(ಕಾಯಪಂಡ ಶಶಿ ಸೋಮಯ್ಯ)
ಮಡಿಕೇರಿ, ಜು. ೨೨ : ಜುಲೈ ೨೬ ರಿಂದ ಪ್ಯಾರಿಸ್ನಲ್ಲಿ ಜಗತ್ತಿನ ಪ್ರತಿಷ್ಠಿತ ಕ್ರೀಡಾಕೂಟವಾದ ಒಲಂಪಿಕ್ಸ್ ಪಂದ್ಯಾವಳಿ ಆರಂಭಗೊಳ್ಳುತ್ತಿದೆ. ಜಾಗತಿಕ ಮಟ್ಟದ ಅತ್ಯಂತ ದೊಡ್ಡ ಹಾಗೂ ಭಾರೀ ಪ್ರಾಮುಖ್ಯತೆ ಹೊಂದಿರುವ ಒಲಂಪಿಕ್ಸ್ ಹಬ್ಬದಲ್ಲಿ ೧೯೭೨ ರಿಂದ ಈ ತನಕವೂ (೨೦೦೬ ಹೊರತುಪಡಿಸಿ) ಕ್ರೀಡಾ ಜಿಲ್ಲೆ ಖ್ಯಾತಿಯ ಕರ್ನಾಟಕದ ಪುಟ್ಟ ಜಿಲ್ಲೆ ಕೊಡಗಿನ ಒಂದಲ್ಲಾ ಒಬ್ಬರು ಕ್ರೀಡಾಪಟುಗಳು ಸತತವಾಗಿ ಪಾಲ್ಗೊಳ್ಳುತ್ತಾ ಬಂದಿರುವುದು ವಿಶೇಷ ಹೆಮ್ಮೆಯಾಗಿದೆ.
ಕೋವಿಡ್ ಕಾರಣದಿಂದಾಗಿ ೨೦೨೦ರ ಬದಲಾಗಿ ೨೦೨೧ರಲ್ಲಿ ಟೋಕಿಯೋದಲ್ಲಿ ಜರುಗಿದ ಕ್ರೀಡಾಕೂಟದಲ್ಲಿಯೂ ಕೊಡಗಿನ ಮೂವರ ಪ್ರಾತಿನಿಧ್ಯವಿತ್ತು. ಇದೀಗ ಪ್ಯಾರಿಸ್ ಒಲಂಪಿಕ್ಸ್ ೨೦೨೪ರಲ್ಲಿ ಕೊಡಗಿನವರಾದ ನಾಲ್ವರು ದೇಶವನ್ನು ಪ್ರತಿನಿಧಿಸುತ್ತಿರುವುದು ಕ್ರೀಡಾ ಜಿಲ್ಲೆ ಖ್ಯಾತಿಯ ಕೊಡಗಿನ ಕೀರ್ತಿಗೆ ಮತ್ತೊಂದು ಗರಿ ತಂದುಕೊಡುತ್ತಿದೆ.
ಕ್ರೀಡಾಪಟುಗಳಾಗಿ ಟೆನ್ನಿಸ್ನಲ್ಲಿ ಮಚ್ಚಂಡ ರೋಹನ್ ಬೋಪಣ್ಣ, ಬ್ಯಾಡ್ಮಿಂಟನ್ನಲ್ಲಿ ಪೊನ್ನಚೆಟ್ಟಿರ ಅಶ್ವಿನಿ ಪೊನ್ನಪ್ಪ (ತಾಮನೆ : ಮಾಚಿಮಂಡ) ಅಥ್ಲೆಟಿಕ್ಸ್ನಲ್ಲಿ ಮಾಚೆಟ್ಟಿರ ಆರ್. ಪೂವಮ್ಮ ಹಾಗೂ ಇವರುಗಳೊಂದಿಗೆ ಭಾರತ ಬಾಕ್ಸಿಂಗ್ ತಂಡದ ಹೆಡ್ ಕೋಚ್ ಆಗಿ ಚೇನಂಡ ವಿಶು ಕುಟ್ಟಪ್ಪ ಅವರುಗಳು ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ.
