಕುಮಾರಧರ, ಗೌರವಾಧ್ಯಕ್ಷ ಟಿ.ಎಸ್. ಜಗದೀಶ್, ಸೂರಿ ಕಾಕೇರಿ ಹಾಜರಿದ್ದರು.