ಮಡಿಕೇರಿ, ಜು. ೨೨: ೨೦೨೪-೨೫ನೇ ಸಾಲಿನ ೩೨ನೇ ರಾಜ್ಯಮಟ್ಟದ ಮುಕ್ತ ಕೆಸರು ಗದ್ದೆ ಕ್ರೀಡಾಕೂಟ ಮತ್ತು ಆಟೋಟ ಸ್ಪರ್ಧೆಗಳು ಆ.೧೦ ರಂದು ಕಗ್ಗೋಡ್ಲು ಗ್ರಾಮದ ದಿ.ಸಿ.ಡಿ.ದೇವಯ್ಯ ಅವರ ಗದ್ದೆಯಲ್ಲಿ ನಡೆಯಲಿದೆ ಎಂದು ಕೊಡಗು ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷ ಪಿ.ಪಿ.ಸುಕುಮಾರ್ ಹಾಗೂ ಮಡಿಕೇರಿ ತಾಲೂಕು ಅಧ್ಯಕ್ಷ ಬಾಳಾಡಿ ದಿಲೀಪ್ ಕುಮಾರ್ ತಿಳಿಸಿದ್ದಾರೆ.

ಕೊಡಗು ಜಿಲ್ಲಾ ಪಂಚಾಯತ್, ಜಿಲ್ಲಾಡಳಿತ, ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಯೂತ್ ಹಾಸ್ಟೆಲ್ ಅಸೋಸಿಯೇಷನ್ ಆಫ್ ಇಂಡಿಯಾ (ಮಡಿಕೇರಿ ಘಟಕ), ಕೊಡಗು ಜಿಲ್ಲಾ ಯುವ ಒಕ್ಕೂಟ, ಮಡಿಕೇರಿ, ವೀರಾಜಪೇಟೆ ಮತ್ತು ಸೋಮವಾರಪೇಟೆ ತಾಲೂಕು ಯುವ ಒಕ್ಕೂಟ ಹಾಗೂ ಕಗ್ಗೋಡ್ಲು ಕಾವೇರಿ ಯುವಕ ಸಂಘದ ಸಂಯುಕ್ತಾಶ್ರಯದಲ್ಲಿ ಬೆಳಿಗ್ಗೆ ೯.೩೦ ರಿಂದ ಸ್ಪರ್ಧೆಗಳು ನಡೆಯಲಿವೆ.

ಸಾರ್ವಜನಿಕ ಪುರುಷ ಮತ್ತು ಮಹಿಳೆಯರ ಹಗ್ಗ ಜಗ್ಗಾಟ (೯ ಜನರ ತಂಡ), ಸಾರ್ವಜನಿಕ ಪುರುಷರ ವಾಲಿಬಾಲ್ (೪ ಜನರ ತಂಡ), ಸಾರ್ವಜನಿಕ ಮಹಿಳೆಯರಿಗೆ ಥ್ರೋಬಾಲ್ (೬ ಜನರ ತಂಡ), ಪ್ರೌಢಶಾಲಾ ಬಾಲಕಿಯರಿಗೆ ಥ್ರೋಬಾಲ್ ಪಂದ್ಯಾವಳಿ (೬ ಜನರ ತಂಡ), ಬಾಲಕರ ಹಗ್ಗಜಗ್ಗಾಟ ಪಂದ್ಯಾವಳಿ (೭ ಜನರ ತಂಡ) ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.

ಮಧ್ಯಾಹ್ನ ೧ ಗಂಟೆಗೆ ಕೆಸರು ಗದ್ದೆ ಓಟದ ಸ್ಪರ್ಧೆ ನಡೆಯಲಿದ್ದು, ಕಿರಿಯ ಪ್ರಾಥಮಿಕ ಶಾಲಾ ಬಾಲಕ, ಬಾಲಕಿಯರಿಗೆ ೫೦ಮೀ ಓಟ, ಹಿರಿಯರ ಪ್ರಾಥಮಿಕ ಶಾಲಾ ಬಾಲಕ, ಬಾಲಕಿಯರಿಗೆ ೧೦೦ಮೀ ಓಟ, ಪ್ರೌಢಶಾಲಾ ಬಾಲಕ, ಬಾಲಕಿಯರಿಗೆ ೨೦೦ ಮೀ. ಓಟ, ಪದವಿ ಪೂರ್ವ ಕಾಲೇಜು ಬಾಲಕ, ಬಾಲಕಿಯರಿಗೆ ೪೦೦ ಮೀ. ಓಟ, ಪದವಿ ಪೂರ್ವ ಕಾಲೇಜು, ಪದವಿ ಕಾಲೇಜು ಯುವಕ, ಯುವತಿಯರಿಗೆ, ಸಾರ್ವಜನಿಕ ಪುರುಷ ಹಾಗೂ ಮಹಿಳೆಯರಿಗೆ ೪೦೦ ಮೀ. ಓಟದ ಸ್ಪರ್ಧೆ ನಡೆಯಲಿದೆ. ಅಲ್ಲದೆ ದಂಪತಿಗಳಿಗೆ ಹಾಗೂ ಕಾರ್ಯಕ್ರಮದ ಆಯೋಜಕರಿಗೆ ೨೦೦ ಮೀ. ಓಟ, ಕಗ್ಗೋಡ್ಲು ಗ್ರಾಮಸ್ಥರಿಗೆ ಸಾಂಪ್ರದಾಯಿಕ ನಾಟಿ ಓಟ ನಡೆಯಲಿದ್ದು, ನಂತರ ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮ ಜರುಗಲಿದೆ.

ಆಸಕ್ತರು ಆ.೫ ರ ಅಪರಾಹ್ನ ೫ ಗಂಟೆಯೊಳಗೆ ತಂಡದ ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ. ಪ್ರಥಮ ಹಾಗೂ ದ್ವಿತೀಯ ಸ್ಥಾನ ಗಳಿಸುವ ತಂಡಗಳಿಗೆ ನಗದು ಹಾಗೂ ಪಾರಿತೋಷಕ ನೀಡಲಾಗುವುದು. ಓಟದ ಸ್ಪರ್ಧೆಗಳಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದವರಿಗೆ ಪಾರಿತೋಷಕ ಮತ್ತು ಪ್ರಶಂಸನಾ ಪತ್ರ ನೀಡಲಾಗುವುದು. ಪಂದ್ಯಾವಳಿಯ ನೋಂದಾವಣೆಗಾಗಿ ನವೀನ್ ದೇರಳ- ೯೭೪೦೪೦೪೫೨೦ (ಹಗ್ಗ ಜಗ್ಗಾಟ), ಕೆ.ಎಂ. ಮೋಹನ್- ೯೪೮೩೦೦೮೩೮೧ (ವಾಲಿಬಾಲ್), ಹೆಚ್ಚಿನ ಮಾಹಿತಿಗಾಗಿ ಪಿ.ಪಿ. ಸುಕುಮಾರ್-೯೪೮೧೨೧೩೯೨೦, ಬಾಳಾಡಿ ದಿಲೀಪ್-೮೬೧೮೫೬೮೧೭೩ ಸಂಪರ್ಕಿಸಬಹುದಾಗಿದೆ.