ಮೂರರ ಸಂಭ್ರಮ...
ವಿಶ್ವದ ಐದು ಖಂಡಗಳ ರಾಷ್ಟçಗಳ ನಡುವೆ ಪ್ರತಿ ನಾಲ್ಕು ವರ್ಷಕ್ಕೊಮ್ಮೆ ಜರುಗುವ ಮಹಾನ್ ಕ್ರೀಡಾ ಸಮರದಲ್ಲಿ ಒಂದು ರಾಷ್ಟçವನ್ನು ಪ್ರತಿನಿಧಿಸುವುದೆಂದರೆ ಅದು ನಿಜಕ್ಕೂ ಅತ್ಯುದ್ಭುತ ಸಾಧನೆ ಎನ್ನಬಹುದು. ಒಲಂಪಿಕ್ಸ್ನಲ್ಲಿ ಪಾಲ್ಗೊಳ್ಳುವ ಅವಕಾಶಕ್ಕಾಗಿ ಕ್ರೀಡಾಪಟುಗಳು ಹಾತೊರೆಯುತ್ತಿರುತ್ತಾರೆ.
(ಮೊದಲ ಪುಟದಿಂದ) ಇದೀಗ ೨೦೨೪ರ ಪ್ಯಾರಿಸ್ ಒಲಂಪಿಕ್ಸ್ನಲ್ಲಿ ಟೆನ್ನಿಸ್, ಬ್ಯಾಡ್ಮಿಂಟನ್ ಹಾಗೂ ಅಥ್ಲೆಟಿಕ್ಸ್ನಲ್ಲಿ ಪಾಲ್ಗೊಳ್ಳುತ್ತಿರುವ ರೋಹನ್ ಬೋಪಣ್ಣ, ಅಶ್ವಿನಿ ಪೊನ್ನಪ್ಪ ಹಾಗೂ ಎಂ.ಆರ್. ಪೂವಮ್ಮ ಅವರುಗಳಿಗೆ ಈ ಬಾರಿಯ ಕ್ರೀಡಾಕೂಟ ಮತ್ತೊಂದು ರೀತಿಯಲ್ಲಿ ಸ್ಮರಣೀಯವೂ ಆಗಲಿದೆ. ಏಕೆಂದರೆ ಈ ಮೂವರೂ ೩ನೇ ಬಾರಿಗೆ ಒಲಂಪಿಕ್ಸ್ ಸಂಗ್ರಾಮದಲ್ಲಿ ಪಾಲ್ಗೊಳ್ಳುತ್ತಿರುವ ಕೊಡಗಿನ ಮೂಲದ ಹೆಮ್ಮೆಯ ಕ್ರೀಡಾಪಟುಗಳಾಗಿ ಮಾನ್ಯತೆ ಪಡೆಯುತ್ತಿದ್ದಾರೆ.
ಈ ಹಿಂದೆ ಮನೆಯಪಂಡ ಎಂ. ಸೋಮಯ್ಯ ಅವರು ಹಾಕಿಯಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿರುವುದು (೧೯೮೦-೮೪ - ಹಾಗೂ ೮೮) ದಾಖಲೆಯಾಗಿದೆ. ಇನ್ನಿತರ ಒಲಂಪಿಯನ್ಗಳಾದ ಬಿ.ಪಿ. ಗೋವಿಂದ (೨), ಡಾ. ಎ.ಬಿ. ಸುಬ್ಬಯ್ಯ (೨), ಜಿ.ಜಿ. ಪ್ರಮೀಳಾ (೨), ಎಸ್.ವಿ. ಸುನಿಲ್ (೨), ವಿ.ಆರ್. ರಘುನಾಥ್ (೨), ಎಸ್.ಕೆ. ಉತ್ತಪ್ಪ (೨) ಒಲಂಪಿಕ್ಸ್ನಲ್ಲಿ ಪಾಲ್ಗೊಂಡಿದ್ದರು.
