ಕಣಿವೆ, ಜು. ೨೩: ಕೂಡಿಗೆಯ ಕೃಷಿ ಫಾರಂ ಒಳಗಿರುವ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡದ ಅಡಿಪಾಯದಿಂದ ನೀರು ಜಿನುಗಿ ಹರಿದು ಆಸ್ಪತ್ರೆಯ ಮುಂಭಾಗದಲ್ಲಿ ನಿಲ್ಲುತ್ತಿದ್ದು ಆಸ್ಪತ್ರೆಯ ಪ್ರಶಾಂತ ಪರಿಸರಕ್ಕೆ ಧಕ್ಕೆಯಾಗುತ್ತಿದೆ.
ಸುಮಾರು ೩೦ ವರ್ಷಗಳ ಹಿಂದೆ ನಿರ್ಮಿಸಿದ ಇಲ್ಲಿನ ಆರೋಗ್ಯ ಕೇಂದ್ರದ ಕಟ್ಟಡ ಕಾಮಗಾರಿ ಅವೈಜ್ಞಾನಿಕವಾಗಿದ್ದು ಕಟ್ಟಡದ ಅಡಿಪಾಯದ ಒಳಗಿಂದ ಮಳೆಯ ನೀರು ಹರಿದು ಬರುತ್ತಿದ್ದು ಇಡೀ ಆಸ್ಪತ್ರೆಯ ಪರಿಸರ ಶೀತಕ್ಕೆ ತುತ್ತಾಗಿದೆ ಎಂದು ಕೂಡಿಗೆ ಗ್ರಾಮ ಪಂಚಾಯಿತಿ ಸದಸ್ಯ ಚಂದ್ರು ಮೂಡ್ಲಿಗೌಡ ಆರೋಪಿಸಿದ್ದಾರೆ. ಕೂಡಲೇ ಜಿಲ್ಲಾಡಳಿತದ ಅಧಿಕಾರಿಗಳು ಇದಕ್ಕೆ ಪರ್ಯಾಯ ಕ್ರಮ ಅನುಸರಿಸಬೇಕು ಎಂದು ಆಗ್ರಹಿಸಿದ್ದಾರೆ.
ಆಸ್ಪತ್ರೆಯ ಹಿಂಬದಿಯಲ್ಲಿ ಖಾಲಿ ಭೂ ಪ್ರದೇಶವಿದ್ದು ಮೇಲ್ಭಾಗದಿಂದ ಹರಿದು ಬರುವ ಮಳೆಯ ನೀರು ಆಸ್ಪತ್ರೆಯ ಕಟ್ಟಡದ ಒಳಗಡೆ ನುಗ್ಗುತ್ತಿದೆ.
ಕೂಡಲೇ ಆಸ್ಪತ್ರೆಯ ಸುತ್ತಲೂ ಮೂರ್ನಾಲ್ಕು ಅಡಿಗಳಷ್ಟು ಕಾಲುವೆ ತೆಗೆದು ಮಳೆಯ ನೀರು ಕಾಲುವೆಯಲ್ಲಿ ಹರಿಯುವಂತೆ ಮಾಡಿದಲ್ಲಿ ಆಸ್ಪತ್ರೆಯ ಕಟ್ಟಡಗಳ ಅಡಿಪಾಯದಲ್ಲಿ ಹರಿಯುವುದನ್ನು ತಡೆಯಬಹುದಾಗಿದೆ ಎಂದು ಚಂದ್ರು ಹೇಳಿದ್ದಾರೆ. ಕೂಡುಮಂಗಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಭಾಸ್ಕರ ನಾಯಕ್ ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದು, ಜಿಲ್ಲಾ ಆರೋಗ್ಯಾಧಿ ಕಾರಿಗಳು ಹಾಗೂ ಶಾಸಕರ ಗಮನಕ್ಕೆ ತರುವುದಾಗಿ ‘ಶಕ್ತಿ’ಗೆ ತಿಳಿಸಿದ್ದಾರೆ.