ಚೆಯ್ಯಂಡಾಣೆ, ಜು. ೨೩: ಕಾಕೋಟುಪರಂಬು ಗ್ರಾಮ ಪಂಚಾಯಿತಿಗೆ ಒಳಪಟ್ಟ ಕಡಂಗಮುರೂರು ಗ್ರಾಮದ ಮೊಯ್ಯದ್ದೀನ್ ಜುಮಾಮಸೀದಿ, ಅಂಗನವಾಡಿ ಹಾಗೂ ವಿಜಯ ಪ್ರೌಢಶಾಲೆಯ ಸಮೀಪದ ನಾಪೋಕ್ಲು, ವೀರಾಜಪೇಟೆ ಮುಖ್ಯ ರಸ್ತೆಯಲ್ಲಿ ಚರಂಡಿ ಸ್ವಚ್ಛಗೊಳಿಸದೆ ವರ್ಷಗಳೇ ಕಳೆದಿತ್ತು, ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಚರಂಡಿಯಲ್ಲಿ ಹರಿಯಬೇಕಾದ ನೀರು ರಸ್ತೆಯಲ್ಲಿ ತುಂಬಿ ಹರಿಯುತ್ತಿದೆ ಎಂಬ ವರದಿ ‘ಶಕ್ತಿ’ಯಲ್ಲಿ ಪ್ರಕಟಗೊಂಡ ಹಿನ್ನೆಲೆಯಲ್ಲಿ ಕಾಕೋಟುಪರಂಬು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಂಜುಳಾ ಹಾಗೂ ಲೋಕೋಪಯೋಗಿ ಇಲಾಖೆಯ ಅಧಿಕಾರಿ (ಎಡಬ್ಲ್ಯೂ) ಲಿಂಗರಾಜು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಗ್ರಾಮಸ್ಥರಾದ ರಂಜಿ ಪೂಣಚ್ಚ ಮಾತನಾಡಿ, ಕಳೆದ ೧೦ ವರ್ಷದ ಹಿಂದೆ ಉದ್ಯೋಗಖಾತ್ರಿ ಯೋಜನೆಯಲ್ಲಿ ಅವೈಜ್ಞಾನಿಕ ಕಾಮಗಾರಿ ನಡೆದಿದೆ. ಕಾಕೋಟುಪರಂಬು ವ್ಯಾಪ್ತಿಗೆ ಕಸ ವಿಲೇವಾರಿ ಘಟಕ ಇಲ್ಲ ಎಂದು ಹೇಳಿದರು. ಅಭಿವೃದ್ಧಿ ಅಧಿಕಾರಿ ಮಂಜುಳ ಮಾತನಾಡಿ, ಗ್ರಾಮಸ್ಥರ ಸಮಸ್ಯೆಗಳಿಗೆ ಕೂಡಲೇ ಪರಿಹರಿಸುವ ಭರವಸೆ ನೀಡಿದರು.

ಲೋಕೋಪಯೋಗಿ ಇಲಾಖೆಯ ಅಧಿಕಾರಿ (ಎಡಬ್ಲೂö್ಯ) ಲಿಂಗರಾಜು ಮಾತನಾಡಿ, ಚರಂಡಿ ವ್ಯವಸ್ಥೆ ಹಾಗೂ ರಸ್ತೆಯಲ್ಲಿ ನೀರು ನಿಲ್ಲುತ್ತಿರುವುದಕ್ಕೆ ಶಾಶ್ವತ ಪರಿಹಾರಕ್ಕೆ ಗ್ರಾ.ಪಂ.ಯೊAದಿಗೆ ಚರ್ಚಿಸಲಾಗುವುದು. ಈ ಚರಂಡಿ ಲೋಕೋಪಯೋಗಿ ಇಲಾಖೆಗೆ ಒಳಪಟ್ಟಿಲ್ಲ ಇದು ಜಿಲ್ಲಾ ಪಂಚಾಯಿತಿ ವ್ಯಾಪ್ತಿ, ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವಂತದ್ದು, ಇದನ್ನು ಮರು ನಿರ್ಮಾಣ ಮಾಡಿ ದೊಡ್ಡದು ಮಾಡಿದರೆ ಸಮಸ್ಯೆ ಬಗೆ ಹರಿಯಲಿದೆ, ಖುದ್ದು ಗ್ರಾಮ ಪಂಚಾಯಿತಿ ಸರಿಪಡಿಸಬೇಕು ಎಂದರು.

ಈ ಸಂದರ್ಭ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಹಾಗೂ ಮೊಯ್ಯದ್ದೀನ್ ಜುಮಾ ಮಸೀದಿಯ ಅಧ್ಯಕ್ಷ ಕುಂಞ ಅಬ್ದುಲ್ಲಾ, ಗ್ರಾ.ಪಂ. ಸದಸ್ಯ ಸುಗುಣ, ಗ್ರಾಮಸ್ಥ ಷಂಶುದ್ದೀನ್, ಮೊಹಮ್ಮದ್ ಕುಂಞ, ಉಬೈದ್ ಆಶಿಫ್, ರಜಾಕ್, ಸಿದ್ದಿಕ್, ಜುನೈದ್ ಮತಿತ್ತರು ಇದ್ದರು.