ಡಾ. ಎಂ.ಪಿ. ಗಣೇಶ್, ಸಿ.ಸಿ. ಮಾಚಯ್ಯ. ಬಿ.ಕೆ. ಸುಬ್ರಮಣಿ, ಅಶ್ವಿನಿ ನಾಚಪ್ಪ, ಸಿ.ಎಸ್. ಪೂಣಚ್ಚ, ಅರ್ಜುನ್ ಹಾಲಪ್ಪ, ನಿಕಿತ್ ತಿಮ್ಮಯ್ಯ, ಕೇಳಪಂಡ ಗಣಪತಿ ಅವರುಗಳು ತಲಾ ಒಂದು ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದಾರೆ. ಅಶ್ವಿನಿ ಹಾಗೂ ಪೂವಮ್ಮ ಮೂರನೆಯ ಒಲಂಪಿಕ್ಸ್ನಲ್ಲಿ ಅವಕಾಶ ಪಡೆದಿರುವವರಾಗಿದ್ದಾರೆ. ಈ ಹಿಂದೆ ರೋಹನ್ (೨೦೧೨) ಲಂಡನ್ - ೨೦೧೬ ರಿಯೋ) ಅಶ್ವಿನಿ (೨೦೧೨ ಲಂಡನ್ - ೨೦೧೬ ರಿಯೋ) ಹಾಗೂ ಪೂವಮ್ಮ (೨೦೦೮ ಬೀಜಿಂಗ್ - ೨೦೧೬ ರಿಯೋ) ಒಲಂಪಿಕ್ಸ್ನಲ್ಲಿ ಭಾಗವಹಿಸಿದ್ದರು.
೨೦೨೧ರ ಟೋಕಿಯೋ ಒಲಂಪಿಕ್ಸ್ನಲ್ಲಿ ಭಾರತ ಬಾಕ್ಸಿಂಗ್ ತಂಡದ ಮುಖ್ಯ ಕೋಚ್ ಆಗಿದ್ದ ಚೇನಂಡ ವಿಶು ಕುಟ್ಟಪ್ಪ ಅವರು ಇದೀಗ ಎರಡನೇ ಬಾರಿಗೂ ಅವಕಾಶ ಪಡೆದಿದ್ದಾರೆ. ೨೦೨೧ರಲ್ಲಿ ಭಾರತ ಮಹಿಳಾ ಹಾಕಿ ತಂಡದ ಸಹಾಯಕ ಕೋಚ್ ಆಗಿ ಬಿ.ಎಸ್. ಅಂಕಿತಾ ಸುರೇಶ್ ಕೂಡ ಪಾಲ್ಗೊಂಡಿದ್ದರು. ಆದರೆ ಈ ಬಾರಿ ಭಾರತ ಮಹಿಳಾ ಹಾಕಿ ತಂಡ ಅರ್ಹತೆ ಪಡೆಯುವಲ್ಲಿ ವಿಫಲವಾಗಿದೆ. ೨೦೨೧ರಲ್ಲಿ ಸೇಯ್ಲಿಂಗ್ನಲ್ಲಿ ಭಾಗವಹಿಸಿದ್ದ ಗಣಪತಿ ಅವರು ತಮ್ಮ ಜೋಡಿ ನಿವೃತ್ತಿ ಪಡೆದಿರುವ ಕಾರಣದಿಂದಾಗಿ ಈ ಬಾರಿ ಅವಕಾಶವಂಚಿತರಾಗಿದ್ದಾರೆ.
ಏನೇ ಆದರೂ ಪುಟ್ಟ ಜಿಲ್ಲೆಯೊಂದರ ಮೂಲದಿಂದ ಮಹಾನ್ ಕ್ರೀಡಾಕೂಟದಲ್ಲಿ ನಾಲ್ವರ ಪಾಲ್ಗೊಳ್ಳುವಿಕೆ ನಿಜಕ್ಕೂ ಹೆಮ್ಮೆಯ ವಿಚಾರವಾಗಿದ್ದು, ಎಲ್ಲರಿಗೂ ಶುಭಕಾಮನೆಗಳು.