ವೀರಾಜಪೇಟೆ, ಜು. ೨೩: ವೀರಾಜಪೇಟೆ ಪಟ್ಟಣದ ಎಫ್.ಎಂ.ಸಿ. ರಸ್ತೆಯಲ್ಲಿ ಕಟ್ಟಡ ಶಿಥಿಲಾವಸ್ಥೆಯಲ್ಲಿದ್ದು, ಹಳೆಯ ಕಟ್ಟಡ ಯಾವ ಸಂದರ್ಭ ದಲ್ಲಾದರೂ ಧರೆಗುರುಳುವ ಸಾಧ್ಯತೆ ಇದೆ. ಕೂಡಲೇ ಶಿಥಿಲಾವಸ್ಥೆ ಯಲ್ಲಿರುವ ಕಟ್ಟಡವನ್ನು ತೆರವುಗೊಳಿಸುವಂತೆ ಪಟ್ಟಣದ ನಾಗರಿಕರು ವೀರಾಜಪೇಟೆ ಡಿ.ವೈ.ಎಸ್.ಪಿ. ಅವರಿಗೆ ದೂರು ಸಲ್ಲಿಸಿದ್ದಾರೆ.
ಪಟ್ಟಣದ ನಾಗರಿಕರು ನೀಡಿದ ದೂರಿನ ಅನ್ವಯ ನಗರ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಕಟ್ಟಡ ಮಾಲೀಕ ಕೆ.ಡಿ. ಗಣಪತಿ ಅವರನ್ನು ಕರೆಸಿ ವಿಚಾರಣೆ ನಡೆಸಿ ಕೂಡಲೇ ಕಟ್ಟಡ ತೆರವು ಗೊಳಿಸುವಂತೆ ಮುಂದಿನ ಕ್ರಮಕ್ಕಾಗಿ ಪುರಸಭೆಗೆ ಮನವಿ ಸಲ್ಲಿಸಿದ್ದಾರೆ.
ಈ ವಿಚಾರದಲ್ಲಿ ಕಟ್ಟಡ ಮಾಲೀಕರಾದ ಹಾತೂರು ಗ್ರಾಮದ ಕೆ.ಡಿ. ಗಣಪತಿ ಅವರು ಮಾಹಿತಿ ನೀಡಿ, ಹಳೆಯ ಕಟ್ಟಡ ಶಿಥಿಲಾವಸ್ಥೆಗೆ ಬಂದ ಕಾರಣ ಅದನ್ನು ಕೆಡವಲು ೨೦೨೩ ಡಿಸೆಂಬರ್ ಸ್ಥಳೀಯ ಪುರಸಭೆಗೆ ಮನವಿ ಸಲ್ಲಿಸಲಾಗಿದೆ. ಪುರಸಭೆ ನಮ್ಮ ಮನವಿಯನ್ನು ಪುರಸ್ಕರಿಸಿಲ್ಲ ಹಾಗೂ ತಿರಸ್ಕರಿಸಿಲ್ಲ. ಕಟ್ಟಡದ ಬಗ್ಗೆ ಎ.ಪಿ.ಸಿ.ಎಂ.ಎಸ್. ಅವರ ತಕರಾರು ಇದೆ ಎಂದು ಪುರಸಭೆಯ ಕೆಲವು ಸದಸ್ಯರಿಂದ ತಿಳಿದು ಬಂದಿದೆ ಎಂದರು.
ಪುರಸಭೆ ಅನುಮತಿ ನೀಡುತ್ತಿಲ್ಲ ಎಂದು ೦೫.೦೭.೨೪ ರಂದು ವೀರಾಜಪೇಟೆ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆ ಎಂದು ವಿವರಿಸಿದರು.